Left parties in india : ಸಿಪಿಐ(ಎಂ)- ಸವಾಲಿನಿಂದ ಕೂಡಿರುವ ಸಂದರ್ಭ ….

ಫ್ಯಾಸಿಸಂ ಅನ್ನು ಸೋಲಿಸುವುದಕ್ಕಾಗಿ ದೇಶದ ಎಲ್ಲಾ ಪ್ರಜಾತಾಂತ್ರಿಕ ಮತ್ತು ಜಾತ್ಯತೀತವಾದಿ ಶಕ್ತಿಗಳನ್ನು ಒಂದುಗೂಡಿಸುವುವಲ್ಲಿ ಸಿಪಿಐ (ಎಂ) ಯಶಸ್ವಿಯಾಗುವುದೇ?

ಇದೇ ಏಪ್ರಿಲ್ ೧೮ರಿಂದ ೨೨ ರ ತನಕ ಹೈದರಾಬಾದಿನಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)- ಸಿಪಿಎಂ- ಪಕ್ಷದ ೨೨ ನೇ ಸಮ್ಮೇಳನದಲ್ಲಿ ೨೦೧೫ ಮತ್ತು ೨೦೧೨ರ ಸಮ್ಮೇಳನದಲ್ಲಿ ಕಂಡಿರದಂಥ ಸ್ಥೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಪ್ರದರ್ಶನಗೊಂಡವು. ಈ ವರ್ಷಕ್ಕೆ  ಮಾರ್ಕ್ಸ್ ಅವರ ಮೇರುಕೃತಿ ’ದಾಸ್ ಕ್ಯಾಪಿಟಲ್ (ಬಂಡವಾಳ) ಪ್ರಕಟವಾಗಿ ೧೫೦ ವರ್ಷವಾಗುತ್ತದೆ. ಅದರ ಮೊದಲ ಆವೃತ್ತಿ ಪ್ರಕಟವಾದದ್ದು ೧೮೬೭ರ ಸೆಪ್ಟೆಂಬರ್‌ನಲ್ಲಿ. ಮತ್ತು ೧೮೧೮ರ ಮೇ ೫ರಂದು ಹುಟ್ಟಿದ ಮಾರ್ಕ್ಸ್‌ಗೆ ಈ ವರ್ಷಕ್ಕೆ ೨೦೦ ವರ್ಷಗಳು ತುಂಬುತ್ತವೆ. ಹೀಗಾಗಿ  ಮಾರ್ಕ್ಸ್ ಅವರ ಚಿತ್ರ ಮತ್ತು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಹಾಗೂ ದಾಸ್ ಕ್ಯಾಪಿಟಲ್ ಮುಖಪುಟಗಳ ಬೃಹತ್ ಚಿತ್ರಗಳು ಸಿಪಿಎಂ ಪಕ್ಷದ ಈ ಸಮ್ಮೇಳನದ ವೇದಿಕೆಗೆ ಹಿನ್ನೆಲೆ ಒದಗಿಸಿದ್ದವು. ಇವೆಲ್ಲವೂ ಒಟ್ಟು ಸೇರಿ ಸಿಪಿಎಂ ಪಕ್ಷವು ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಬಹುದೆಂಬ ಭರವಸೆಯನ್ನೂ ಹುಟ್ಟಿಸುತ್ತಿತ್ತು. ವೇದಿಕೆಯ ಹಿನ್ನೆಲೆಯಲ್ಲಿದ್ದ ಆ ಹಿರಿ ಮನುಷ್ಯ ಮಾರ್ಕ್ಸ್ ತನ್ನ ಚಿಂತನೆಗಳ ಕ್ರಾಂತಿಕಾರಿ ಸಾರವನ್ನು ತೆಗೆದು ಹಾಕಿದರೆ ಅದರ ಬಾಳಿಕೆಯ ಶಕ್ತಿಯನ್ನು ತೆಗೆದಂತೆ ಎಂದು ತನ್ನ ಈ ಯುವ ಸಂಗಾತಿಗಳಿಗೆ ಎಚ್ಚರಿಸುತ್ತಿದ್ದಿರಬಹುದು. ಆದರೆ ಈ ವಿವೇಕದ ಮಾತಿಗೆ ಅವರು ಕಿವಿಗೊಡುವರೇ?

ಒಂದೊಮ್ಮೆ ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ಮತ್ತೊಂದು ಅವಧಿಗೆ ಗೆದ್ದುಬಂದರೆ ಈ ದೇಶವು ಅರೆ-ಫ್ಯಾಸಿಸಂಗೆ ಗುರಿಯಾಗಬಹುದಾದ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಇಂಥಾ ಸಂದರ್ಭದಲ್ಲಿ ಎಲ್ಲಾ ಜಾತ್ಯತೀತ ಮತ್ತು ಪ್ರಜಾತಾಂತ್ರಿಕ ಶಕ್ತಿಗಳನ್ನು ಒಂದುಗೂಡಿಸಿ ಬಿಜೆಪಿ ಮತ್ತದರ ಪರಿವಾರವನ್ನು ಸೋಲಿಸುವ ತೀರ್ಮಾನದ ಜೊತೆಜೊತೆಗೆ ಕಾಂಗ್ರೆಸ್ ಪಕ್ಷದ ಜೊತೆಗೆ ಒಂದು ಕಾರ್ಯತಾಂತ್ರಿಕ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದೆಂದು ಸಿಪಿಎಂ ತೀರ್ಮಾನಿಸಿದೆ. ಪಕ್ಷದ ಸಮ್ಮೇಳನದಲ್ಲಿ ಮಂಡಿಸಲಾದ ಕರಡು ರಾಜಕೀಯ ನಿರ್ಣಯದೊಳಗಿನ ರಾಜಕೀಯ ನೀತಿಯ ಉದ್ದಕ್ಕೂ ಐಕ್ಯ ಕಾರ್ಯಾಚರಣೆ..ಐಕ್ಯ ಹೋರಾಟ…ಜಂಟಿ ಚಳವಳಿಗಳು..ಎಲ್ಲಾ ಜಾತ್ಯತೀತ ಮತ್ತು ಪ್ರಜಾತಾಂತ್ರಿಕ ಶಕ್ತಿಗಳ ಗರಿಷ್ಠ ಒಗ್ಗೂಡಿಕೆ..ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ತಳಮಟ್ಟದಲ್ಲಿ ಜನರ ಐಕ್ಯತೆಯನ್ನು ಸಾಧಿಸುವುದು…ಪ್ರಜಾತಾಂತ್ರಿಕ ಹಕ್ಕುಗಳ ಮೇಲೆ ನಡೆದಿರುವ ನಿರಂಕುಶ ದಾಳಿಗಳನ್ನು ಹಿಮ್ಮೆಟ್ಟಿಸಲು ಬೇಕಾದ ವಿಶಾಲ ಐಕ್ಯತೆಯನ್ನು ಬೆಳೆಸುವುದು..ಮತ್ತು ಬಿಜೆಪಿ ವಿರೋಧಿ ಮತಗಳನ್ನು ಅತಿ ಹೆಚ್ಚಿನ ಮಟ್ಟದಲ್ಲಿ ಒಂದೆಡೆ ಒಗ್ಗೂಡಿಸಲು ಬೇಕಾದ ಚುನಾವಣಾ ಕಾರ್ಯತಂತ್ರವನ್ನು ರೂಪಿಸಬೇಕೆಂಬ ಪದಪುಂಜಗಳು ಪದೇಪದೇ ಪ್ರಸ್ತಾಪಿಸಲ್ಪಟ್ಟಿದ್ದವು.

ಆದರೆ ಮಾಧ್ಯಮಗಳು ಸಮ್ಮೇಳನದ ನಡಾವಳಿಗಳನ್ನು ಎರಡು ಬಣಗಳ ನಡುವೆ ನಡೆಯುತ್ತಿದ್ದ ಗುಂಪು ರಾಜಕೀಯದಂತೆ ಚಿತ್ರಿಸಿದವು. ಅವುಗಳ ಪ್ರಕಾರ ಸಿಪಿಎಂ ಪಕ್ಷದೊಳಗಡೆ, ಬರಲಿರುವ ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಒಂದು ಬಹಿರಂಗ ಹೊಂದಾಣಿಕೆ ಅಥವಾ ಚುನಾವಣಾ ಮೈತ್ರಿಯನ್ನು ಮಾಡಿಕೊಳ್ಳಬೇಕೆಂದು ಪ್ರತಿಪಾದಿಸುತ್ತಿರುವ ಹಾಲಿ ಕಾರ್ಯದರ್ಶಿ ಸೀತಾರಾಂ ಯೆಚೂರಿ ಬಣಕ್ಕೂ ಮತ್ತು ಕಾಂಗ್ರೆಸ್ ಜೊತೆಗೆ ಅಂಥಾ ಯಾವ ಹೊಂದಾಣಿಕೆಯನ್ನಾಗಲೀ, ಮೈತಿಯನ್ನಾಗಲೀ ಮಾಡಿಕೊಳ್ಳಬಾರದೆಂದು ಪ್ರತಿಪಾದಿಸುತ್ತಿರುವ ಮಾಜಿ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬಣಕ್ಕೂ ನಡುವೆ ಗುಂಪು ರಾಜಕೀಯ ನಡೆಯುತ್ತಿದೆ. ಹೀಗಾಗಿ ಮಾಧ್ಯಮಗಳು ಪ್ರಕಾಶ್ ಕಾರಟ್‌ಗೆ ಕಾಂಗ್ರೆಸ್ ವಿರೋಧಿ ಬಣದ ನ್ನಾಯಕತ್ವ ಸ್ಥಾನವನ್ನು ದಯಪಾಲಿಸಿದ್ದವು. ಆದರೆ ಇದರಲ್ಲಿ ಕಿಂಚಿತ್ತೂ ಹುರುಳಿಲ್ಲ. ಕಾರಟ್ ಅವರು ಕಾಂಗ್ರೆಸ್‌ನೊಂದಿಗೆ ಯಾವುದೇ ಚುನಾವಣಾ ಪೂರ್ವ ಹೊಂದಾಣಿಕೆ ಅಥವಾ ಮೈತ್ರಿಯನ್ನು ಮಾತ್ರ ವಿರೋಧಿಸುತ್ತಿದ್ದರು. ಆದರೆ ಚುನಾವಣೋತ್ತರ ಮೈತ್ರಿಯ ಬಗ್ಗೆ ಅವರು ಮುಕ್ತವಾಗಿದ್ದಾರೆ. ಏಕೆಂದರೆ ಅವರು ಪಕ್ಷದ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೇ ೨೦೦೪ರಲ್ಲಿ ಸಿಪಿಎಂ ಪಕ್ಷವು ಕಾಂಗ್ರೆಸ್ ಜೊತೆ ಅಂಥಾ ಒಂದು ಮೈತ್ರಿಯನ್ನು ಮಾಡಿಕೊಂಡಿತ್ತು. ಅಷ್ಟು ಮಾತ್ರವಲ್ಲದೆ ಯಾವುದೇ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆಯೂ ಅವರು ಮುಕ್ತರಾಗಿದ್ದಾರೆ. ಹೀಗಾಗಿಯೇ ಇದೇ ಮೇ ೧೨ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತವರ ಮಿತ್ರಕೂಟದ ಅಭ್ಯರ್ಥಿಯನ್ನು ಸೋಲಿಸಲು ಯಾವ ಅಭ್ಯರ್ಥಿಗೆ ಸಾಮರ್ಥ್ಯವಿದೆಯೋ ಅಂಥ ಅಭ್ಯರ್ಥಿಗೆ ಮತ ಚಲಾಯಿಸಲು ಕರೆ ನೀಡುವ ಮೂಲಕ ಹಿಂದಿನ ಕೇಂದ್ರ ಸಮಿತಿ ಮೇಲಿನ ತತ್ವವನ್ನು ಆಚರಣೆಗೂ ಇಳಿಸಿದಂತಿದೆ.

ಮೋದಿಯವರ ಆಳ್ವಿಕೆಯಲ್ಲಿ ನವ ಉದಾರವಾದಿ ಬಂಡವಾಳಶಾಹಿ ಶೋಷಣೆಯು ತೀವ್ರಗೊಂಡಿದೆಯೆಂದೂ ಮತ್ತು ಸಂವಿಧಾನದ ಜಾತ್ಯತೀತ ಮತ್ತು ಪ್ರಜಾತಾಂತ್ರಿಕ ಚೌಕಟ್ಟು ಕುಸಿಯತೊಡಗಿದೆಯೆಂದೂ ಸಿಪಿಎಂ ಸಮ್ಮೇಳನವು ಸರಿಯಾಗಿಯೇ ವಿಶ್ಲೇಷಿಸಿದೆ. ಇದರ ಜೊತೆಗೆ ಭಾರತವು ಅಮೆರಿಕ ಸಾಮ್ರಾಜ್ಯಶಾಹಿಯ ಕಿರಿಯ ಪಾಲುದಾರನಾಗಿಬಿಟ್ಟಿದೆ. ಆದರೆ ಭಾರತದಲ್ಲಿ ಕಾಂಗ್ರೆಸ್ ಪಕ್ಷವೇ ನವ ಉದಾರವಾದಿ ಅಜೆಂಡಾಗಳ ಹರಿಕಾರ ನಾಗಿದ್ದು  ಅಮೆರಿಕದ ಜೊತೆ ವ್ಯೂಹಾತ್ಮಕ ಮೈತ್ರಿ ಗೆ ಮೊದಲು ಮುಂದಾಗಿದ್ದೂ ಸಹ ಕಾಂಗ್ರೆಸ್ಸೇ. ಪ್ರಮುಖ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಈಗಲೂ ಸಹ ಕಾಂಗ್ರೆಸ್ ಪಕ್ಷ ಆ ನೀತಿಗಳ ಪ್ರತಿಪಾದನೆಯನ್ನು ಮುಂದುವರೆಸುತ್ತಲೇ ಇದೆ. ಆದರೆ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಸಿಪಿಎಮ್ ಪಕ್ಷ ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ ಜೊತೆ ಸಹಕರಿಸಲು ಸಿದ್ಧವಾಗಿದೆ. ಆದರೆ ಇದೇ ಕಾಂಗ್ರೆಸ್ ಪಕ್ಷವೇ ಕೇರಳದಲ್ಲಿ ಅಧಿಕಾರದಲ್ಲಿರುವ ಎಡರಂಗದ ಸರ್ಕಾರದ ವಿರೋಧಿ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ನ ಮುಂಚೂಣಿಯಲ್ಲಿದ್ದು ಸಿಪಿಎಂ ನೇತೃತ್ವದ ಎಡರಂಗವನ್ನು  ವಿರೋಧಿಸುವಲ್ಲಿ ಬಿಜೆಪಿಯೊಡನೆ ಸ್ಪರ್ಧಿಸುತ್ತಿದೆ. ಇನ್ನೂ ಪ್ರಾದೇಶಿಕ ಪಕ್ಷಗಳಂತೂ ಕೇಂದ್ರದಲ್ಲಿ ಅಧಿಕಾರ ನಡೆಸುವ ಮೈತ್ರಿಕೂಟದ ಸದಸ್ಯನಾಗುವುದಕ್ಕಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಯಾರ ಜೊತೆಗಾದರೂ ಹೊಂದಾಣಿಕೆ ಮಾಡಿಕೊಳ್ಳುವಷ್ಟು ಅವಕಾಶವಾದಿಗಳಾಗಿವೆ. ಆದರೆ ಎಲ್ಲಿಯವರೆಗೆ ಅವು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿರುವುದಿಲ್ಲವೋ ಅಲ್ಲಿಯವರೆಗೆ ಅವನ್ನು ಜಾತ್ಯತೀತ ಮತ್ತು ಪ್ರಜಾತಾಂತ್ರಿಕಶಕ್ತಿಗಳ ಪಟ್ಟಿಯಲ್ಲೇ ಸಿಪಿಎಂ ಸೇರಿಸಿಕೊಂಡಿದೆ.

ಸಿಪಿಎಂ ಪಕ್ಷ ಈ ಬಗೆಯ ಹೊಂದಾಣಿಕೆ ಅಥವಾ ಮೈತ್ರಿಗಳನ್ನು ಮಾಡಿಕೊಂಡಿರುವುದು ಹೊಸದೇನಲ್ಲ. ೧೯೯೧-೨೦೦೮ರ ಅವಧಿಯಲ್ಲಿ ಬಿಜೆಪಿ ಪಕ್ಷವನ್ನೂ ಮತ್ತದರ ಗುರು ಆರೆಸ್ಸನ್ನು ಅಧಿಕಾರದಿಂದ ದೂರವಿಡುವ ಕಾರಣಕ್ಕಾಗಿ ಇಂಥಾ ಕಾರ್ಯತಂತ್ರಗಳನ್ನು ಆಗಾಗ ಅಳವಡಿಸುತ್ತಲೇ ಬಂದಿದೆ. ಆದರೆ ಬಿಜೆಪಿಯು ತನ್ನ ಸ್ವಂತ ಶಕ್ತಿಯಿಂದಲೇ ೨೦೧೪ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬಿಟ್ಟಿತು. ಅಷ್ಟು ಮಾತ್ರವಲ್ಲ ಭಾರತದ ೨೯ ರಾಜ್ಯಗಳಲ್ಲಿ ೨೧ ರಾಜ್ಯಗಳಲ್ಲಿ ತನ್ನದೇ ಸ್ವಂತ ಬಲದಿಂದ ಅಥವಾ ಪ್ರಾದೇಶಿಕ ಪಕ್ಷಗಳೊಂದಿಗಿನ ಮೈತ್ರಿಕೂಟದ ಭಾಗವಾಗಿ ಅಧಿಕಾರವನ್ನು ಹಿಡಿದುಕೊಂಡಿದೆ. ಲೋಕಸಭೆಯಲ್ಲಿ ಸಿಪಿಎಂ ಗೆ ಕೇವಲ ೯ ಸ್ಥಾನಗಳನ್ನು ಮಾತ್ರ ಹೊಂದಿದ್ದರೆ,  ಸಿಪಿಐ ಗೆ ಕೇವಲ ಒಂದು ಸ್ಥಾನಬಲವಿದೆ. ಬಹಳ ಕಾಲದಿಂದ ತನ್ನ ಗಟ್ಟಿನೆಲೆಯಾಗಿದ್ದ ಪ. ಬಂಗಾಳ ಮತ್ತು ತ್ರಿಪುರಾಗಳಲ್ಲಿ ಪಕ್ಷವು ಇತ್ತೀಚೆಗೆ ಹೀನಾಯವಾದ ಸೋಲನ್ನು ಕಂಡಿದೆ. ೨೦೧೬ರ ಪ. ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಪಕ್ಷವು ತನ್ನ ಪ್ರಧಾನ ಎದುರಾಳಿಯಾದ ತೃಣಮೂಲ ಕಾಂಗ್ರೆಸ್ ವಿರುದ್ಧ ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡರೂ ಚುನಾವಣೆಯಲ್ಲಿ ಸೋಲನ್ನುಂಡಿತು. ಒಂದು ಎಡ ಸರ್ಕಾರ ದೊಡ್ಡ ದೊಡ್ಡ ಕಾರ್ಪೊರೇಟ್ ಕುಳಗಳ ಯೋಜನೆಗಳಿಗಾಗಿ ಪೊಲೀಸ್ ದಮನವನ್ನು  ಮತ್ತು ತನ್ನ ಕಾರ್ಯಕರ್ತರ ಮೂಲಕ ಹಿಂಸಾಚಾರವನ್ನು ನಡೆಸಿ ತಮ್ಮ ಜಮೀನನ್ನು ಕಬಳಿಸಿಕೊಂಡಿದ್ದನ್ನು ಪ.ಬಂಗಾಳದ ಮತದಾರರು ಮರೆತಂತಿಲ್ಲ. ಮೇಲಾಗಿ ಭಾರತದ ಭಾಗದಲ್ಲಿರುವ  ಕಾಶ್ಮೀರzಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ (ಎಎಫ್‌ಎಸ್‌ಪಿಎ)ಯ ಬಳಕೆಯನ್ನು ವಿರೋಧಿಸುವ ಸಿಪಿಎಮ್ ಪಕ್ಷ ತ್ರಿಪುರಾದಲ್ಲಿ ಮಾತ್ರ ತಾನು ಅಧಿಕಾರದಲ್ಲಿದ್ದಾಗ ಅದೇ ಕಾಯಿದೆಯನ್ನು ಬಳಸಿತ್ತು. ತ್ರಿಪುರಾದಲ್ಲಿನ ಜನಾಂಗೀಯ-ರಾಷ್ಟ್ರೀಯವಾದಿ ದಂಗೆಯನ್ನು ಸೇನೆಯು ದಮನ ಮಾಡಿದ ಎಷ್ಟೋ ಕಾಲದ ನಂತರ ೨೦೧೫ರ ಮೇ ಯಲ್ಲಷ್ಟೇ ಆ ಕಾಯಿದೆಯನ್ನು ಹಿಂತೆದುಕೊಂಡಿತು.

ಈ ಸಮ್ಮೇಳನದಲ್ಲಿ  ಸಿಪಿಎಂ ಪಕ್ಷ ಮತ್ತಷು ಆತ್ಮ ವಿಶ್ವಾಸ ಹಾಗೂ ಹೊಸ ಹುಮ್ಮಸ್ಸನ್ನು ಪಡೆದುಕೊಂಡಿದೆ. ಆದರೆ ಅರೆ-ಫ್ಯಾಸೀವಾದದ ಬಗೆಗಿನ ಆತಂಕವು ಎಷ್ಟೇ ನೈಜವಾದದ್ದಾಗಿದ್ದರೂ ಸಿಪಿಎಂ ಪಕ್ಷವು ಮಾರ್ಕ್ಸ್‌ವಾದ ಕ್ರಾಂತಿಕಾರಿ ಸಾರಕ್ಕೆ ಅನುಗುಣವಾದ ಕ್ರಾಂತಿಕಾರಿ ಪಥವನ್ನು ಅನುಸರಿಸುವ ಸಾಧ್ಯತೆಯಂತೂ ಈ ಸದ್ಯಕ್ಕೆ ಕಾಣಬರುತ್ತಿಲ್ಲ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com