ಕರ್ನಾಟದಲ್ಲಿ ಬಿಜೆಪಿ ಅಲೆ ಅಲ್ಲ, ಬಿರುಗಾಳಿಯೇ ಬೀಸುತ್ತಿದೆ : ಸಂತೇಮರಳ್ಳಿಯಲ್ಲಿ ಮೋದಿ

ಚಾಮರಾಜನಗರ : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯನ್ನು ಗೆಲ್ಲಿಸಲು ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಚಾಮರಾಜನಗರ ಜಿಲ್ಲೆಗೆ ಆಗಮಿಸಿರುವ ಮೋದಿ, ಸಂತೇಮರಹಳ್ಳಿ ಹೋಬಳಿಯಲ್ಲಿ ಬೃಹತ್‌ ಸಮಾವೇಶವನ್ನುದ್ದೇಶಿಸಿ ಕನ್ನಡದಲ್ಲಿಯೇ ಮಾತು ಆರಂಭಿಸಿದ್ದಾರೆ.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಎದ್ದಿರುವುದು ಬಿಜೆಪಿ ಅಲೆಯಲ್ಲ ಬಿರುಗಾಳಿ. ಬಿಸಿಲಿನಲ್ಲಿ ನಿಂತು ನನ್ನ ಮಾತನ್ನು ಕೇಳುತ್ತಿರು, ಬಿಜೆಪಿಗಾಗಿ ಬಿಸಿಲಿನಲ್ಲೇ ಪ್ರಚಾರ ಮಾಡುತ್ತಾ ಕೆಲಸ ಮಾಡುತ್ತಿರುವ  ನಿಮ್ಮ ಕೆಲಸವನ್ನು ನಾವು ವ್ಯರ್ಥ ಮಾಡುವುದಿಲ್ಲ. ಭಾರತದ ಅಷ್ಟೂ ಹಳ್ಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.
ಇದೇ ವೇಳೆ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ರಾಹುಲ್‌ ಗಾಂಧಿಗೆ ದೇಶದ ಇತಿಹಾಸದ ಬಗ್ಗೆ ಜ್ಞಾನವಿಲ್ಲ. ವಂದೇ ಮಾತರಂ ಹಾಡಿನ ಬಗ್ಗೆ ಗೌರವವಿಲ್ಲ, ಇನ್ನು ಇಂತಹವರು ದೇಶದ ಬಗ್ಗೆ ಒಳ್ಳೆಯ ಮಾತನಾಡಲಿ ಎಂದು ಹೇಳುವುದು ವ್ಯರ್ಥ. ಅವರ ಪಕ್ಷದ ಹಿರಿಯ ನಾಯಕರ ಬಗ್ಗೆ ಅವರಿಗೇ ತಿಳಿದಿಲ್ಲ. ಇನ್ನು ದೇಶದ ಬಗ್ಗೆ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಇತ್ತೀಚೆಗಷ್ಟೇ ರಾಹುಲ್‌ ನನಗೆ ಸವಾಲು ಹಾಕಿದ್ದರು. ನಾನು ಸಂಸತ್‌ನಲ್ಲಿ 15 ನಿಮಿಷ ಮಾತನಾಡಿದರೆ ನಿಮಗೆ ಅಲ್ಲಿ ಕೂರಲು ಸಾಧ್ಯವಾಗಲ್ಲ ಎಂದಿದ್ದರು. ಆದರೆ ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ನೀವು 15 ನಿಮಿಷ ಮಾತನಾಡುವುದೇ ದೊಡ್ಡ ವಿಷಯ. ನಿಮ್ಮ ಮಾತನ್ನು ಕೇಳಲು 15 ನಿಮಿಷ ನಾನು ಕುಳಿತುಕೊಳ್ಳುವುದಿಲ್ಲವೇ?.  ಪೇಪರ್‌ ಇಲ್ಲದೇ ಕರ್ನಾಟಕದಲ್ಲಿ ನೀವು ಮಾಡಿರುವ ಸಾಧನೆಯನ್ನು ಯಾವ ಭಾಷೆಯಲ್ಲಾದರೂ 15 ನಿಮಿಷ ನಿಂತು ಮಾತನಾಡಿ ಸಾಕು ಎಂದಿದ್ದಾರೆ.
ಕಾಂಗ್ರೆಸ್‌ ಇದ್ದಲ್ಲಿ ನಾಗರಿಕರ ಮಾತಿಗೆ ಬೆಲೆ ಇರುವುದಿಲ್ಲ. ಅಭಿವೃದ್ಧಿಯ ಮಾತಂತೂ ಇಲ್ಲವೇ ಇಲ್ಲ. ಚಾಮರಾಜನಗರದಲ್ಲಿ ನೀರಿನ ಸಮಸ್ಯೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ಪ್ರವಾಸೋದ್ಯಮಕ್ಕೆ ಅವಕಾಶವಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದೆ ಎಂದಿದ್ದಾರೆ.
ಆದರೆ ಈ ಬಾರಿ ಬಿಜೆಪಿಯನ್ನು ಆರಿಸಿ, ಅಭಿವೃದ್ಧಿ ಎಂದರೆ ಏನು ಎಂದು ತೋರಿಸುತ್ತೇವೆ. ಅಭಿವೃದ್ಧಿಯಲ್ಲಿಯೂ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ನೀವು ನನಗೆ ಬೆಂಬಲ ನೀಡಿ, ನಾನು ನಿಮಗೆ ಬೆಂಬಲ ನೀಡುತ್ತೇನೆ. ಎಲ್ಲರೂ ಸೇರಿ ಕರ್ನಾಟಕದ ಅಭಿವೃದ್ದಿ ಮಾಡೋಣ ಎಂದಿದ್ದಾರೆ.

Leave a Reply

Your email address will not be published.