ಕೆಂಪುಕೋಟೆಯನ್ನು ಕಾರ್ಪೊರೇಟ್ ಕಂಪನಿಗೆ ಗುತ್ತಿಗೆ ನೀಡಿದ ಕೇಂದ್ರ : ಗರಂ ಆದ ವಿಪಕ್ಷಗಳು

ದೆಹಲಿ : ಐತಿಹಾಸಿಕ ಕೆಂಪು ಕೋಟೆಯನ್ನು ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗೆ ಗುತ್ತಿಗೆ ನೀಡಿರುವ ಸಂಬಂಧ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ.
2017ರ ವಿಶ್ವ ಪ್ರವಾಸೋದ್ಯಮ ದಿನದಂದು ಕೇಂದ್ರ ಸರ್ಕಾರ ಪಾರಂಪರಿಕ ತಾಣಗಳ ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಅವಗಳನ್ನು ದತ್ತು ನೀಡಲಾಗುತ್ತದೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ದಾಲ್ಮಿಯಾ ಗ್ರೂಪ್‌ ಕೆಂಪು ಕೋಟೆಯನ್ನು ದತ್ತು ವಪಡೆದಿತ್ತು.
ಈ ಸಂಬಂಧ ವಿಪಕ್ಷಗಳು ವಾಗ್ದಾಳಿ ನಡೆಸಿದ್ದು,  ಭಾರತದ ಸ್ವಾತಂತ್ರ್ಯದ ಸಂಕೇತವಾಗಿರುವ ಕೆಂಪುಕೋಟೆಯನ್ನು ಕೇಂದ್ರ ಸರ್ಕಾರ ಕಾರ್ಪೊರೇಟ್‌ ಸಂಸ್ಥೆಗೆ ಕೊಟ್ಟಿರುವುದು ಸರಿಯಲ್ಲ ಎಂದಿದೆ. ಅಲ್ಲದೆ ಪ್ರವಾಸೋದ್ಯಮ ಇಲಾಖೆಯ ಕ್ರಮವನ್ನು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದು, ಸರ್ಕಾರ ಸದ್ಯ ದತ್ತಿ ಕೊಡಲಿರುವುವದು ಯಾವುದನ್ನು ಗುರುತಿಸಿ -1. ಸಂಸತ್ತು 2. ಲೋಕಕಲ್ಯಾಣ ಮಾರ್ಗ 3. ಸರ್ವೋಚ್ಛ ನ್ಯಾಯಾಲಯ 4. ಮೇಲಿನ ಎಲ್ಲವೂ ಎಂದು ಟ್ವಿಟರ್‌ನಲ್ಲಿ ವ್ಯಂಗ್ಯ ಮಾಡಿದೆ.
ಐದು ವರ್ಷ ಅವಧಿಗೆ ದಾಲ್ಮಿಯಾ ಗ್ರೂಪ್ ಕೆಂಪುಕೋಟೆಯಲ್ಲಿ ಮೂಲಭೂತ ಸೌಕರ್ಯವನ್ನು ನಿರ್ಮಿಸುವುದಕ್ಕೆ 25 ಕೋಟಿ ರುಪಾಯಿ ಬಳಸುವುದಾಗಿ ಹೇಳಿದೆ.
ವಿಪಕ್ಷಗಳ ಟೀಕೆಗೆ ಕೇಂದ್ರ ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವ ಮಹೇಶ್‌ ಶರ್ಮಾ ಪ್ರತಿಕ್ರಿಯಿಸಿದ್ದು, ಪಾರಂಪರಿಕ ತಾಣದ ಗುಣಮಟ್ಟ ಕಾಯ್ದುಕೊಳ್ಳಲು ಅದನ್ನು ದಾಲ್ಮಿಯಾ ಗ್ರೂಪ್‌ಗೆ ನೀಡಲಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯ ಒಂದು ಭಾಗ ಎಂದಿದ್ದಾರೆ.
ಅಲ್ಲದೆ  ಇದೇ ಯೋಜನೆಯಡಿಯಲ್ಲಿ ದೇಶದ ಇನ್ನೂ ಹಲವಾರು ಸ್ಮಾರಕಗಳನ್ನು ವಿವಿಧ ಸಂಸ್ಥೆಗಳಿಗೆ ದತ್ತು ನೀಡುವ ಉದ್ದೇಶ ಹೊಂದಲಾಗಿದೆ ಎಂದೂ ಶರ್ಮಾ ಹೇಳಿದರು

Leave a Reply

Your email address will not be published.