ವಿಜ್ಞಾನಕ್ಕೆ ಸವಾಲೆಸೆದ ಕರ್ನಾಟಕದ ಹೆಮ್ಮೆಯ ಸ್ಪೈಡರ್ ಮ್ಯಾನ್ ಕೋತಿರಾಜ್‌ !!!

ಸ್ಪೈಡರ್‌ ಮ್ಯಾನ್  ಎಂದ ಕೂಡಲೆ ನಮಗೆ ಹಾಲಿವುಡ್‌ ಸಿನಿಮಾಗಳು ನೆನಪಾಗುತ್ತದೆ. ಆ ಸಿನಿಮಾ ಗಳಲ್ಲಿ ಬರುವ ಪಾತ್ರಗಳು, ಅವರ ಸ್ಟಂಟ್‌ಗಳನ್ನೆಲ್ಲ ನೋಡಿದರೆ ಈ ರೀತಿ ನಿಜವಾಗಿಯೂ ಮಾಡಲು ಸಾಧ್ಯಾನಾ ಎನಿಸೋದಂತೂ ಸತ್ಯ.

ಆದರೆ ಆ ರೀತಿಯ ಸಾಹಸಗಳನ್ನೂ ಮಾಡಬಹುದು ಎಂಬುದನ್ನು ಕರ್ನಾಟಕದ ಸ್ಪೈಡರ್‌ ಮ್ಯಾನ್‌ ತೋರಿಸಿಕೊಟ್ಟಿದ್ದಾರೆ. ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಹಳ್ಳಿ ಪ್ರತಿಭೆ ಕೋತಿ ರಾಮ ಎಂದೇ ಖ್ಯಾತರಾಗಿರುವ ಜ್ಯೋತಿರಾಜ್‌ ಕರ್ನಾಟಕದ ಸ್ಪೈಡರ್ ಮ್ಯಾನ್‌ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ.

ಇವರು ದುರ್ಗದ ಕೋಟೆಯನ್ನು ಕ್ಷಣಾರ್ಧದಲ್ಲಿ ಯಾರ ಸಹಾಯವೂ ಇಲ್ಲದಂತೆ ಹತ್ತುವುದಲ್ಲದೆ, ಲಾಗ ಹಾಕಿ ನಿಲ್ಲುವ ಸಾಮರ್ಥ್ಯವಿರುವ ಏಕೈಕ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ ರಾಕ್‌ ಕ್ಲೈಂಬಿಂಗ್‌ನಲ್ಲಿ ಇವರಿಗೆ ಪ್ರಪಂಚದ ಮೂರನೇ ಸ್ಥಾನ ಸಹ ಲಭಿಸಿದೆಯಂತೆ.

ಇವರ ಸಾಹಸ ಇಷ್ಟೇ ಅಲ್ಲ. ನಿಜವಾದ ಸ್ಪೈಡರ್‌ ಮ್ಯಾನ್‌ನಂತೆ ಕೋಟೆ, ಬಿಲ್ಡಿಂಗ್‌ಗಳು, ಅಷ್ಟೇ ಯಾಕೆ ಜೋಗ್‌ ಫಾಲ್ಸ್‌ ನಂತಹ ಅಪಾಯಕಾರಿ ಜಲಪಾತಗಳನ್ನು ಸಹ ಮಿಂಚಿನಂತೆ ಹತ್ತುವ ಸಾಹಸಿ ಜ್ಯೋತಿರಾಜ್‌.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಜ್ಯೋತಿರಾಜ್‌ 830 ಅಡಿಯ ಕರ್ನಾಟಕದ ಅತ್ಯಂತ ಎತ್ತರದ  ಜೋಗ ಜಲಪಾತವನ್ನು ನೀರಿನ ವಿರುದ್ಧ ದಿಕ್ಕಿನಲ್ಲಿ ಹತ್ತಿ ಸಾಹಸ ಮೆರೆದಿದ್ದರು. ಅಷ್ಟೇ ಅಲ್ಲದೆ ತಮ್ಮ ಜೀವವನ್ನು ಲೆಕ್ಕಿಸದೆ ಜೋಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪ್ರೇಮಿಗಳ ಮೃತದೇಹವನ್ನು ಹೊರತೆಗೆಯುವ ಕೆಲಸವನ್ನು ಇಂದಿಗೂ ಮಾಡುತ್ತಿದ್ದಾರೆ.

ಮೂಲತಃ ಚಿತ್ರದುರ್ಗದವರಾದ ಜ್ಯೋತಿರಾಜ್‌ ಅವರಿಗೆ ಚಿಕ್ಕಂದಿನಿಂದಲೂ ವಾಲ್‌ ಕ್ಲೈಂಬಿಂಗ್‌ ಬಗ್ಗೆ ಆಸಕ್ತಿ ಬೆಳೆದಿತ್ತು. ಈ ಕಾರಣದಿಂದಾಗಿ ಕೋತಿಯನ್ನು ಪ್ರೇರಣೆಯನ್ನಾಗಿಟ್ಟುಕೊಂಡು ವಾಲ್‌ ಕ್ಲೈಂಬಿಂಗ್‌ನಲ್ಲಿ ಸಾಧನೆ ಮಾಡಿದ್ದು, ಕೋತಿರಾಜ್‌ ಎಂದೇ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಇವರ ಸಾಹಸವನ್ನು ನೋಡಿ ಇವರಿಗೆ ರಾಕ್‌ ಕ್ಲೈಂಬರ್‌, ವಾಲ್‌ ಕ್ಲೈಂಬರ್‌, ಮಂಕಿ ಕಿಂಗ್‌, ಕಿಂಗ್‌ ಆಫ್‌ ವಾಲ್ ಎಂದೂ ಕರೆಯುತ್ತಾರೆ.

ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿರುವ  ನಮ್ಮ ಹಳ್ಳಿ ಪ್ರತಿಭೆ ಕೋತಿರಾಜ್‌ 2013ರಲ್ಲಿ  ಹುಬ್ಬಳ್ಳಿಯ 3 ಸಾವಿರ ಮಠದ ಕ್ಲಾಕ್‌ ಟವರನ್ನು 15 ನಿಮಿಷದಲ್ಲಿ ಹತ್ತಿ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಇವರ ಸಾಧನೆಗೆ ಸಾಕಷ್ಟು ಪ್ರಶಸ್ತಿಗಳು ಒಲಿದು ಬಂದಿದೆ. ತಾನು ಬೆಳೆಯುವುದಲ್ಲದೆ ಮಕ್ಕಳಿಗೂ ಈ ವಿದ್ಯೆಯನ್ನು ಧಾರೆ ಎರೆಯುತ್ತಾ ಭವಿಷ್ಯದ ಸ್ಪೈಡರ್‌ ಮ್ಯಾನ್‌ಗಳನ್ನು ತಯಾರು ಮಾಡುತ್ತಿರುವ ಕೋತಿರಾಜ್‌ಗೆ ಸೆಲ್ಯೂಟ್ ಹೇಳಲೇಬೇಕು.

Leave a Reply

Your email address will not be published.

Social Media Auto Publish Powered By : XYZScripts.com