ಮನೆಗೆ ಮರಳಿದ ವಿಜಯೇಂದ್ರ : ಯತೀಂದ್ರ ಸಮ್ಮುಖದಲ್ಲಿ ‘ಕೈ’ ಹಿಡಿದ 150 ಮಂದಿ ಕಾರ್ಯಕರ್ತರು

ಮೈಸೂರು: ವರುಣಾ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇನ್ನೆರಡು ದಿನ ಬಾಕಿ ಇರುವಂತೆ, ಬಿಜೆಪಿಯಲ್ಲಿ ನಡೆದ ಹೈಡ್ರಾಮಾ ಕಾಂಗ್ರೆಸ್‍ನ  ಬಲವರ್ಧನೆ ಹೆಚ್ಚಲು ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸಿಎಂ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂಂದ್ರ ಸೂಕ್ತವೆಂದು ಚುನಾವಣೆ ಅಖಾಡಕ್ಕೆ ವೇದಿಕೆ ಒದಗಿಸಲಾಯಿತು.ಆದರೆ ಏ.23 ಮತ್ತು 24 ರಂದು ನಡೆದ ಹೈಡ್ರಾಮಾದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷಕ್ಕೆ ಜಂಪಿಂಗ್ ಶುರು ಮಾಡಿಕೊಂಡಿದ್ದಾರೆ.

ವರುಣಾ ಕ್ಷೇತ್ರದಲ್ಲಿ 20 ದಿನಗಳ ಸುತ್ತಾಡಿ, ಬಾಡಿಗೆ ಮನೆ ಪಡೆದು ಚುನಾವಣೆ ರೂಪಿಸಲು ಸಿದ್ದರಾಗಿದ್ದ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ನೀಡಿದ ಶಾಕ್‍ನಿಂದ ಬೆಂಗಳೂರಿನತ್ತ ಮುಖ ಮಾಡುವಂತೆ ಮಾಡಿದೆ. ಪಕ್ಷದಲ್ಲಿ ಯಾರೇ ನಿಂತರೂ ಪ್ರಚಾರ ಮಾಡುತ್ತೇನೆ ಎಂದಿದ್ದ ವಿಜಯೇಂದ್ರ ಮನೆ ಕಡೆ ವಾಪಸಾಗಿದ್ದಾರೆ.

ಅತ್ತ ವಿಜಯೇಂದ್ರ ಬೆಂಗಳೂರಿಗೆ ಹೋದ ಬಳಿಕ, ಬಿಜೆಪಿ 150ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಡಾ.ಯತೀಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದರಿಂದ ಕಾಂಗ್ರೆಸ್‍ಗೆ ಮತ್ತಷ್ಟು ಬಲವರ್ಧನೆ ವೃದ್ಧಿಯಾಗಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ತೋಟದಪ್ಪ  ಬಸವರಾಜು ಅವರ ಗೆಲುವಿಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.

Leave a Reply

Your email address will not be published.