ಕರ್ನಾಟಕದ ಹೆಮ್ಮೆ ಕಾಂಗ್ರೆಸ್‌ ಮತ್ತೊಮ್ಮೆ : ‘ಮುಖ್ಯಮಂತ್ರಿ ಮಾತು’ ಆ್ಯಪ್‌ ಲೋಕಾರ್ಪಣೆ

ಬೆಂಗಳೂರು : ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಮಾತು ಆ್ಯಪನ್ನು ಬಿಡುಗಡೆ ಮಾಡಿದ್ದಾರೆ. ಸಮಾರಂಭದಲ್ಲಿ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ವೇಣುಗೋಪಾಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಡಿ.ಕೆ ಶಿವಕುಮಾರ್‌, ಕೆ.ಜೆ ಜಾರ್ಜ್‌ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರು.

ಈ ಆ್ಯಪ್‌ಗೆ ಕರ್ನಾಟಕದ ಹೆಮ್ಮೆ ಕಾಂಗ್ರೆಸ್‌ ಮತ್ತೊಮ್ಮೆ ಎಂಬ ಟ್ಯಾಗ್‌ಲೈನ್‌ ಇದ್ದು, ಈ ಆ್ಯಪ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾಷಣದ ವಿಡಿಯೋ ಲಭ್ಯವಾಗುತ್ತದೆ. ಕಾಂಗ್ರೆಸ್‌ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್‌ನ ಮುಂದಿನ ಯೋಜನೆಗಳು ಕುರಿತಾದ ವಿಡಿಯೋ ಲಭ್ಯವಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಆ್ಯಪನ್ನು ಅಭಿವೃದ್ಧಿಪಡಿಸಲಾಗಿದೆ.

ಆ್ಯಪ್‌ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಂತ್ರಜ್ಞಾನ ಬೆಳೆಯಲು ಕಾಂಗ್ರೆಸ್‌ ಪಕ್ಷ ಕಾರಣ. ಮತದಾರರ ನಿರೀಕ್ಷೆಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಕಾಂಗ್ರೆಸ್‌ ಸರ್ಕಾರ ಜನಪರ ಕೆಲಸ ಮಾಡಿದೆ. ಅಭಿವೃದ್ಧಿ ಪರವಾರ ಕೆಲಸವೇ ಕಾಂಗ್ರೆಸ್‌ಗೆ ಶ್ರೀರಕ್ಷೆ ಎಂದಿದ್ದಾರೆ. ಜೊತೆಗೆ ಇಲ್ಲಿ ಜನರೇ ಎಲ್ಲಾ, ರಾಜ್ಯದ ಜನ ನಮಗೆ ಅನ್ನ, ನೀರು ಕೊಟ್ಟಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಾರೆ. ಆದರೆ ನಮ್ಮ ಜನ ಪ್ರಜ್ಞಾವಂತರು, ಮೋದಿ, ಶಾ,ಯಡಿಯೂರಪ್ಪನಿಗೆ ಸುಳ್ಳು ಹೇಳುವುದನ್ನು ಬಿಟ್ಟರೆ ಇನ್ನೇನೂ ಕೆಲಸವಿಲ್ಲ ಎಂದಿದ್ದಾರೆ.

ಜೆಡಿಎಸ್‌ನಲ್ಲಿ ಶಕ್ತಿಯೇ ಇಲ್ಲ. ಇನ್ನು ಅವರು ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯಾಗಲಿ ಎಂದು ಜೆಡಿಎಸ್‌ ಕಾಯುತ್ತಿದೆ. ಆದರೆ ಕರ್ನಾಟಕದ ಜನ ಕಾಂಗ್ರೆಸ್‌ಗೇ ಮತ ಚಲಾಯಿಸುತ್ತಾರೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಅದು ಕನಸಾಗೇ ಉಳಿಯುತ್ತದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com