ನನಗೆ ಮನುಷ್ಯತ್ವ ಇದೆ, ನಾನು ಅಮಿತ್ ಶಾಗಿಂತ ಒಳ್ಳೆಯ ಹಿಂದೂ : ಸಿದ್ದರಾಮಯ್ಯ
ಮೈಸೂರು : ಬಿಜೆಪಿ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯೇ ಇಲ್ಲ. ಇದೆಲ್ಲ ಬಿಜೆಪಿಯವರ ಸೃಷ್ಠಿ. ರಾಜ್ಯ ಸರ್ಕಾರ ಗೆಲ್ಲುವ ವಿಶ್ವಾಸದಲ್ಲಿದೆ. ಇಲ್ಲ ಸಲ್ಲದ ಆರೋಪ ಹೊರಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿರುವುದಾಗಿ ಸಿದ್ದರಾಮಯ್ಯ ದೂರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ನಾವು ಐದು ವರ್ಷ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಪ್ರಚಾರ ಮಾಡುತ್ತೇವೆ. ಜನ ನಮ್ಮನ್ನು ಗೆಲ್ಲಿಸುತ್ತಾರೆ. ಬಿಜೆಪಿಯ ಸುಳ್ಳುಗಳಿಗೆ ಜನ ಎಂದಿಗೂ ಮಣೆ ಹಾಕುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಕಾಂಗ್ರೆಸ್ ಸರ್ಕಾರ ನನ್ನನ್ನು ಕೊಲೆ ಮಾಡಲು ಯತ್ನಿಸಿದೆ ಎಂದಿದ್ದಾರೆ. ಇದು ನಿಜಕ್ಕೂ ಹಾಸ್ಯಾಸ್ಪದ ಹಾಗೂ ಮೂರ್ಖತನದ ಹೇಳಿಕೆ. ರಾಜಕೀಯಕ್ಕಾಗಿ ಏನೇನೋ ಹೇಳಿದರೆ ಕೇಳುವವರ್ಯಾರು. ಜನರನ್ನು ಮೂರ್ಖರನ್ನಾಗಿ ಮಾಡಲು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇವರೇ ಮೂರ್ಖರಾಗುತ್ತಿದ್ದಾರೆ ಎಂದಿದ್ದಾರೆ.
ಅಮಿತ್ ಶಾ ನಾನು ಜೈನ್ ಧರ್ಮದವನಲ್ಲ ಎಂದು ಹೇಳಲಿ. ನಾನು ಅವರಿಗಿಂತ ಒಳ್ಳೆಯ ಹಾಗೂ ಉತ್ತಮ ಹಿಂದೂ. ನನಗೆ ಮಾನವೀಯ ಮೌಲ್ಯಗಳ ಬಗ್ಗೆ ನಂಬಿಕೆ ಇದೆ. ಮನುಷ್ಯತ್ವ ಇದೆ. ಹೆಣದ ಮೇಲೆ ರಾಜಕೀಯ ಮಾಡುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ.