’ಕಥುವಾ’ದ ಘನಘೋರ ದುರಂತವನ್ನು ದೇಶ ಎಂದಿಗೂ ಮರೆಯದಿರಲಿ….

ಒಂದು ಕ್ಷಣ ನಿಂತು ಕೇಳಿಕೊಳ್ಳೋಣ: ನೈತಿಕ ಅವನತಿ, ಬರ್ಬರತೆ ಮತ್ತು ಅನ್ಯಾಯಗಳನ್ನು ಧರ್ಮ ಮತ್ತು ರಾಜಕೀಯಗಳ ಹೆಸರಿನಲ್ಲಿ ಸಮರ್ಥಿಸಿಕೊಳ್ಳಬಹುದೇ?

ಜಮ್ಮುವಿನಿಂದ ಕೇವಲ ೭೨ ಕಿ.ಮೀ ದೂರದಲ್ಲಿರುವ ಕಥುವಾ ಎಂಬ ಗ್ರಾಮದ ಬಳಿ ವಾಸಿಸುತ್ತಿದ್ದ ಬಖೇರ್‌ವಾಲ್-ಗುಜ್ಜರ್ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಹೆಣ್ಣುಕೂಸಿನ ಮೇಲೆ ಸರಣಿ ಅತ್ಯಾಚಾರ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆಯಯ ವಿವರಗಳಲ್ಲಿರುವ ಬರ್ಬರತೆಯು ಬೆಚ್ಚಿಬೀಳಿಸುತ್ತವೆ. ಆದರೆ ಪೊಲೀಸ್ ತನಿಖೆಯಿಂದ ಮೊದಲುಗೊಂಡು ಅತ್ಯಾಚಾರದ ಆರೋಪಿಗಳ ಬಂಧನದವರೆಗೆ ನಡೆದ ವಿದ್ಯಮಾನಗಳು ಇನ್ನಷ್ಟು ಹೀನಾಯವಾಗಿವೆ. ಏಕೆಂದರೆ ಅವು ನಮ್ಮ ಸಮಾಜದೊಳಗೆ ಮನೆಮಾಡಿರುವ ಹುಳುಕುಗಳನ್ನು ಬಯಲು ಮಾಡಿವೆ. ಒಂದು ಮಗುವಿನ ಅತ್ಯಾಚಾರದ ಪಾತಕವನ್ನೂ ಸಹ ಕೋಮುವಾದಿ ದ್ವೇಷವನ್ನು ಬಡಿದೆಬ್ಬಿಸಲು ಬಳಸಿಕೊಳ್ಳುವಷ್ಟು ಮತ್ತು ಈ ಕುಕೃತ್ಯವನ್ನು ನಡೆಸಿದವರನ್ನು ಶಿಕ್ಷೆಯಿಂದ ರಕ್ಷಿಸಲು ಅತ್ಯಾಚಾರವನ್ನು ರಾಜಕೀಕರಣಗೊಳುವಷ್ಟು ಹೇಯಸ್ಥಿತಿಗೆ ನಾವು ಹೇಗೆ ಪತನಗೊಂಡೆವು?

ಈ ಮಗು ಕಣ್ಮರೆಯಾದ ದಿನವಾದ ಜನವ್ರಿ ೧೦ ರಿಂದ ಹಿಡಿದು ಆಕೆಯ ಜರ್ಝರಿತ ದೇಹ ಪತ್ತೆಯಾದ ದಿನವಾದ ಜನವರಿ ೧೭ರ ನಡುವಿನ ಅವಧಿಯಲ್ಲಿ ಆಕೆಯ ಮೇಲೆ ನಡೆಸಲಾಗಿರುವ ಕುಕೃತ್ಯಗಳ ವಿವರಗಳು ಭಯಾನಕವಾಗಿವೆ. ಏಕೆಂದರೆ ಅದು ಮನುಷ್ಯರ ನೈತಿಕ ಅಧಃಪತನದ ಪಾತಾಳವನ್ನು ತೋರಿಸುತ್ತದೆ. ಒಂದು ಮಗುವನ್ನು ಅಪಹರಿಸಿ, ಅಮಲು ಪದಾರ್ಥಗಳನ್ನು ಸೇವಿಸುವಂತೆ ಮಾಡಿ, ಒಂದು ದೇವಸ್ಥಾನದೊಳಗೆ ಕೂಡಿಟ್ಟು, ಪದೇ ಪದೇ ಹೊಡೆದು ಬಡಿದು ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿ ಬಿಸಾಕಿರುವ ಕೃತ್ಯವೇ ಸಾಕಷ್ಟು ಭೀಭತ್ಸವಾಗಿದ್ದರೆ, ಈ ಕೃತ್ಯವನ್ನು ನಡೆಸಿರುವವರಲ್ಲಿ ಇಬ್ಬರು ಸ್ಥಳೀಯ ಪೊಲೀಸರು ಸೇರಿಕೊಂಡಿರುವುದು ಘಟನೆಯನ್ನು ಮತ್ತಷ್ಟು ಭಯಾನಕಗೊಳಿಸಿದೆ. ಇವರಲ್ಲಿ ಒಬ್ಬ ಪೊಲೀಸು ಆ ಮಗು ಎಲ್ಲಿದೆ ಮತ್ತು ಅದರ ಮೇಲೆ ಯಾವ ಬಗೆಯ ಕ್ರೌರ್ಯ ಎಸಗಲಾಗುತ್ತಿದೆ ಎಂದು ಗೊತ್ತಿದ್ದರೂ, ಆಕೆಯ ಪೋಷಕರು ಮಗುವು ಕಣ್ಮರೆಯಾಗಿರುವ ಬಗ್ಗೆ ದೂರು ನೀಡಿದಾಗ ಅವರೊಡನೆ ಸೇರಿಕೊಂಡು ಮಗುವನ್ನು ಹುಡುಕುವ ನಾಟಕವಾಡಿದ್ದಾನೆ.

ಆದರೆ ಮಗುವಿನ ದೇಹವು ಪತ್ತೆಯಾದ ನಂತರ ಸರ್ಕಾರವು ತನಿಖೆಗೆ ಆದೇಶ ನೀಡಿತು. ತನಿಖೆ ನಡೆದು ಪೊಲೀಸರನ್ನೂ ಒಳಗೊಂಡಂತೆ ಸಂದೇಹಾಸ್ಪದ ವ್ಯಕ್ತಿಗಳ ಬಂಧನವಾದ ನಂತರದಲ್ಲಿ  ಇಡೀ ವಿದ್ಯಮಾನದ ರಾಜಕೀಕರಣ ಪ್ರಾರಂಭಗೊಂಡಿತು. ಅತ್ಯಾಚಾರ ಮತ್ತು ಹತ್ಯೆಯ ಘಟನೆಯನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸುವ ಬದಲು ರಾಜಕಾರಣಿಗಳು ಮತ್ತು ವಕೀಲರೂ ಸಹ ಆರೊಪಿಗಳ ಪರ ವಹಿಸುತ್ತಾ ಈ ಪ್ರಕರಣದ ತನಿಖೆಯನ್ನು ನಿರ್ವಹಿಸಿರುವ ಜಮ್ಮು ಕಾಶ್ಮೀರ ಪೊಲೀಸರ ಸಾಮರ್ಥ್ಯ ಮತ್ತು ನಿಷ್ಪಕ್ಷಪಾತತೆಯ ಬಗ್ಗೆಯೇ ಅಪಸ್ವರಗಳನ್ನು ಎತ್ತುತ್ತಿದ್ದಾರೆ ಮತ್ತು ಇಡೀ ಪ್ರಕರಣವನ್ನು ಕೇಂದ್ರ ಸರ್ಕಾರವು ಸಿಬಿಐ ಗೆ ವಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಒಂದೆಡೆ ಬಿಜೆಪಿ ಬೆಂಬಲಿತ ಹಿಂದೂ ಏಕತಾ ಮಂಚ್ ಎಂಬ ಸಂಘಟನೆಯು ರಾಷ್ಟ್ರ ಧ್ವಜವನ್ನು ಹಿಡಿದು ಆರೋಪಿಗಳಿಗೆ ನ್ಯಾಯ ಒದಗಿಸಲು ಮೆರವಣಿಗೆಗಳನ್ನು ನಡೆಸಿದರೆ,  ಪೊಲೀಸರು ಚಾರ್ಚ್‌ಶೀಟ್ ದಾಖಲಿಸದಂತೆ ವಕೀಲರು ದೈಹಿಕವಾಗಿ ತಡೆಗಟ್ಟುವ ಪ್ರಯತ್ನ ನಡೆಸಿದ್ದಾರೆ. ಅತ್ಯಾಚಾರಿ ಆರೋಪಿತರಿಗೆ ಈ ಬಗೆಯ ಬಹಿರಂಗ ಬೆಂಬಲ ಹಿಂದೆಂದೂ ಈ ದೇಶದಲ್ಲಿ ದಕ್ಕಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಲ್ಲಿ ಒಂದು ಸಣ್ಣ ಮಗುವಿಗೆ ಅತ್ಯಾಚಾರ ಮತ್ತು ಚಿತ್ರಹಿಂಸೆಗಳನ್ನು ನೀಡಿ ಕೊಲ್ಲಲಾಯಿತೆಂಬ ಅಸಲು ಸಂಗತಿಯೇ ಬದಿಗೆ ಸರಿದು ಹೋಗಿದೆ.

ಈ ಬೆಳವಣಿಗೆಗಳ ಒಂದು ಹಿನ್ನೆಲೆಯಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯೊಂದಿಗೆ ಸೇರಿಕೊಂಡು ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಜಮ್ಮುವಿನ ಹಿಂದೂ ಬಹುಸಂಖ್ಯಾತರು ಬಲವಾದ ನೆಲೆಯನ್ನು ಒದಗಿಸಿದ್ದಾರೆ. ಈ ಅಸಹಜ ಹೊಂದಾಣಿಕೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಕಣಿವೆಯ ನಡುವಿನ ಪರಸ್ಪರ ವಿರೋಧೀ ಕೋಮುವಾದಿ ಧೃವೀಕೃತ ರಾಜಕೀಯವೇನೂ ಮುಕ್ಕಾಗಿಲ್ಲ. ಹೀಗಾಗಿ ಅತ್ಯಾಚರಕ್ಕೆ ಬಲಿಯಾಗಿರುವ ಕೂಸು ಮುಸ್ಲಿಮಳಾಗಿರುವುದು ಮತ್ತು ಆತ್ಯಾಚಾರ ಆರೋಪಿಗಳೆಲ್ಲಾ ಹಿಂದೂಗಳಾಗಿರುವುದು ಕೋಮುವಾದಿ ರಾಜಕೀಯದ ಮೇಲಾಟಕ್ಕೆ ಸೂಕ್ತವಾದ ಭೂಮಿಕೆಯನ್ನು ಒದಗಿಸಿತು. ಅತ್ಯಾಚಾರಕ್ಕೆ ತುತ್ತಾಗಿ ಬಲಿಯಾದ ಒಂದು ಮಗುವಿನ ಜರ್ಝರಿತ ದೇಹದ ಸುತ್ತ ಇಂಥ ಕೋಮುವಾದಿ ರಾಜಕಾರಣ ನಡೆಯುತ್ತಿರುವುದು ನಮ್ಮ ದೇಶದ ರಾಜಕೀಯವು ಎಷ್ಟು ಪಾತಾಳಕ್ಕೆ ಅಧಃಪತನಗೊಂಡಿದೆ ಎಂಬುದನ್ನು ಸೂಚಿಸುತ್ತದೆ.

ಈ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವಾಗಲೇ ಇವು ಸಂಭವಿಸುತ್ತಿರುವ ಸಂದರ್ಭವನ್ನು  ನಾವು ಅರ್ಥಮಾಡಿಕೊಳ್ಳಬೇಕಿದೆ. ಮೊದಲನೆಯದಾಗಿ ಈ ದೇಶದಲ್ಲಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚರ ಮತ್ತು ಕೌಟುಂಬಿಕ ಹಿಂಸೆಗಳು ವ್ಯಾಪಕವಾಗಿ ಸಂಭವಿಸುತ್ತಿವೆ. ಇದರ ಬಗ್ಗೆ ನೀಡಲಾಗುವ ಅಂಕಿಅಂಶಗಳು ಸತ್ಯದ ಅರ್ಧದಷ್ಟನ್ನೂ ಬಿತ್ತರಿಸುವುದಿಲ್ಲ. ಹೆಂಗಸರು ಮತ್ತು ಹೆಣ್ಣುಮಕ್ಕಳ ಮೇಲೆ ಮನೆಗಳಲ್ಲಿ, ನೆರೆಹೊರೆಯಲ್ಲಿ, ಬೀದಿಗಳಲ್ಲಿ, ಹೊಲಗಳಲ್ಲಿ, ಕಾಡುಗಳಲ್ಲಿ ಎಲ್ಲೆಂದರಲ್ಲಿ ದಾಳಿ  ಮಾಡಲಾಗುತ್ತಿದೆ, ಚಿತ್ರಹಿಂಸೆ ಮಾಡಲಾಗುತ್ತಿದೆ ಮತ್ತು ಲೈಂಗಿಕವಾಗಿಯೂ ಹಿಂಸಿಸಲಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಜಾರಿಯಾಗಿರುವ ಯಾವ ಕಾನೂನುಗಳೂ ಪರಿಸ್ಥಿತಿಯಲ್ಲಿ ಯಾವ  ವ್ಯತ್ಯಾಸವನ್ನು ತಂದಿಲ್ಲ. ೨೦೧೨ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯಿದೆಯನ್ನು ಜಾರಿಗೆ ತರಲಾಯಿತು. ೨೦೧೩ರಲ್ಲಿ ಅತ್ಯಾಚಾರ ನಿಗ್ರಹ ಕಾಯಿದೆಯನ್ನು ಗಟ್ಟಿಗೊಳಿಸಿ ಮರಣದಂಡನೆಯ ಶಿಕ್ಷೆಯನ್ನು ಸೇರಿಸಲಾಯಿತು. ಇಷ್ಟೆಲ್ಲಾ ಆದರೂ ಅತ್ಯಾಚಾರ ಹಾಗೂ ಮಕ್ಕಳ ಮೇಲೆ ನಡೆಸಲಾಗುತ್ತಿರುವ ಕಿರುಕುಳಗಳು ಮಾತ್ರ ಕಡಿಮೆಯಾಗಿಲ್ಲ. ಕಾನೂನುಗಳನ್ನು ಜಾರಿ ಮಾಡುವ ವ್ಯವಸ್ಥೆಯು ಕೆಲಸ ಮಾಡಿದರೆ ಮಾತ್ರ ಕಾನೂನುಗಳು ಪರಿಣಾಮಕಾರಿಯಾಗಿರುತ್ತವೆ.

ಎರಡನೆಯದಾಗಿ ಈ ಘಟನೆಯು ಜಮ್ಮುವಿನಲ್ಲಿ ನಡೆಯಿತೆಂಬುದನ್ನು ನಾವು ಮರೆಯಬಾರದು. ಅದೇ ರಾಜ್ಯದ ಭಾಗವಾಗಿರುವ ಕಾಶ್ಮೀರ ಕಣಿವೆಯಲ್ಲಿ ನೂರಾರು ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳನು ನಡೆಯುತ್ತಲೇ ಇದ್ದರೂ ಅವು ಭಾರತದ ಇನ್ನುಳಿದ ಭಾಗದಲ್ಲಿ ಈ ಪ್ರಮಾಣದ ಆಕ್ರೋಶವನ್ನು ಹುಟ್ಟುಹಾಕಲಿಲ್ಲ. ಅಲ್ಲಿನ ಮಹಿಳೆಯರು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಎಂದಿನ ಸಮಸ್ಯೆಗಳ ಜೊತೆಜೊತೆಗೆ ಇಂಥಾ ಅತ್ಯಚಾರಗಳನ್ನು ಎಸಗುವ ಸೈನಿಕರಿಗೆ ಕಾನೂನು ರಕ್ಷಣೆ ಕೊಡುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ ಜೊತೆಗೂ ಗುದ್ದಾಡಬೇಕಿದೆ.

ಮೂರನೆಯದಾಗಿ, ರಾಜಕೀಯವು ಎರಡು ಸಮುದಾಯಗಳ ದ್ವೇಷದ ನಂಜನ್ನು ಬಿತ್ತಿದಾಗ ಮತ್ತೊಂದು ಕಡೆಯವರಿಗೆ ಪಾಠ ಕಲಿಸುವ ದಾಳಿಗೆ ಮೊದಲು ಗುರಿಯಾಗುವವರು ಮಹಿಳೆಯರೇ ಆಗಿದ್ದಾರೆ. ದೇಶ ವಿಭಜನೆಯ ಕಾಲದಿಂದಲೂ ದೇಶದ ಹಲವು ಭಾಗಗಳಲ್ಲಿ ಈ ರಾಜಕೀಯದ ಪರಿಣಾಮವನ್ನು ನೋಡುತ್ತಲೇ ಇದ್ದೇವೆ. ಆದರೆ ತಮ್ಮ ಬೆಂಬಲಿಗರಿಗೆ ಅಧಿಕಾರದಲ್ಲಿರುವವರ ರಕ್ಷಣೆ ದೊರೆಯುತ್ತದೆಂಬ ಖಚಿತ ವಿಶ್ವಾಸವು ದ್ವೇಷದ ಠೇಕೇದಾರರ ಆಟಾಟೋಪವನ್ನು ಇಮ್ಮಡಿಗೊಳಿಸಿರುವುದು ಇಂದು  ಈ ರಾಜಕೀಯಕ್ಕೆ ಹೊಸ ತಿರುವನ್ನು ನೀಡಿದೆ. ಇಲ್ಲದಿದ್ದರೆ ಆ ಹಸುಗೂಸಿನ ಕೊಲೆಯ ಆರೋಪಿಗಳಿಗೆ ಸಿಕ್ಕ ಬಹಿರಂಗ ಹಾಗೂ ಲಜ್ಜೆಗೇಡಿ ಬೆಂಬಲವನ್ನು ಹೇಗೆತಾನೇ ಅರ್ಥಮಾಡಿಕೊಳ್ಳಲು ಸಾಧ್ಯ?

ಈ ಬಾಲಕಿಗೆ ಆದ ಗತಿ ಬೇರೆ ಯಾವುದೇ ಮಗುವಿಗೆ ಬಾರದಂತೆ ತಡೆಯಲು ವ್ಯವಸ್ಥೆಯೊಳಗೆ ಹಲವು ಮೂಲಭೂತ ಬದಲಾವಣೆಗಳಾಗಬೇಕೆಂದು ನಾವು ಆಗ್ರಹಿಸಬೇಕಿದೆ. ಸಂತ್ರಸ್ತರು ತಮ್ಮ ದೂರನ್ನು ಕೊಂಡೊಯ್ಯುವ  ಮೊದಲ ತಾಣ ಪೊಲೀಸ್ ಠಾಣೆ. ಇಲ್ಲಿ ಅವರಿಗೆ ಯಾವುದೇ ಸಹಾನುಭೂತಿ ಸಿಗುವುದಿಲ್ಲ. ಒಂದು ವೇಳೆ  ಪ್ರಕರಣ ದಾಖಲಾಗಿ, ತನಿಖೆ ನಡೆದರೂ ನ್ಯಾಯ ಸಿಗುವ ಖಾತರಿಯೇನೂ ಇರುವುದಿಲ್ಲ. ಬೇಕಾಬಿಟ್ಟಿ ತನಿಖೆಗಳು ಮತ್ತು ಸಂವೇದನಾ ಶೂನ್ಯ ವಕೀಲರು ಪ್ರಕರಣಗಳು ವಿಫಲವಾಗುವಂತೆ ನೋಡಿಕೊಳ್ಳುತ್ತಾರೆ. ನಮ್ಮ ನ್ಯಾಯದಾನ ವ್ಯವಸ್ಥೆಯು ಛಿದ್ರಗೊಂಡಿದ್ದು ತುರ್ತು ದುರಸ್ಥಿಯ ಅಗತ್ಯವಿದೆ.

ಮಹಿಳೆಯರ ಮೇಲೆ ಎಸಗುವ ಅಪರಾಧಗಳ ಬಗ್ಗೆ ನಮ್ಮ ತಿಳವಳಿಕೆಯನ್ನು ೨೦೧೨ರ ಡಿಸೆಂಬರ್ ೧೬ರ ಘಟನೆ ಬದಲು ಮಾಡಿದೆ ಎಂದು ನಾವು ಭಾವಿಸಿದ್ದೆವು. ಈ ಪುಟ್ಟ ಹುಡುಗಿಯ ಸಾವು ಕೂಡಾ ಅಂಥಾ ಮತ್ತೊಂದು ಘಟನೆಯಾಗಿದ್ದು ಈ ಸಂದರ್ಭzಲ್ಲಾದರೂ ಪ್ರತಿಯೊಬ್ಬ ಭಾರತೀಯರು ಒಂದು ಕ್ಷಣ ನಿಂತು ನಮ್ಮ ಸಮಾಜ ಯಾವ ದಿಕ್ಕಿನತ್ತ ಸರಿಯುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನೈತಿಕ ಅವನತಿ, ಬರ್ಬರತೆ ಮತ್ತು ಅನ್ಯಾಯಗಳನ್ನು ನಾವು ಧರ್ಮ ಮತ್ತು ರಾಜಕೀಯಗಳ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತೇವೆಯೇ? ಅಥವಾ ಮಾನವೀಯತೆಯು  ಪುನರುಜ್ಜೀವಗೊಂಡು ಎಲ್ಲಾ ಜೀವಗಳು ಅಮೂಲ್ಯವೆಂದೂ ಮತ್ತು ಅಪರಾಧಕ್ಕೆ ಯಾವ ಧರ್ಮವೂ ಇರುವುದಿಲ್ಲವೆಂಬ ಪ್ರಜ್ನೆಯನ್ನು ನೀಡುತ್ತದೆಯೇ??

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com