International : ಯುದ್ಧ ಸಂತ್ರಸ್ತ ಸಿರಿಯಾ ಮತ್ತು ಅನ್ಯಾಯ ……ಮರಿಚಿಕೆಯಾದ ಶಾಂತಿ..

ಯುದ್ಧ ಸಂತ್ರಸ್ತರಾಗಿರುವ ಸಿರಿಯನ್ನರಿಗೆ ಶಾಂತಿ ಮರಳಿಸಲು ಬಹುಮುಖೀ ಪ್ರಯತ್ನಗಳು ನಡೆಯಬೇಕು.

ಶ್ರೀನಿವಾಸ್ ಬುರ್ರಾ ಬರೆಯುತ್ತಾರೆ:

ಕಳೆದ ಏಪ್ರಿಲ್ ೭ ರಂದು ರಾಸಾಯನಿಕ ಅಸ್ತ್ರವನ್ನು ಬಳಸಲಾಗಿದೆಯೆಂದು ಹೇಳಲಾಗುತ್ತಿರುವ ಘಟನೆಯೊಂದರಲ್ಲಿ ಸಿರಿಯಾ ಸರ್ಕಾರ ನಡೆಸಿದ ದಾಳಿಗೆ ೭ ಜನ ನಾಗರಿಕರು ಬಲಿಯಾದರು. ಅದನ್ನು ಬಳಸಿಕೊಂಡು ಅಮೆರಿಕ ಮತ್ತದರ ಮೈತ್ರಿಕೂಟವು ಸಿರಿಯಾದ ಬಶರ್-ಅಲ್-ಅಸಾದ್ ನೇತೃತ್ವದ ಸರ್ಕಾರದ ಮೇಲೆ ಮತ್ತೊಂದು ಸುತ್ತಿನ ಸೈನಿಕ ದಾಳಿಯನ್ನು ನಡೆಸುವ ಎಲ್ಲಾ ಸನ್ನಾಹವನ್ನೂ ನಡೆಸುತ್ತಿದೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂಘರ್ಷದಲ್ಲಿ ಈಗಾಗಲೇ ನೂರಾರು ಸಾವಿರ ಜನರು ಬಲಿಯಾಗಿದ್ದಾರೆ. ಇದು ಆ ಸರಣಿಯಲ್ಲಿ ಘಟಿಸಿರುವ ಮತ್ತೊಂದು ಪ್ರಕರಣ. ಈ ಸಂಘರ್ಷವು ಸಿರಿಯಾದ ನಾಗರಿಕ ಬದುಕಿನ ಮೇಲೆ ಮಾಡುತ್ತಿರುವ ಪರಿಣಾಮವು ಅಗಾಧವಾದುದು.

ವಿಶ್ವಸಂಸ್ಥೆಯ ನಿರಾಶ್ರಿತರ ಉನ್ನತಾಯುಕ್ತರ(ಯುನೈಟೆದ್ ನೇಷನ್ ಹೈಕಮಿಷನರ್ ಫಾರ್ ರೆಫ್ಯೂಜೀಸ್-ಯುಎನ್‌ಎಚ್‌ಸಿಆರ್)ವರದಿಯ ಪ್ರಕಾರ ೨೦೧೧ರಲ್ಲಿ ಈ ಸಂಘರ್ಷವು ಪ್ರಾರಂಭವಾದ ನಂತರ ಅಂದಾಜು ೫೪ ಲಕ್ಷ ಸಿರಿಯನ್ನರು ದೇಶವನ್ನು ತೊರೆದು ಬೇರೆಬೇರೆ  ದೇಶಗಳಲ್ಲಿ ಆಶ್ರಯವನ್ನು ಕಂಡುಕೊಂಡಿದ್ದಾರೆ. ಇದರ ಜೊತೆಗೆ ೬೧ ಲಕ್ಷದಷ್ಟು ಜನರು ಅಂತರಿಕವಾಗಿ ನಿರಾಶ್ರಿತರಾಗಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ಜನ ದೇಶದ ವಿವಿಧ ಭಾಗಗಳಲ್ಲಿ ಘರ್ಷಣೆಯ ನಡುವೆ ಸಿಲುಕಿಕೊಂಡಿದ್ದಾರೆ.

ಸಿರಿಯಾದ ಅಸಾದ್ ಸರ್ಕಾರದ ವಿರುದ್ಧ ಭುಗಿಲೆದ್ದ ಪ್ರಾರಂಭಿಕ ಪ್ರತಿರೋಧಗಳು ನಿಧಾನವಾಗಿ ಪ್ರಭುತ್ವ ವಿರೋಧಿ ಸಶಸ್ತ್ರ ಗುಂಪುಗಳ ರಚನೆಗೆ ದಾರಿಮಾಡಿಕೊಟ್ಟಿತು. ಆ ಮೂಲಕ ದೇಶದಲ್ಲಿ ಅಂತರಿಕ ಸಶಸ್ತ್ರ ಹೋರಾಟವು ಪ್ರಾರಂಭಗೊಂಡಿತು. ಆದರೆ ಒಂದೆಡೆ ಸಿರಿಯಾ ಸರ್ಕಾರದ ಪರವಾಗಿ ರಷ್ಯಾ ಹಾಗು ಮತ್ತೊಂದೆಡೆ ಇಸ್ಲಾಮಿಕ್ ಸ್ಟೇಟ್ (ಐಎಸ್)ಅನ್ನು ಬಗ್ಗುಬಡೆಯುವ್ಚ ನೆಪದಲ್ಲಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಮಧ್ಯಪ್ರವೇಶ ಮಾಡಿದ್ದರಿಂದ ಸಂದರ್ಭವು ಸಾಕಷ್ಟು ಸಂಕೀರ್ಣಗೊಂಡಿದೆ. ಅಮೆರಿಕವು ತನ್ನ ಮಧ್ಯಪ್ರವೇಶವನ್ನು ಆತ್ಮ ರಕ್ಷಣೆ, ಸಾಮೂಹಿಕ ಆತ್ಮ ರಕ್ಷಣೆ, ಮಾನವೀಯ ಮಧ್ಯಪ್ರವೇಶದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದೆ. ಅಂತರರಾಷ್ಟ್ರೀಯ ನ್ಯಾಯ ಸಂಹಿತೆಯಲ್ಲಿ ಸಶಸ್ತ್ರ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲವಾದರೂ, ಆತ್ಮ ರಕ್ಷಣೆ ಅಥವಾ ಸಾಮೂಹಿಕ ಆತ್ಮ ರಕ್ಷಣೆಗಳನ್ನು ಅಂತರರಾಷ್ಟ್ರೀಯ ಕಾನುನು ದ್ವಂದ್ವಪೂರಿತ ನೆಲೆಯಲ್ಲಿ ಸಮರ್ಥಿಸಿಕೊಳ್ಳುತ್ತದೆ. ಮತ್ತೊಂದೆಡೆ ರಷ್ಯಾವು ಸಿರಿಯಾ ಸರ್ಕಾರದ ವಿರುದ್ಧ ಪ್ರಭುತ್ವೇತರ ಸಶಸ್ತ್ರ ಗುಂಪುಗಳ ನಡೆಸುತ್ತಿರುವ ಬಂಡಾಯದ ವಿರುದ್ಧ ವಿರುದ್ಧ ಸಿರಿಯಾ ಸರ್ಕಾರದ ಆಹ್ವಾನದ ಮೇರೆಗೆ ತಾನು ಮಧ್ಯಪ್ರವೆಶ ಮಾಡಿರುವುದಾಗಿ ರಷ್ಯಾ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿ ಸಿರಿಯಾದಲ್ಲಿಂದು ಹಲವಾರು ಪ್ರಭುತ್ವUಳು  ಮತ್ತು ಪ್ರಭುತ್ವೇತರ ಸಶಸ್ತ್ರ ಗುಂಪುಗಳೂ ಇರುವುದರಿಂದ ಸಂದರ್ಭವು ಮತ್ತಷ್ಟು ಸಂಕೀರ್ಣಗೊಂಡಿದೆ. ಆದರೆ ಸಂಘರ್ಷದಲ್ಲಿರುವ ಎಲ್ಲರು ಸಹ ಸಶಸ್ತ್ರ ಸಂಘರ್ಷದ ಯಾವ ನಿಯಮಗಳನ್ನೂ ಪಾಲಿಸದೆ ಸಿರಿಯಾ ದೇಶವನ್ನು ವಿಧ್ವಂಸಗೊಳಿಸುತ್ತಿದ್ದಾರೆ.  ಈ ಘರ್ಷಣೆಗಳು ಮತ್ತಷ್ಟು ಬಿಗಡಾಯಿಸದಂತೆ ತಡೆಗಟ್ಟಬೇಕೆಂದರೆ ಅಂತರರಾಷ್ಟ್ರೀಯ ಸಮುದಾಯವು ಕೆಲವು ತತ್ವ ನಿಯಮಗಳನ್ನಾಧರಿಸಿದ ನಿರಂತರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಮೊದಲನೆಯದಾಗಿ, ವಿಶ್ವಸಂಸ್ಥೆಯು ಒಂದು ರಚನಾತ್ಮಕ ರಾಜತಾಂತ್ರಿಕ ಪ್ರಯತ್ನಗಳನ್ನು ಪ್ರಾರಂಭಿಸಬೇಕು. ಮತ್ತು ಸೈನಿಕ ಮಧ್ಯಪ್ರವೇಶ ಮತ್ತು ಬೆಂಬಲದ ಹೆಸರಿನಲ್ಲಿರುವ ಎಲ್ಲಾ ವಿದೇಶಿ ಮಧ್ಯಪ್ರವೇಶಗಳು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಮಾಡಬೇಕು. ಆದರೆ ಈ ಕ್ರಮವನ್ನು ಸಿರಿಯಾದ ಆಡಳಿತವನ್ನು ಬದಲಿಸುವ ಆಗ್ರಹದೊಂದಿಗೆ ಬೆಸೆಯಲಾಗಿಬಿಟ್ಟಿದೆ. ವಾಸ್ತವವೆಂದರೆ ಎಲ್ಲಾ ಬಗೆಯ ಸೈನಿಕ ಮಧ್ಯಪ್ರವೇಶಗಳು ಹಿಂತೆಗೆದುಕೊಂಡು ಸಂಬಂಧಪಟ್ಟ ಎಲ್ಲಾ ಪಕ್ಷಗಳ ನಡುವೆ ಪರಸ್ಪರ ವಿಶ್ವಾಸಗಳು ಮೂಡದೇ ಸಿರಿಯಾದ ಅಸ್ಸಾದ್ ಆಡಳಿತದೊಡನೆ ರಾಜತಾಂತ್ರಿಕ ವ್ಯವಹಾರ ಅಸಾಧ್ಯ. ಅಂಥ ಒಂದು ಪ್ರಯತ್ನವನ್ನು ಸಿರಿಯಾ ಸರ್ಕಾರಕ್ಕೆ ಕೊಡುತ್ತಿರುವ ರಿಯಾಯತಿ ಎಂದು ಭಾವಿಸಬಾರದು. ಬದಲಿಗೆ ಸಿರಿಯಾದ ಭೌಗೋಳಿಕ ಸಮಗ್ರತೆಗೆ ಮತ್ತು ಅದರ ಜನತೆಗೆ ಕೊಡುತ್ತಿರುವ ಗೌರವ ಎಂದು ಭಾವಿಸಬೇಕು. ಅಂಥಾ ಯಾವುದೇ ಬಹುಪಕ್ಷೀಯ ರಾಜತಾಂತ್ರಿಕ ಮಾತುಕತೆಗಳಿಗೆ ಈಗಲೂ ವಿಶ್ವಸಂಸ್ಥೆಯೇ ಒಂದು ಪ್ರಾಥಮಿಕ ವೇದಿಕೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೋ ಸರ್ವಾಧಿಕಾರವನ್ನು ಹೊಂದಿರುವ ದೇಶಗಳು ಅಂಥ ಪ್ರಯತ್ನಗಳಿಗೆ ತಡೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. ಆದರೂ ಇಂಥಾ ಯಾವುದೇ ವಿಷಯಗಳ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳಲು ವಿಶ್ವಸಂಸ್ಥೆಯ ಸರ್ವಸದಸ್ಯರ ಸಭೆಯನ್ನು (ಜನರಲ್ ಅಸೆಂಬ್ಲಿ)ಸೃಜನಶಿಲವಾಗಿ ಬಳಸಿಕೊಳ್ಳಬಹುದು.

ಎರಡನೆ ಅತಿ ಮುಖ್ಯ ಕರ್ತವ್ಯ ಅಲ್ಲಿನ ನಾಗರಿಕ ಬದುಕಿನ ಬಿಕ್ಕಟ್ಟನ್ನು ಬಗೆಹರಿಸುವ ಯತ್ನವನ್ನು ಪ್ರಾರಂಭಿಸುವುದು. ಒಂದು ಕೋಟಿಗಿಂತಲೂ ಹೆಚ್ಚಿನ ಸಿರಿಯನ್ನರು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ಹೊರದೇಶಗಳಿಗೆ ವಲಸೆ ಹೋಗಿರುವವರು, ಅಂತರಿಕವಾಗಿ ನಿರಾಶ್ರಿತರಾಗಿರುವವರು ಮತ್ತು ದೇಶದೊಳಗಿನ ಘರ್ಷಣೆಯಲ್ಲಿ ಸಿಕ್ಕಿಹಾಕಿಕೊಂಡವರೂ ಸೇರಿದ್ದಾರೆ. ಪಶ್ಚಿಮದ ದೇಶಗಳು ಸಿರಿಯಾದಿಂದ ನಿರಾಶ್ರಿತರು ಹರಿದು ಬರುತ್ತಿರುವ ಬಗ್ಗೆ ಸಾಕಷ್ಟು ಹುಯಿಲು ಎಬ್ಬಿಸಿದರೂ ವಾಸ್ತವದಲ್ಲಿ ಬಹುಪಾಲು ನಿರಾಶ್ರಿತರಿಗೆ ಆಶ್ರಯ ಕೊಟ್ಟಿರುವುದು ನೆರೆಹೊರೆಯ ದೇಶಗಳಾದ ಟರ್ಕಿ, ಲೆಬನಾನ್ ಮತ್ತು ಜೋರ್ಡಾನ್‌ಗಳು. ಇವರೆಲ್ಲರನ್ನೂ ಅದಷ್ಟು ಬೇಗ ತಮ್ಮ ತಮ್ಮ ಮನೆಗಳಿಗೆ ವಾಪಸ್ ಸೇರಿಸುವ ಜವಾಬ್ದಾರಿಯಿದೆ. ಇದಕ್ಕೆ ದೊಡ್ಡ ಮಟ್ಟದ ಸಹಾಯ-ಸಹಕಾರಗಳು ಮಾತ್ರವಲ್ಲದೆ ಹಿಂತಿರಿಗುವ ನಿರಾಶ್ರಿತರ ಭದ್ರತೆಯನ್ನೂ ಖಾತರಿಗೊಳಿಸುವ ಅಗತ್ಯವಿದೆ. ಇದರ ಜೊತೆಗೆ ಘರ್ಷಣೆಯೋತ್ತರ ಸಂದರ್ಭದಲ್ಲಿ ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಹಲವಾರು ಆರ್ಥಿಕ ಮತ್ತು ಸಾಮಾಜಿಕ ಕ್ರಮಗಳ ಅಗತ್ಯವೂ ಇದೆ. ಇದಕ್ಕೆ ಪ್ರಭುತ್ವ ಮತ್ತು ಅಂಥಾ ನೆರವನ್ನು ಒದಗಿಸುವ ಮಾನವೀಯ ಸಂಸ್ಥೆಗಳ ನಡುವೆ ಸಹಕಾರದ ಅಗತ್ಯವಿದೆ.

ಘರ್ಷಣೆಯ ಸಂದರ್ಭದಲ್ಲಿ ಆಗಿರಬಹುದಾದ ಹಕ್ಕುಗಳ ಉಲ್ಲಂಘನೆಯನ್ನು ಸರಿಪಡಿಸುವುದು ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಕಾರ ಸಿರಿಯಾದಲ್ಲಿ ಸಶಸ್ತ್ರ ಸಂಘರ್ಷದಲ್ಲಿ ತೊಡಗಿದ್ದ ಪ್ರತಿಯೊಂದು ಪಕ್ಷಗಳೂ ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿವೆ. ಆಕ್ರಮಣ, ನಗರ ಪ್ರದೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಳಿ ಮಾಡಿರುವುದು, ನಾಗರಿಕರನ್ನು ಮತ್ತು ತುರ್ತು ಚಿಕಿತ್ಸೆ ವಾಹನಗಳಂಥ ನಾಗರಿಕ ಸೇವೆಗಳ ಮೇಲೆ ಹಾಗೂ ಮಾರುಕಟ್ಟೆಯ ಮೇಲೆ ದಾಳಿ ನqಸಿರುವುದೂ ಇತ್ಯಾದಿ. ಸಿರಿಯನ್ ಅರಬ್ ರಿಪಬ್ಲಿಕ್‌ನಲ್ಲಿ ನಡೆದ ಅತಿರೇಕಗಳ ಬಗ್ಗೆ ವಿಚಾರಣೆ ನಡೆಸಿರುವ ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ತನಿಖಾ ಅಯೋಗವು ಅಲ್ಲಿ ನಡೆದಿರುವ ಲಿಂಗಾಧಾರಿತ ಮತ್ತು ಲೈಂಗಿಕ ಹಿಂಸಾಚಾರಗಳ ಬಗ್ಗೆ ವಿಶೇಷವಾಗಿ ವರದಿ ಮಾಡಿದೆ.

೨೦೧೬ರಲ್ಲಿ ವಿಶ್ವಸಂಸ್ಥೆಯ ಸರ್ವಸದಸ್ಯ ಸಭೆಯು ಸಿರಿಯಾದಲ್ಲಿ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರಗಳ ಬಗ್ಗೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಭವಿಷ್ಯದಲ್ಲಿ ಒಂದು ಅಂತರರಾಷ್ಟ್ರೀಯ ಅಪರಾಧ ವಿಚಾರಣಾ ನಡಾವಳಿಗಳನ್ನು ನಡೆಸಲು ಬೇಕಾದ

ಸಾಕ್ಷಿಗಳನ್ನು ಸಂಗ್ರಹಿಸಲೆಂದು ಒಂದು ಅಂತರರಾಷ್ಟ್ರೀಯ ನಿಷ್ಫಕ್ಷಪಾತಿ ಮತ್ತು ಸ್ವತಂತ್ರ ವ್ಯವಸ್ಥೆಯೊಂದನ್ನು ಸ್ಥಾಪಿಸಿತ್ತು. ಈ ಹಿಂದೆ ಈ ಪ್ರಕರಣಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸುವ ಪ್ರಯತ್ನಗಳು ವಿಫಲವಾಗಿದ್ದವು. ಅಂತರರಾಷ್ಟ್ರಿಯ ನ್ಯಾಯಾಲಯಗಳಲ್ಲಿ ನಡೆಸಲಾಗುವ ಮೊಕದ್ದಮೆಗಳು ಸಾಮಾನ್ಯವಾಗಿ ನಿರ್ದಿಷ್ಟ ಆಯ್ಕೆಗೆ ಒಳಪಟ್ಟಿರುತ್ತವೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಬಲಾಬಲಗಳ ಪ್ರಭಾವಗಳಿಗೆ ಒಳಪಟ್ಟಿರುತ್ತವೆಂಬುದನ್ನು ಹಿಂದಿನ ಹಲವಾರು ಅನುಭವಗಳು ರುಜುವಾತು ಪಡಿಸಿವೆ. ಆದರೂ ಹಿಂಸಾಚಾರಕ್ಕೊಳಗಾದವರು ಈಗಲೂ ಸಾಮೂಹಿಕ ಅತ್ಯಾಚಾರಗಳಂಥ ಪ್ರಕರಣಗಳಲ್ಲಿ ನ್ಯ್ಯಾಯವನ್ನು ಪಡೆದುಕೊಳ್ಳಲು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯು ಒಂದು ಉತ್ತಮ ಸಾಧನವೆಂದು ಅಭಿಪ್ರಾಯ ಪಡುತ್ತಾರೆ. ಹೀಗಾಗಿ ಅಂತರರಾಷ್ಟ್ರೀಯ ಕಾನೂನಿನ್ವಯ ಅಪರಾಧ ಎಸಗಿರುವ ಎಲ್ಲರ ಮೇಲೂ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಇದನ್ನು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸದಸ್ಯರಿರುವ ಸ್ವತಂತ್ರ ಹಾಗೂ ನಿಷ್ಪಕ್ಷಪಾತಿ ನ್ಯಾಯಮಂಡಳಿಯನ್ನು ರಚಿಸುವ ಮೂಲಕ ಸಾಧಿಸಬಹುದು.

ಶಾಂತಿಯನ್ನು ಸ್ಥಾಪಿಸಲು ನಡೆಸುವ ಯಾವುದೇ ಪ್ರಯತ್ನಗಳು ಸಂತ್ರಸ್ತ ಜನರನ್ನು ಒಳಗೊಂಡಿರಬೇಕು. ಶಾಂತಿ ಸ್ಥಾಪನೆಯಾಗಬೇಕೆಂದರೆ ಸರ್ಕಾರವು ಬದಲಾಗಲೇ ಬೇಕಾದ ಅಗತ್ಯವಿದ್ದರೆ ಆ ನಿರ್ಧಾರವನ್ನು ಸಿರಿಯಾದ ಜನರಿಗೆ ಬಿಟ್ಟುಬಿಡಬೇಕು. ಇತರ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸರ್ಕಾರ ಬದಲಾಗಬೇಕಿರುವುದು ಪೂರ್ವಶರತ್ತಾಗಬಾರದು.

ಶ್ರೀನಿವಾಸ್ ಬುರ್ರಾ ಅವರು ದೆಹಲಿಯ ದಕ್ಷಿಣ ಏಷಿಯಾ ವಿಶ್ವವಿದ್ಯಾಲಯದಲ್ಲಿದ್ದಾರೆ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com