ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದ್ದರೂ ಮೌನಿಯಾಗಿದ್ದಾರೆ ಮೋದಿ : ನ್ಯೂಯಾರ್ಕ್‌ ಟೈಮ್ಸ್‌

ನ್ಯೂಯಾರ್ಕ್ : ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದನ್ನು ತನ್ನ ಸಂಪಾದಕೀಯದಲ್ಲಿ ತೀವ್ರವಾಗಿ ಖಂಡಿಸಿರುವ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ, ಇಂಥ ಘಟನೆಗಳು ದೇಶದ ಮಹಿಳೆಯರು, ದಲಿತರು ಮತ್ತು ಮುಸ್ಲಿಮರು ಬೆದರಿಸುವ ಉದ್ದೇಶದಿಂದ ರಾಷ್ಟ್ರೀಯವಾದಿ ಶಕ್ತಿಗಳು ನಡೆಸುತ್ತಿರುವ ಸಂಘಟಿತ ಮತ್ತು ವ್ಯವಸ್ಥಿತ ಅಭಿಯಾನದ ಭಾಗವಾಗಿದೆ ಎಂದು ಮಂಗಳವಾರ ತಿಳಿಸಿದೆ.

ಮಹಿಳೆಯರ ಮೇಲೆ ದಾಳಿ ನಡೆಯುತ್ತಿದ್ದರೂ ಮೌನ ಎಂಬ ಶೀರ್ಷೀಕೆಯಡಿ ‘ನ್ಯೂಯಾರ್ಕ್ ಟೈಮ್ಸ್’ ದೈನಿಕದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ಅದರಲ್ಲಿ ಪ್ರಧಾನಿ ಮೋದಿ ಹೇಗೆ ಪದೇ ಪದೆ ಟ್ವೀಟ್ ಮಾಡುತ್ತಾರೆ ಮತ್ತು ತಮ್ಮನ್ನು ಪ್ರತಿಭಾವಂತ ಮಾತುಗಾರ ಎಂದು ತಿಳಿದುಕೊಂಡಿದ್ದಾರೆ ಎಂಬುದರತ್ತ ಬೆಟ್ಟು ಮಾಡಲಾಗಿದೆ. ಆದರೆ, ತಮ್ಮ ಭಾರತೀಯ ಜನತಾ ಪಕ್ಷದ ಆಧಾರವಾಗಿರುವ ರಾಷ್ಟ್ರೀಯವಾದಿ ಮತ್ತು ಕೋಮುವಾದಿ ಶಕ್ತಿಗಳ ಗುರಿಯಾಗುವ ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಪಾಯದ ಬಗ್ಗೆ ಮಾತನಾಡುವ ಸಮಯ ಬಂದಾಗ ಮೋದಿ ಧ್ವನಿಯನ್ನು ಕಳೆದುಕೊಳ್ಳುತ್ತಾರೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ. ಅತ್ಯಾಚಾರ ಪ್ರಕರಣಗಳು ದೇಶಕ್ಕೆ ನಾಚಿಕೆಯನ್ನುಂಟುಮಾಡಿದೆ ಎಂದು ಶುಕ್ರವಾರದಂದು ತಿಳಿಸಿದ್ದ ಮೋದಿ, ನಮ್ಮ ಹೆಣ್ಮಕ್ಕಳಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಹೇಳಿಕೆ ನೀಡಿದ್ದರು. ಆದರೆ ಅವರ ಈ ಹೇಳಿಕೆಯು ಘಟನೆ ನಡೆದ ಹಲವು ದಿನಗಳ ನಂತರ ಬಂದಿರುವುದರಿಂದ ಅಷ್ಟಾಗಿ ಪ್ರಮುಖವಾಗುವುದಿಲ್ಲ. ಅದರಲ್ಲೂ ಈ ಘಟನೆಯ ಬಗ್ಗೆ ಪ್ರಸ್ತಾಪಿಸುವಾಗ, ಕಳೆದ ಎರಡು ದಿನಗಳಿಂದ ಚರ್ಚಿಸಲಾಗುತ್ತಿರುವ ಘಟನೆಗಳು ಎಂದು ಹೇಳುವ ಮೂಲಕ ಅವರು ಘಟನೆಯನ್ನು ಸಾಮಾನ್ಯಗೊಳಿಸಿದ್ದಾರೆ ಎಂದು ಟೈಮ್ಸ್ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ತನ್ನ ರಾಜಕೀಯ ಪಕ್ಷದ ಅಂಗವಾಗಿರುವ ಸಂಘಟನೆಯ ಕಾರ್ಯಕರ್ತರು ಗೋರಕ್ಷಣೆಯ ನೆಪದಲ್ಲಿ ಮುಸ್ಲಿಂ ಮತ್ತು ದಲಿತರನ್ನು ಹತ್ಯೆಗೈದ ಸಂದರ್ಭದಲ್ಲೂ ಮೋದಿ ಇದೇ ದಾಟಿಯಲ್ಲಿ ಮಾತನಾಡಿದ್ದರು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಜನವರಿಯಲ್ಲಿ ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆದರೆ ಪ್ರಧಾನಿ ಮೋದಿ ಈ ಪ್ರಕರಣದಲ್ಲಿ ನೇರವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ. ಉತ್ತರ ಪ್ರದೇಶದ ಉನ್ನಾವೊದಲ್ಲಿ ತನ್ನ ಪಕ್ಷದ ಶಾಸಕನೇ ಆರೋಪಿಯಾಗಿರುವ ಅತ್ಯಾಚಾರ ಪ್ರಕರಣದ ಬಗ್ಗೆಯೂ ಮೋದಿ ವೌನವಹಿಸಿದ್ದಾರೆ. ಮೋದಿಯ ಮೌನ ಆತಂಕವನ್ನುಂಟು ಮಾಡುತ್ತದೆ.

2012 ಮತ್ತು 2013ರ ಮಧ್ಯೆ ಹೊಸದಿಲ್ಲಿಯಲ್ಲಿ ನಡೆದ ಚಲಿಸುತ್ತಿರುವ ಬಸ್‌ನಲ್ಲಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಕಾಂಗ್ರೆಸ್ ಸರಿಯಾಗಿ ಸ್ಪಂದಿಸದ ಪರಿಣಾಮ ಪಕ್ಷಕ್ಕೆದುರಾದ ಪರಿಸ್ಥಿತಿಯಿಂದ ಮೋದಿ ಪಾಠ ಕಲಿತಂತೆ ಕಾಣುತ್ತಿಲ್ಲ ಎಂದು ‘ನ್ಯೂಯಾರ್ಕ್ ಟೈಮ್ಸ್’ ಬರೆದುಕೊಂಡಿದೆ. ಭಾರತೀಯರ ಅಗತ್ಯಕ್ಕೆ ಸ್ಪಂದಿಸುತ್ತೇನೆ ಎಂದು ಮೋದಿ ಭರವಸೆ ನೀಡಿದ ಕಾರಣದಿಂದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಜಯಗಳಿಸಿತ್ತು. ಆದರೆ ನಂತರ ಅವರು ಮೌನಕ್ಕೆ ಶರಣಾಗಿರುವುದು, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಯಾವ ವ್ಯಕ್ತಿಗೂ ಭಯ ಹುಟ್ಟಿಸುತ್ತದೆ ಎಂದು ಸಂಪಾದಕೀಯ ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com