ನ್ಯಾ. ಲೋಯಾ ಸಾವು ಪ್ರಕರಣ : SIT ತನಿಖೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೆಹಲಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗಿಯಾಗಿದ್ದಾರೆನ್ನಲಾದ ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಲೋಯಾ ಅವರ ನಿಗೂಢ ಸಾವಿನ ಕುರಿತ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪ್ರಕರಣ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳಿಗೆ ಯಾವುದೇ ಅರ್ಹತೆ ಇಲ್ಲ. ಅಲ್ಲದೆ ಈ ಪ್ರಕರಣದ ವಿಚಾರಣೆ ನಡೆಸಿರುವ ಎಲ್ಲಾ ನ್ಯಾಯಾಧೀಶರ ಹೇಳಿಕೆಗಳನ್ನೂ ಅನುಮಾನಿಸಲು ಸಾಧ್ಯವಿಲ್ಲ. ನ್ಯಾಯಾಂಗ ದುರುಪಯೋಗವಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
ಈ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದ್ದು, ಲೋಯಾ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು ಎಂದು ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳು ರಾಜಕೀಯ ಪ್ರೇರಿತವಾದವುಗಳಾಗಿದ್ದು, ನ್ಯಾಯಾಲಯಕ್ಕೆ ಅವಮಾನವಾಗುವ ರೀತಿ ನಡೆದುಕೊಳ್ಳುತ್ತಿರುವುದಾಗಿ ಸರ್ಕಾರಿ ಪರ ವಕೀಲರು ವಾದ ಮಾಡಿದ್ದಾರೆ.
ಈ ಹಿಂದೆ ಈ  ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್‌ ಮಾರ್ಚ್‌ 16ಕ್ಕೆ ಕಾಯ್ದಿರಿಸಿತ್ತು. ಈ ವೇಳೆ ಪತ್ರಕರ್ತ ಬಿ.ಎಸ್‌ ಲೋನೆ ಹಾಗೂ ಸಾಮಾಜಿಕ ಕಾರ್ಯಕರ್ತ ತೆಹ್ಸೀನ್‌ ಪೂನಾವಾಲ ಸ್ವತಂತ್ರವಾಗಿ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ಅಮಿತ್‌ ಶಾ ಹಾಗೂ ಕೆಲ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದನ್ನು ಎಸ್‌ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಿದ್ದರು.
 ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ , ರಾಜಸ್ತಾನ ಗೃಹ ಸಚಿವ ಗುಲಾಬ್‌ ಚಂದ್‌ ಕಠಾರಿಯಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆನ್ನಲಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲೋಯಾ ಅವರು ತೀರ್ಪು ನೀಡುವ ಹಿಂದಿನ ದಿನ ಸಾವಿಗೀಡಾಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com