Kathua Rape : ದುರುಳರಿಗೆ ಬಲಿಯಾದ ಬಾಲಕಿ ಆಸಿಫಾಗೆ ಕಾವ್ಯ ನಮನ…

ಜಮ್ಮು ಕಾಶ್ಮೀರದ ಕಠುವಾದಲ್ಲಿ 8 ವರ್ಷದ ಬಾಲಕಿ ಆಸಿಫಾ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದಾಗಿ ದೇಶವೇ ತಲೆ ತಗ್ಗಿಸುವಂತಾಗಿದೆ. ಪುಟ್ಟ ಬಾಲಕಿಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದರು.

ಅಮಾನವೀಯ ಪ್ರಕರಣದಲ್ಲಿ ಬಲಿಯಾದ ಬಾಲಕಿ ಆಸಿಫಾ ಕುರಿತಂತೆ ಜಲೀಲ್ ಮುಕ್ರಿಯವರು ಬರೆದ ಕವನ..

ಮನೆಗೆ ಮರಳಿ
ಎಲ್ಲರಿಗೂ ಕೀಟಲೆ ಕೊಡುವುದು
ಅಮ್ಮನಿಗೆ ಮಾರ್ಕ್ಸ್ ಕಾರ್ಡ್
ತೋರಿಸುವುದು ಬಾಕಿಯಿತ್ತು…

ಅಮ್ಮ ಕೊಟ್ಟ ಬುತ್ತಿಯ ಅನ್ನ
ಉಳಿಸಿದಕ್ಕಾಗಿ
ಅಮ್ಮನ ಬೈಗುಳ ಬಾಕಿಯಿತ್ತು…

ಅಮ್ಮನ ಸೆರಗಲ್ಲಿ
ತಲೆಯಿಟ್ಟು ಮಲಗುವುದು ಬಾಕಿಯಿತ್ತು…

ತಂದೆಯ ಹೆಗಲೇರಿ
ಆಟವಾಡುವುದು ಬಾಕಿಯಿತ್ತು…

ಅಳುವುದು ನಗುವುದು
ಕೋಪ ರಾಜಿ ಮಾಡುವುದು
ಬಾಕಿಯಿತ್ತು…

ಅಂಗಡಿಯಿಂದ ಅಪ್ಪನಲ್ಲಿ
ಹಠ ಹಿಡಿದು ಆಟಿಕೆ ತಂದು
ಆಡುವುದು ಬಾಕಿಯಿತ್ತು…

Image result for asifa kathua

ಕಲಿತು ಬೆಳೆದು ಮನೆಮಂದಿಯ
ಸೇವೆ ಮಾಡುವುದು
ಗುಡಿಸುವುದು
ಅಂಗಳ ಸಾರುವುದು ಬಾಕಿಯಿತ್ತು…

ಕೈಗೆ ಮದರಂಗಿ ಹಚ್ಚಿ
ನಾಚುವುದು ಬಾಕಿಯಿತ್ತು…

ಕನಸಿನ ರಾಜಕುಮಾರ
ಕುದುರೆಯೇರಿ ಬರುವುದು ಬಾಕಿಯಿತ್ತು…

ಗೆಳತಿಯರು ನನ್ನ
ಸತಾಯಿಸುವುದು ಬಾಕಿಯಿತ್ತು…

ನನ್ನವನ ಪ್ರೀತಿಯಿಂದ
ಮುನಿಸುವುದು ಬಾಕಿಯಿತ್ತು…

ಶಾಲಾ ಟೀಚರಿಗೆ ನಮಸ್ತೆ
ಹೇಳುವುದು ಬಾಕಿಯಿತ್ತು…

ಗೆಜ್ಜೆಕಟ್ಟಿ ಮನೆಯೊಳಗೆ ಆಡಿ
ಖುಷಿ ಪಡುವುದು ಬಾಕಿಯಿತ್ತು…

ತವರುಮನೆಗೆ ವಿದಾಯ ನೀಡುವಾಗ
ಅಪ್ಪನನ್ನು ಅಳಿಸುವುದು ಬಾಕಿಯಿತ್ತು…

ಜೀವನದಲ್ಲಿ ಸುಂದರ ಕನಸು
ದೊಡ್ಡ ಬದುಕು ಬಾಕಿಯಿತ್ತು…

ಹೊಸಕಿದರು, ಹಿಂಡಿದರು
ಹಂಚಿ ಹಸಿಮಾಂಸ ತಿಂದರು,
ನಾನೊಮ್ಮೆ ನೀನೊಮ್ಮೆ ಎಂದು
ದಾನವ ರಾಕ್ಷಸರನ್ನೂ ನಾಚಿಸಿದರು…

ನನ್ನ ಚೀತ್ಕಾರ, ನನ್ನ ಹಾಹಾಕಾರ
ಯಾರಿಗೂ ಕೇಳಲಿಲ್ಲ
ಮಂದಿರದ ದೇವನು ಆಲಿಸಲಿಲ್ಲ
ಶ್ರೀಕೃಷ್ಣ ಪರಮಾತ್ಮನೂ ಬರಲಿಲ್ಲ…

ಅಪ್ಪಂದಿರೇ, ಅಮ್ಮಂದಿರೇ
ಅಣ್ಣಂದಿರೇ…
ಯಾತನೆಯ ಹೇಳಲು ನಾನಿಲ್ಲ,
ಹೇಳಿದರೆ
ಇಲ್ಲಿ ನ್ಯಾಯವೂ ಸಿಗಲಿಕ್ಕಿಲ್ಲ,
ಅತ್ಯಾಚಾರ ಕೊಲೆ ಭಯೋತ್ಪಾದನೆಯ
ಧರ್ಮಗಳಲ್ಲಿ ಅಳೆಯುವವರಲ್ಲಿ
ಹೇಳಿಯೂ ಪ್ರಯೋಜನವಿಲ್ಲ..

ಅಕ್ಷತ,ಅಕ್ಷಯ,ನಿರ್ಭಯ,ಸೌಜನ್ಯ,
ದಾನಮ್ಮ,ಝೈಬುನ್ನಿಸಾ
ಅಕ್ಕಂದಿರ ಜೊತೆಗೆ ನಾನು ಹೋಗುತ್ತೇನೆ,
ದೇವನಲ್ಲಿ ನಮ್ಮ ನ್ಯಾಯ ಕೇಳುತ್ತೇವೆ…
ಅವನ ನ್ಯಾಯ ದೇಗುಲದಲ್ಲಿ
ನ್ಯಾಯ ಸಿಗದೆ ಇರಲಿಕ್ಕಿಲ್ಲ

ಪ್ರೀತಿ ಇರಲಿ

ಜಲೀಲ್ ಮುಕ್ರಿ

Leave a Reply

Your email address will not be published.