ಉನ್ನಾವ್‌ ಅತ್ಯಾಚಾರ ಪ್ರಕರಣ : BJP ಶಾಸಕನನ್ನು ವಶಕ್ಕೆ ಪಡೆದ ಸಿಬಿಐ ಪೊಲೀಸರು

ಉನ್ನಾವ್ : ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಯಾಗಿರುವ  ಬಿಜೆಪಿ ಶಾಸಕ ಕುಲದೀಪ್‌ ಸೆಂಗಾರ್ ಅವರನ್ನು ಶುಕ್ರವಾರ ಸಿಬಿಐ ವಶಕ್ಕೆ ಪಡೆದಿದೆ.

ಗುರುವಾರ ಶಾಸಕನ ವಿರುದ್ದ ಐಪಿಸಿ ಸೆಕ್ಷನ್‌ ಎ363, 366, 506ರ ಅನ್ವಯ ಹಾಗೂ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ಕಾಯ್ದೆಯಡಿ ಕೇಸ್‌ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಾಸಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆದರೆ ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ದ ಸಂಚು ರೂಪಿಸಲಾಗುತ್ತಿದೆ. ನಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಶಾಸಕನಿಂದ ಅತ್ಯಾಚಾರ ನಡೆದಿತ್ತು. ಶಾಸಕನ ಜೊತೆ ಆತನ ಸಹೋದರ ಸಹ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದರು.

ದೂರು ವಾಪಸ್‌ ಪಡೆಯುವಂತೆ ಏಪ್ರಿಲ್‌ 3ರಂದು ಶಾಸಕನ ಸಹೋದರ ಅತುಲ್‌ ಸಿಂಗ್‌ ಸೆಂಗಾರ್‌ ಸಂತ್ರಸ್ತೆಯ ತಂದೆ ಮೇಲೆ ಹಲ್ಲೆ ನಡೆಸಿದ್ದ. ಈ ಪ್ರಕರಣ ಸಂಬಂಧ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.  ನ್ಯಾಯ ಒದಗಿಸುವಂತೆ ಆಗ್ರಹಿಸಿ ಯುವತಿ ಕುಟುಂಬಸ್ಥರು ಇದೇ ಏಪ್ರಿಲ್‌ 8ರಂದು ಸಿಎಂ ಯೋಗಿ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ಪ್ರಕರಣ ಕಾವು ಪಡೆದುಕೊಳ್ಳುತ್ತಿದ್ದಂತೆ ಯೋಗಿ ಆದಿತ್ಯನಾಥ್‌, ಪ್ರಕರಣವನ್ನು ಸಿಬಿಐಗೆ ವಹಿಸಿ ಕೈ ತೊಳೆದುಕೊಂಡಿದ್ದರು.

Leave a Reply

Your email address will not be published.