ತಿಪ್ಪೇಸ್ವಾಮಿಗೆ ಟಿಕೆಟ್ ಸಿಗದ ಹಿನ್ನೆಲೆ : ಶ್ರೀರಾಮುಲು ವಿರುದ್ಧ ಪೊರಕೆ ಹಿಡಿದು ನಿಂತ ಮಹಿಳೆಯರು

ಚಿತ್ರದುರ್ಗ : ಮೊಳಕಾಲ್ಮೂರಿನ ಬಿಜೆಪಿ ಶಾಸಕ ಎಸ್‌.ತಿಪ್ಪೇಸ್ವಾಮಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಆರೋಪಿಸಿ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಶುಕ್ರವಾರ ಮೊಳಕಾಲ್ಮೂರಿನಿಂದ ಪ್ರಚಾರ ಆರಂಭಿಸಬೇಕಿದ್ದ ಶ್ರೀರಾಮುಲು ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಶ್ರೀರಾಮುಲು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಲ್ಲುತೂರಾಟ ನಡೆದಿದ್ದು, ಕಾರಿನ ಗಾಜು ಪುಡಿಯಾಗಿದೆ. ಇನ್ನು ಪ್ರಚಾರಕ್ಕೂ ಮುನ್ನ ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಶ್ರೀರಾಮುಲು ಬಳಿಕ ಪ್ರಚಾರಕ್ಕೆ ತೆರಳಿದ್ದು, ಈ ವೇಳೆ ತಿಪ್ಪೇಸ್ವಾಮಿ ಬೆಂಬಲಿಗರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಗೋ ಬ್ಯಾಕ್‌ ಶ್ರೀರಾಮುಲು ಎಂಬ ಘೋಷಣೆ ಕೂಗಲಾಗುತ್ತಿದೆ. ಅಲ್ಲದೆ ತಿಪ್ಪೇಸ್ವಾಮಿ, ಶ್ರೀರಾಮುಲು ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಮಹಿಳೆಯರು ಚಪ್ಪಲಿ ಹಾಗೂ ಪೊರಕೆ ಹಿಡಿದು ಶ್ರೀರಾಮುಲು ವಿರುದ್ಧ ತಿರುಗಿಬಿದ್ದಿದ್ದಾರೆ.

Leave a Reply

Your email address will not be published.