ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೆ ಪತ್ನಿ ವಿಯೋಗ

ಬೆಂಗಳೂರು :  ಹೆಸರಾಂತ ಸಾಹಿತಿ ಮತ್ತು ಚಲನ ಚಿತ್ರ ನಿದೇರ್ಶಕರಾದ ಪ್ರೊ. ಬರಗೂರು ರಾಮಚಂದ್ರಪ್ಪನವರ ಪತ್ನಿ ಎಸ್.ರಾಜ ಲಕ್ಷ್ಮೀ ಅವರು ( 66 ವರ್ಷ) ಇಂದು ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ಅವರು ಬಹುಕಾಲದಿಂದ ಆಸ್ಪತ್ರೆ ಸೇರಿದ್ದು ನಾಲ್ಕು ಬಾರಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು.

ಸುಮಾರು 50 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ. ಡಾ. ರಾಜ್ ಕುಮಾರ್ ಅವರ ಪ್ರಭಾವದಿಂದ ರಾಜಲಕ್ಷ್ಮಿ ಯವರು ನೇತ್ರದಾನ ಮಾಡಲು ನಿರ್ಧರಿದ್ದರು. ಅದರಂತೆ ಈಗ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದನಹಳ್ಳಿ ಗ್ರಾಮದಲ್ಲಿ ಜನಿಸಿದ ರಾಜಲಕ್ಷ್ಮಿ ಯವರು ಬಿ.ಎ. ಮತ್ತು ಹಿಂದಿ ವಿದ್ವಾನ್ ಪದವಿಧರರಾಗಿದ್ದರು. ಕನ್ನಡ ಸಾಹಿತ್ಯ ಪ್ರೇಮಿಯಾದ ಅವರು ನಾಲ್ಕು ದಶಕಗಳ ಹಿಂದೆಯೇ ಸಾಹಿತಿ ಬರಗೂರರೊಂದಿಗೆ ಅಂತರ್ ಜಾತಿಯ ವಿವಾಹವಾಗಿ ದಿಟ್ಡತನ ತೋರಿದ್ದರು. ಬದುಕಿನುದ್ದಕ್ಕೂ ಬರಗೂರರ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಕ್ರಿಯಾಶೀಲತೆಗೆ ಬೆಂಬಲವಾಗಿ ನಿಂತಿದ್ದರು. ರಾಜಲಕ್ಷ್ಮಿ ಯವರು ಪತಿ ಪ್ರೊ. ಬರಗೂರು ರಾಮಚಂದ್ರಪ್ಪ, ಇಬ್ಬರು ಪುತ್ರರಾದ ಮೈತ್ರಿ ಬರಗೂರು, ಸ್ಫೂರ್ತಿ ಬರಗೂರು, ಸೊಸೆ ಪದ್ಮಶ್ರೀ ಮತ್ತು ಮೊಮ್ಮಗ ಆಕಾಂಕ್ಷ್ ಇವರನ್ನು ಬಿಟ್ಟು ಅಗಲಿದ್ದಾರೆ. ಜೆ.ಪಿ.ನಗರದ ಸ್ವಗೃಹದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮದ್ಯಾಹ್ನ 1-00 ರವರೆಗೆ ಸಾರ್ವಜನಿಕ ದರ್ಶನ ಕ್ಕೆ ಅವಕಾಶವಿದ್ದು ರಾಜಲಕ್ಷ್ಮಿ ಯವರ ಅಂತ್ಯ ಕ್ರಿಯೆಯು ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com