ನನಗೆ 5 ದಿನ ಪ್ರಧಾನಿಯಾಗೋ ಅವಕಾಶ ಕೊಟ್ಟರೆ ದೇಶ ಬದಲಿಸ್ತೇನೆ : ಹುಚ್ಚ ವೆಂಕಟ್

ಬೆಂಗಳೂರು : ಈ ಬಾರಿಯ ವಿಧಾನಸಭಾ ಚುನಾವಣೆ ಮೂಲಕ ತಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಬೆಂಗಳೂರಿನ ರಾಜ ರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನಟ, ನಿರ್ಮಾಪಕ, ನಿರ್ದೇಶಕ ಹುಚ್ಚ ವೆಂಕಟ್ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜ ರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿದರೆ ಪಕ್ಷದ ಮೂಲಕ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ.

ನಾನು ಯಾರಿಗೂ ಸೀರೆ ಹಂಚಿ, ಹೆಂಡ, ಹಣ ನೀಡಿ ಮತಯಾಚನೆ ಮಾಡುವುದಿಲ್ಲ. ಕ್ಷೇತ್ರದ ಎಲ್ಲಿಯೂ ಕೂಡಾ ಚುನಾವಣಾ ಪ್ರಚಾರ ಮಾಡುವುದಿಲ್ಲ. ಜನರಿಗೆ ಕೈ ಕೂಡಾ ಮುಗಿಯುವುದಿಲ್ಲ. ಜನರ ಕೆಲಸ ಮಾಡಬೇಕು ಎಂದು ನಾನು ಬರುತ್ತಿದ್ದು, ನನಗೆ ಜನತೆ ಕೆಲಸ ನೀಡಿ ಅವರ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ನನ್ನನ್ನು ಸೋಲಿಸಿದರೆ ನೀವು ನಿಮ್ಮನ್ನು ಮಾರಿಕೊಂಡಿದ್ದೀರ ಎಂದು ಅರ್ಥ ಎಂದ ಹುಚ್ಚ ವೆಂಕಟ್, ನನ್ನನ್ನು ಸೋಲಿಸಿದರೂ ನಾನು ಬೇಸರಪಡದೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ಇದ್ದು ಜನರ ಕೆಲಸ ಮಾಡಬೇಕೆಂದಿಲ್ಲ ಎಂದು ಹುಚ್ಚ ವೆಂಕಟ್ ಸ್ಪಷ್ಟಪಡಿಸಿದರು. ನಾನು ಶಾಸಕನಾಗಿ ಮುಂದೆ ಮುಖ್ಯಮಂತ್ರಿ ಕೂಡಾ ಆಗುತ್ತೇನೆ. ನಂತರ ಪ್ರಧಾನಿ ಕೂಡ ಆಗುತ್ತೇನೆ ಎಂದ ಹುಚ್ಚ ವೆಂಕಟ್, ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತೇನೆ, ನನಗೆ ಕೇವಲ ೫ ದಿನ ಪ್ರಧಾನಿಯಾಗುವ ಅವಕಾಶ ನೀಡಲಿ ದೇಶವನ್ನು ಬದಲಾಯಿಸುತ್ತೇನೆ. ಇಡೀ ವಿಶ್ವವೇ ಭಾರತ ನಂ. ೧ ಎನ್ನುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com