ನಾನು ಹಿಂದೂ, ನನ್ನ ಅಕೌಂಟ್‌ಗೆ ಯಾಕೆ ದುಡ್ಡು ಹಾಕಿಲ್ಲ ಅಂತ ಮೋದಿನ ಕೇಳಿ : ಜಿಗ್ನೇಶ್‌ ಮೇವಾನಿ

ಶಿರಸಿ : ಸಂವಿಧಾನ ಉಳಿವಿಗಾಗಿ ಕರ್ನಾಟಕ – ಜನ ರಾಜಕಾರಣದ ಜನಾಂದೋಲನ ಇಂದು ಶಿರಸಿಯಲ್ಲಿ ನಡೆಯುತ್ತಿದ್ದು, ತಮಟೆ ಭಾರಿಸುವ ಮೂಲಕ ಜಿಗ್ನೇಶ್‌ ಮೇವಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ನಾವು ಹಿಂದೂ, ನಮ್ಮ ಆಕೌಂಟ್ ಗೆ 15 ಲಕ್ಷ ಹಾಕಿ ಎಂದು ಮೋದಿಯವರನ್ನು ಕೇಳಿ. 2 ಕೋಟಿ ಯುವಕರಿಗೆ ಉದ್ಯೋಗ ನೀಡುವಂತೆ ಕೇಳಿ ಎಂದು ಕರೆ ನೀಡಿದ್ದಾರೆ.

ಕರ್ನಾಟಕದ ಚುನಾವಣೆ ಯಾಕೆ ಮಹತ್ವದ್ದು ಏಕೆಂದರೆ, ನಾಲ್ಕು ವರ್ಷ ಕೇಂದ್ರದ ಆಡಳಿತ ನೋಡಿದ್ದೀರಿ. ಆದರೆ ಅವರು ದನದ ಹೆಸರಲ್ಲಿ ರಾಜಕಾರಣ ಮಾಡಿದರು. ಲವ್ ಜಿಹಾದ ವಿವಾದದಲ್ಲಿ ಕಾಲ ಕಳೆದರು. ದಲಿತರ ಹತ್ಯೆಗಳಾದವು. ಈ ಕಾರಣದಿಂದ ಬಿಜೆಪಿ ಸೋಲಿಸಿ. ಪ್ರತಿ ಸೆಕೆಂಡು ನಮಗೆ ಮುಖ್ಯ. ಗ್ರಾಮಗಳಿಗೆ ತೆರಳಿ, ನಗರದ ಬೀದಿಗಳಲ್ಲಿ ಹೋಗಿ. ರೈತರ ಆತ್ಮಹತ್ಯೆಗೆ ಕೇಂದ್ರ ಯಾಕೆ ಸ್ಪಂದಿಸಿಲ್ಲ ಎಂದು ಪ್ರಶ್ನೆ ಮಾಡಿ ಎಂದಿದ್ದಾರೆ.
ಬಾಬಾ ಸಾಹೇಬ್ ಗೆ ಗೌರವ ಕೊಡುವೆ ಎನ್ನುವ ಮೋದಿ ಊನಾದಲ್ಲಿ ದಲಿತರ ಚರ್ಮ ಸುಲಿದ ಬಗ್ಗೆ ಮಾತನಾಡುತ್ತಿಲ್ಲ. ವೇಮುಲನ ಹತ್ಯೆಗೆ ಪ್ರತಿಕ್ರಿಯಿಸಿಲ್ಲ ಎಂದು ಜಿಗ್ನೇಶ್‌ ಟೀಕಿಸಿದ್ದಾರೆ. ನಾನು ಬೀದಿಯಲ್ಲಿ ಹುಟ್ಟಿ ಮಾತು ಕಲಿತು ಬೆಳೆದು ಬಂದವ. ನನ್ನ ಧ್ವನಿ ಬೀದಿಯಿಂದಲೇ ಗುಜರಾತ್ ವಿಧಾನಸಭೆ ಪ್ರವೇಶಿಸಿದೆ ಎಂದಿದ್ದಾರೆ.
ನನ್ನ ಧ್ವನಿ ಬಂದ್ ಮಾಡಲು ಮೋದಿ, ಶಾರಿಂದಲೂ ಆಗಿಲ್ಲ. ಇನ್ನು ಇಂಥ ವಿದ್ಯುತ್ ಕಡಿತ ನನ್ನ ಧ್ವನಿಯ ನಿಲ್ಲಿಸಲು ಅಸಾಧ್ಯ. ಸಂವಿಧಾನ ಬದಲಿಸುವ ಮತ್ತು ಮುಗಿಸುವ ಮಾತು ಭಾಗವತ್ ಮತ್ತು ಮೋದಿ ಹೊಟ್ಟೆಯಲ್ಲಿ ಅಡಗಿತ್ತು. ಅದು ಅನಂಕುಮಾರ್ ಹೆಗಡೆ ಅವರ ಬಾಯಿಯಿಂದ ಬಂದಿದೆ. ಸಾಮಾಜಿಕ ನ್ಯಾಯದ ಸಮಾನ ಸಮಾಜವನ್ನು ನಾವು ಬಯಸುತ್ತೇವೆ. ಆದರೆ ಇದನ್ನು ಆರ್.ಎಸ್.ಎಸ್. ಮೊದಲಿನಿಂದಲೂ ವಿರೋಧಿಸಿದೆ. ಕೋಮುವಾದಿ ರಾಜಕಾರಣದಲ್ಲಿ ಮೆರೆಯುತ್ತಿದೆಇದನ್ನು ಇದೇ ಕರ್ನಾಟಕದ ಚುನಾವಣೆಯ ಮೂಲಕ ತಡೆಯಿರಿ ಎಂದಿದ್ದಾರೆ. ನಮ್ಮನ್ನು ಯಾರು ಖರೀದಿಸಲಾರರು, ನಾವು ಮಾರಾಟ ಸಹ ಆಗಲಾರೆವು. ಈ ಬದ್ಧತೆಯಿಂದ ಆಂದೋಲನ ಮುಂದುವರಿಸಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com