ಸಂಭ್ರಮದಲ್ಲಿದ್ದಾಗಲೇ ಬಂದೆರಗಿಯ ಜವರಾಯ: ಅಮ್ಮನ 100ನೇ ಬರ್ತ್ಡೇಯಂದೇ ಮಗಳ ಸಾವು!
ಮಂಗಳೂರು : ತಾಯಿಯ 100ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ವೇಳೆ ಮಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿಯಾ ಡಿಸೋಜಾ ಕಳೆದ ಮಾರ್ಚ್ 30ರಂದು ತನ್ನ 100ನೇ ವರ್ಷದ ಹುಟ್ಟಿದ ದಿನ ಆಚರಿಸಿದ್ದರು. ತನ್ನ ತಾಯಿಯ ನೂರನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಕೆನಡಾದಲ್ಲಿ ವಾಸವಾಗಿರುವ ಪುತ್ರಿ, 75 ರ ಹರೆಯದ ಗ್ಲೋರಿಯಾ ಲೋಬೋ , ನಿನ್ನೆ ಪಾಂಡೇಶ್ವರದ ಹಿರಿಯರ ಆಶ್ರಮದಲ್ಲಿ ಅದ್ಧೂರಿ ಹುಟ್ಟುಹಬ್ಬ ಆಯೋಜಿಸಿದ್ದರು.
ತಾಯಿ ಬದುಕಿನ ವಿವಿಧ ಹಂತದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ನೂರರ ಹರೆಯದ ತನ್ನ ತಾಯಿ ಕೇಕ್ ಕಟ್ ಮಾಡೋವಾಗ ಗ್ಲೋರಿಯಾ ತಾನೇ ಬರೆದ ಕವನ ಹೇಳಿ ಕೂಡಾ ಸಂಭ್ರಮ ಪಟ್ಟಿದ್ದರು. ಇಷ್ಟೆಲ್ಲಾ ನಡೆದು ಕೆಲವೇ ಕ್ಷಣಗಳಲ್ಲಿ ಗ್ಲೋರಿಯಾ ನಿಂತಲ್ಲೇ ಕುಸಿದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಗ್ಲೋರಿಯಾ ಸಾವನ್ನಪ್ಪಿದ್ದಾರೆ. ತಾಯಿ ಹುಟ್ಟು ಹಬ್ಬ ಆಚರಿಸಲೆಂದು ಕಳೆದ ಎರಡು ವಾರದ ಹಿಂದೆಯಷ್ಟೇ ಗ್ಲೋರಿಯಾ ಕೆನಡಾದಿಂದ ಮಂಗಳೂರಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.