ನನ್ನ ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಮೋಸ ಮಾಡಿವೆ : H.D ದೇವೇಗೌಡ

ಹಾಸನ : ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ನೀರು ನಿರ್ವಹಣಾ ಮಂಡಳಿ ರಚನೆಗೆ ಲೋಕಸಭೆಯಲ್ಲಿ ತಮಿಳುನಾಡು ಪರ ರಾಜಕಾರಣಿಗಳು ಹೋರಾಟ ಮಾಡುತ್ತಿದ್ದು, ಈ ಸಂಬಂಧ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಹೇಳಿಕೆ ನೀಡಿದ್ದಾರೆ.

ಈಗಾಗಲೇ ಒಮ್ಮೆಗೇ ಸುಪ್ರೀಂ ಆದೇಶ ಜಾರಿ ಕಷ್ಷ ಎಂದು ಕೇಂದ್ರ ಸರ್ಕಾರ ಹೇಳಿದೆ.  ಆದರೂ ತಮಿಳುನಾಡಿನ ಮಿತ್ರರು ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಒಬ್ಬ ಸಂಸದರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದಾರೆ. ಒಂದು ರಾಜ್ಯ ಹೀಗೆ ಹಠ ಹಿಡಿಯುವುದು ಸರಿಯಲ್ಲ.ಸೌಹಾರ್ದಯುತವಾಗಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ಕೇಂದ್ರದವರು ಮತ್ತೆ ಸುಪ್ರೀಂ ಅಭಿಪ್ರಾಯ ಕೇಳುವುದಾಗಿ ಹೇಳಿದ್ದಾರೆ. ಮೊದಲು ಕೇಂದ್ರ‌ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ 4 ರಾಜ್ಯಗಳ ಸಿಎಂ ಒಳಗೊಂಡ ಕಮಿಟಿ ಮಾಡಲಿ. ಅಲ್ಲಿ‌ ನೀರಿನ‌ ಸ್ಥಿತಿಗತಿ ಅಧ್ಯಯನ ಮಾಡುವ ತಜ್ಞರೂ ಇರಲಿ.ಅದರ‌ 5 ವರ್ಷಗಳ ಚಟುವಟಿಕೆ ನೋಡೋಣ, ಸಾಧಕ ಬಾಧಕ ನೋಡಿ ನಂತರ ಮುಂದಿನ ನಿರ್ಧಾರಕ್ಕೆ ಬರಲಿ. ಅಲ್ಲಿಯವರೆಗೂ ಯಾರೂ ಉದ್ರೇಕಕ್ಕೊಳಗಾಗಬೇಡಿ ಎಂದಿದ್ದಾರೆ.

ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗುವ ವಿಚಾರ ಸಂಬಂಧ ಮಾತನಾಡಿರುವ ಅವರು, ಅನೇಕ ನಾಯಕರು ಈ ಬಗ್ಗೆ ಮಾತನಾಡಿದ್ದಾರೆ.ನನ್ನದು ಅಸಹಕಾರ ಅಲ್ಲ, ಸದ್ಯಕ್ಕೆ ನಾನು ಒಕ್ಕೂಟ ಸೇರಲ್ಲ. ಕರ್ನಾಟಕ ಚುನಾವಣೆ ಮುಗಿಯುವರೆಗೆ ನಾನು‌ ಈ ಬಗ್ಗೆ ಮಾತನಾಡಲ್ಲ. ನನ್ನ ರಾಜ್ಯಕ್ಕೆ 2 ರಾಷ್ಟ್ರೀಯ ಪಕ್ಷಗಳಿಂದ ಪೆಟ್ಟು ಬಿದ್ದಿದೆ. ಇವರಿಬ್ಬರ ವಿರುದ್ಧ ನಾನು ಹೋರಾಡಬೇಕಿದೆ.  ಚುನಾವಣೆ ಬಂದಾಗ ಅಡಿಕೆ ಸಮಸ್ಯೆ ಮಾತನಾಡುವವರು ಇಲ್ಲೀವರೆಗೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಮಾಯಾವತಿ ರಾಜ್ಯದ 3 ಕಡೆ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ.ಬಾಂಬೆ, ಹೈದ್ರಾಬಾದ್ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಸಮಾವೇಶ ನಡೆಯಲಿವೆ.ಏಪ್ರಿಲ್ 2 ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.ಒಂದು ಲಕ್ಷಕ್ಕೂ ಅಧಿಕ ಜನ‌ ಸೇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.