EPW Editorial : ಟ್ರಂಪ್‌ ಆಡಳಿತ- ನಿರಂತರ ಬದಲಾಗುವ ನಿಕಟವರ್ತಿಗಳು….

ತಮ್ಮ ಸುತ್ತಲೂ ತಮಗೆ ಅತಿ ನಿಷ್ಟವಾದ ನಿಕಟವರ್ತಿಗಳಿರಬೇಕೆಂದು ಅಮೆರಿಕದ ಅಧ್ಯಕ್ಷರು ಬಯಸುತ್ತಾರೆ; ಹಾಗೂ ಅವರ ಬಗ್ಗೆ ಸಣ್ಣ ಸಂಶಯ ಬಂದರೂ ಮುಲಾಜಿಲ್ಲದೆ ಕಿತ್ತು ಹಾಕುತ್ತಾರೆ.

ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಇದೇ ಮಾರ್ಚ್ ೧೩ರಂದು ತಮ್ಮ ಗೃಹ ಕಾರ್ಯದರ್ಶಿಯಾಗಿದ್ದ ರೆಕ್ಸ್ ಟಿಲ್ಲರ್ಸನ್ ಅವರನ್ನು ಟ್ವೀಟ್ ಮಾಡುವುದರ ಮೂಲಕ ಕೆಲಸದಿಂದ ಕಿತ್ತೊಗೆದರು. ಇದು ಕೇವಲ ಟಿಲ್ಲರ್‌ಸನ್ ಅವರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವ ಕ್ರಮವಾಗಿರಲಿಲ್ಲ. ಬದಲಿಗೆ ಗೃಹ ಕಾರ್ಯದರ್ಶಿಯ ಹುದ್ದೆಯ ಬಗ್ಗೆ ಅವರಿಗಿರುವ ಅಪಾರ ಅಸಡ್ಡೆಯನ್ನು ಎತ್ತಿತೋರಿಸುವ ಕ್ರಮವಾಗಿತ್ತು. ನಂತರದಲ್ಲಿ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಅಮೆರಿಕದ ಅಟಾರ್ನಿ ಜನರಲ್ ಆದ ಜೆಫ್ ಸೆಷನ್ಸ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ತಿಗೇಷನ್ (ಎಫ್‌ಬಿಐ)ನ ಮಾಜಿ ಉಪ ನಿರ್ದೇಶಕರಾಗಿದ್ದ ಆಂಡ್ರ್ಯೂ ಮೆಕಾಬೆ ಅವರನ್ನು ಉಚ್ಚಾಟಿಸಿದರು. ಆದರೆ ಆ ವೇಳೆಗಾಗಲೇ ಅಧ್ಯಕ್ಷರ ಕಾರ್ಯಾಲಯ ವೈಟ್‌ಹೌಸಿನಿಂದ ಸತತ ನಿಂದನೆಗೊಳಗಾಗಿದ್ದ ಅವರು ತಮ್ಮ ಹುದ್ದೆಯನ್ನು ತೆರವುಗೊಳಿಸಿ ತಮಗೆ ಲಭ್ಯವಿದ್ದ ದೀರ್ಘ ರಜೆಯ ಮೇಲೆ ತೆರಳಿದ್ದರಲ್ಲದೆ ತಮಗೆ ೫೦ ವರ್ಷ ವಯಸ್ಸು ಆದ ತಕ್ಷಣ ಅರ್ಹ ನಿವೃತ್ತಿ ಪಡೆದುಕೊಳ್ಳುವ ಯೋಜನೆಯಲ್ಲಿದ್ದರು. ಈ ಎರಡನೇ ಉಚ್ಚಾಟನೆಯಂತೂ ಟ್ರಂಪ್ ಆಡಳಿತಕ್ಕೆ ನಿಷ್ಟರಾಗಿರಲಿಲ್ಲ ಎಂಬ ಏಕೈಕ ಕಾರಣದಿಂದ ಕೊಟ್ಟ ಕಿರುಕುಳವಾಗಿತ್ತು. ಅದರ ಜೊತೆಗೆ ೨೦೧೬ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಕುರಿತು ವಿಶೇಷ ನ್ಯಾಯವಾದಿ  ರಾಬರ್ಟ್ ಮುಲ್ಲರ್ ನಡೆಸುತ್ತಿದ್ದ ತನಿಖೆಯ ಬಗೆಗಿನ ಅಸಮಧಾನವೂ ಇದರ ಹಿಂದೆ ಇತ್ತು. ಮುಲ್ಲರ್ ಅವರು ಟ್ರಂಪ್ ಅವರ ಸಂಘಟನೆಗಳಲ್ಲಿ, ಅವರ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಮತ್ತು ಅವರ ವ್ಯವಹಾರೋದ್ಯಮಗಳ ಸಾಮ್ರಾಜ್ಯದಲ್ಲಿ ರಷ್ಯಾದ ಬಂಡವಾಳ ಹೂಡಿಕೆಯ ಕುರಿತು ತನಿಖೆಗೆ ಆದೇಶಿಸಿದ್ದರು. ಅಷ್ಟು ಮಾತ್ರವಲ್ಲದೆ ಅವರು ಅಧ್ಯಕ್ಷರ ಕಚೇರಿಗೆ ಒಂದು ಪ್ರಶ್ನಾವಳಿಯನ್ನೇ ಕಳಿಸಿದ್ದಾರೆ. ಸ್ವಲ್ಪ ಸಮಯದಲ್ಲೇ ಸ್ವಯಂ ಅಧ್ಯಕ್ಷ ಟ್ರಂಪ್ ಅವರನ್ನು ಈ ಬಗ್ಗೆ ವಿಚಾರಣೆಗೆ ಗುರಿಪಡಿಸಲಿದ್ದಾರೆ.

ಇದೇ ಜನವರಿಯಲ್ಲಿ ತಾನೇ ಬಿಡುಗಡೆಯಾದ ಪತ್ರಕರ್ತ ಮೈಖೇಲ್ ವುಲ್ಫ್ ಅವರ ಫೈರ್ ಅಂಡ್ ಫ್ಯೂರಿ: ಇನ್ಸೈಡ್ ದಿ ಟ್ರಂಪ್ ವೈಟ್ ಹೌಸ್ (ಟ್ರಂಪ್ ಅವರ ವೈಟ್ ಹೌಸಿನೊಳಗಿನ ಬೆಂಕಿ ಮತ್ತು ಬೇಗುದಿ) ಎಂಬ ಪುಸ್ತಕದಲ್ಲಿ ಹೇಗೆ ಟ್ರಂಪ್‌ನ ಅತ್ಯಂತ ನಿಕಟವರ್ತಿಗಳೂ ಸಹ ತಮ್ಮ ಕೆಲವೇ ತಿಂಗಳುಗಳ ಅನುಭವದಲ್ಲಿ ತಮ್ಮ ಅಧ್ಯಕ್ಷರು ಕೇವಲ ಅನರ್ಹ, ಅಜ್ನಾನಿ ಮತ್ತು ಅಧ್ಯಕ್ಷನಾಗಲು ಅಸಮರ್ಥ ಎಂಬುದನ್ನು ಮಾತ್ರವಲ್ಲದೆ ಟ್ರಂಪ್ ಅವರು ಮಾನಸಿಕ ಸ್ಥಿಮಿತತೆ ಇಲ್ಲದ ದುರಹಂಕಾರಿ ಎಂಬುದನ್ನೂ ಕಂಡುಕೊಂಡರೆಂಬ ವಾಸ್ತವವನ್ನು ಲೇಖಕರು ಬಯಲಿಗೆಳೆದಿದ್ದಾರೆ. ಟ್ರಂಪ್ ಅವರಿಗೆ ಖಂಡಿತಾ ಇವೆಲ್ಲ ತಿಳಿದಿದೆ. ಹೀಗಾಗಿಯೇ ತಮ್ಮ ಒಳವರ್ತುಲಗಳಲ್ಲಿದ್ದ ನಿಕಟವರ್ತಿಗಳನ್ನೆಲ್ಲ ಒಬ್ಬೊಬ್ಬರನ್ನಾಗಿ ವಜಾ ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಆ ದೇಶದ ಸಾರ್ವಜನಿಕರ ಮಟ್ಟಿಗೆ ಅಮೆರಿಕದ ಕುಬೇರರ ಒಂದು ವರ್ಗದಿಂದ ಪೋಷಿಸಲ್ಪಡುತ್ತಿರುವ ಅಮೆರಿಕದ ನವ ಫ್ಯಾಸಿಸ್ಟ್ ರಾಜಕೀಯವು ದೇಶದ ಆಡಳಿತದ ಚುಕ್ಕಾಣಿಯನ್ನು ಉಗ್ರ ರಾಷ್ಟ್ರೀಯವಾದಿ, ಜನಾಂಗೀಯವಾದಿ, ಸ್ತ್ರೀ ವಿರೋಧಿ, ಮತ್ತು ಕೋಟ್ಯಾಧೀಶನಾದ ಹಣಕಾಸು ಬಂಡವಾಳಿಗನೊಬ್ಬನ ಕೈಯಲ್ಲಿರಿಸಿದೆಯೆಂಬುದು ಮಾತ್ರ ಹೆಚ್ಚು ಪ್ರಸ್ತುತವಾಗಿರುವ ಸಂಗತಿಯಾಗಿದೆ. ಕಳೆದ ನಾಲಕ್ಕು ದಶಕಗಳಿಂದ ಅಮೆರಿಕದಲ್ಲಿ ಸಂಪತ್ತು ಮತ್ತು ಆದಾಯಗಳಲ್ಲಿನ ಅಸಮಾನತೆಯು ಸತತವಾಗಿ ಹೆಚ್ಚಾಗುತ್ತಾ, ಇದೀಗ ತನ್ನ ಉತ್ತುಂಗವನ್ನು ತಲುಪಿರುವ ವಿದ್ಯಮಾನವನ್ನು ಗಮನಿಸುತ್ತಿರುವವರಿಗೆ ಈ ಬೆಳವಣಿಗೆಯು ಅಚ್ಚರಿಯನ್ನೇನೂ ತಂದಿಲ್ಲ.

ದೇವು ಶೇ.೧ರಷ್ಟು ಜನರಿಂದ ಶೇ.೧ರಷ್ಟು ಜನರಿಗಾಗಿ ಮತ್ತು ಶೇ.೧ರಷ್ಟು ಜನರ ಆರ್ಥಿಕತೆಯಾಗಿ ವಿಕಸನಗೊಂಡ ಕ್ರಮವೇ ಟ್ರಂಪ್‌ನಂಥ ವ್ಯಕ್ತಿತ್ವವೊಂದು ಅಧ್ಯಕ್ಷರ ಕಾರ್ಯಾಲಯವನ್ನು ಆಕ್ರಮಿಸಬಹುದಾದ ಸಂದರ್ಭವನ್ನು ಹುಟ್ಟುಹಾಕಿದೆ. ಅಮೆರಿಕವು ಮತ್ತೆ ತನ್ನ ವೈಭವದ ದಿನಗಳಿಗೆ ಮರಳುವಂತೆ ಮಾಡಬೇಕೆಂದರೆ ತನ್ನ ಮೇಲೆ ಯಾವುದೇ ಶಾಸನಾತ್ಮಕ ಮತ್ತು ಕಾನೂನು ನಿರ್ಬಂಧಗಳಿರಬಾರದೆಂದು ಟ್ರಂಪ್ ಅವರು ಬಯಸುತ್ತಾರೆ. ತನ್ನ ಸ್ವಂತ ಸಂಘಟನೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ತನಗೆ ಹೇಗೆ ತನ್ನ ಸಂಸ್ಥೆಗಳ ಮೇಲೆ ಅನಿರ್ಬಂಧಿತ ಅಧಿಕಾರವಿದೆಯೋ ಅದೇ ರೀತಿ ಅಮೆರಿಕದ ಅಧ್ಯಕ್ಷನಾಗಿಯೂ ಎಲ್ಲಾ ಅಧಿಕಾರಗಳು ತನ್ನಲ್ಲೇ ಕೇಂದ್ರೀಕೃತಗೊಂಡಿರಬೇಕೆಂದು ಟ್ರಂಪ್ ಬಯಸುತ್ತಾರೆ. ಹೀಗಾಗಿಯೇ ಅವರು ೨೦೧೭ರ ಆಗಸ್ಟ್‌ನಲ್ಲಿ ಚಾರ್ಲಟ್ಸ್‌ವಿಲ್ಲೆಯಲ್ಲಿ ನಡೆದ ಬಲಪಂಥೀಯರನ್ನು ಒಂದುಗೂಡಿಸೋಣ ಪ್ರದರ್ಶನ ಮತ್ತು ಅದರ ವಿರುದ್ಧ ನಡೆದ ಪ್ರತಿಭಟನೆ ಹಾಗೂ ನಂತರ ಸಂಭವಿಸಿದ ಜನಾಂಗೀಯ ಹಿಂಸಾಚಾರಗಳ ಬಗ್ಗೆ ತಾನೊಬ್ಬ ಅಂತಿಮ ನ್ಯಾಯಾಧಿಕಾರಿಯಂತೆ ಹೇಳಿಕೆ ನೀಡಿದರು. ಹಾಗೂ ಆ ನವ ನಾಜಿವಾದಿಗಳನ್ನು ತುಂಬಾ ಸಜ್ಜನರು ಎಂದು ಸಮರ್ಥಿಸಿಕೊಂಡರು.

ಈಗ ತನ್ನ ಗೃಹ ಕಾರ್ಯದರ್ಶಿಯ ಜೊತೆಗಾಗಲೀ, ರಕ್ಷಣಾ ಕಾರ್ಯದರ್ಶಿಯ ಜೊತೆಗಾಗಲೀ ಒಂದಿಷ್ಟೂ ಸಮಾಲೋಚನೆ ನಡೆಸದೆ ಟ್ರಂಪ್ ಅವರು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್- ಉನ್ ಅವರ ಜೊತೆ ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರ ಹಿಂದಿನ   ಅವರ ಮನೋಗತವೇನು ಎಂಬುದು ಯಾರೂ ಅರಿಯರು. ಪ್ರಾಯಶಃ ಆ ಮಾತುಕತೆಯು ವಿಫಲವಾಗುವಂತೆ ನೋಡಿಕೊಂಡು ಯುದ್ಧಕ್ಕೊಂದು ನೆಪವನ್ನೂ ಸೃಷ್ಟಿಸಿಕೊಳ್ಳಬಹುದು.  ಈಗ ಅವರು ತಮ್ಮ ನಿಷ್ಟಾವಂತನಾದ ಮತ್ತು ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಆಫ್ ಅಮೆರಿಕ)ದ ಮುಖ್ಯಸ್ಥ ಮೈಕ್ ಪೊಂಪಿಯೊ ಅವರನ್ನು ಗೃಹ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದಾರೆ. ಹೀಗೆ ಒಬ್ಬ ಮಾಜಿ ಗೂಢಾಚಾರಿ ಇನ್ನುಮುಂದೆ ವಿದೇಶ ವ್ಯವಹಾರಗಳಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಾರೆ. ಮತ್ತು ಅಮೆರಿಕದ ಕಾರಾಗೃಹವೊಂದರಲ್ಲಿ ಸಿಐಎ ವತಿಯಿಂದ ಅತ್ಯಂತ ಹೀನಾಯ ಚಿತ್ರಹಿಂಸೆಗಳನ್ನು ಎಸಗಿದ ಆರೊಪಗಳಿಗೆ ಗುರಿಯಾಗಿದ್ದ ಜೀನಾ ಹಾಸ್ಪೆಲ್ ಅವರು ಪೊಂಪಿಯೋ ಅವರ ಉತ್ತರಾಧಿಕಾರಿಯಾಗಿ ಸಿಐಎ ನಿರ್ದೇಶಕರಾಗಲಿದ್ದಾರೆ.

ಸೋವಿಯತ್ ಒಕ್ಕೂಟದ ಕುಸಿತದ ನಂತರ ಅಮೆರಿಕವು ತನ್ನ ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೋ) ನ ಮಿತ್ರರೊಂದಿಗೆ ಸೇರಿಕೊಂಡು ಬಾಲ್ಕನ್ ಪ್ರದೇಶದಲ್ಲಿ, ಮಧ್ಯ ಏಷಿಯಾ ಮತ್ತು ಪಶ್ಚಿಮ ಏಷಿಯಾ ಹಾಗೂ ಉತ್ತರ ಆಫ್ರಿಕಾಗಳಲ್ಲಿ ಯುದ್ಧದಲ್ಲಿ ತೊಡಗಿಕೊಂಡಿದೆ ಮತ್ತು ಉಕ್ರೈನ್‌ನಲ್ಲಿ ಒಂದು ಕ್ಷಿಪ್ರ ದಂಗೆಯನ್ನೂ ಸಹ ಮಾಡಿಸಿದೆ. ಈಗ ಒಂದು ಬಂಡವಾಳಶಾಹಿ ದೇಶವಾಗಿರುವ ರಷಿಯಾ ಸಹ ಈ ದಾಳಿಗಳಿಗೆ ಪ್ರತ್ಯುತ್ತರವಾಗಿ ಈ ಹಿಂದೆ ಉಕ್ರೈನ್‌ನ ಭಾಗವಾಗಿದ್ದ ಕ್ರಿಮಿಯಾವನ್ನು ಆಕ್ರಮಿಸಿಕೊಂಡಿದೆಯಲ್ಲದೆ, ಪಶ್ಚಿಮ ಏಶಿಯಾದಲ್ಲಿ ತನ್ನ ಪ್ರಮುಖ ಮಿತ್ರ ದೇಶವಾದ ಅಸ್ಸಾದ್ ನೇತೃತ್ವದ ಸಿರಿಯಾ ಪ್ರಭುತ್ವದ  ವಿರುದ್ಧ ಸೌದಿ ಅರೇಬಿಯಾ ಮತ್ತು ಅಮೆರಿಕ ಪ್ರಾಯೋಜಿಸುತ್ತಿರುವ ಯುದ್ಧವನ್ನು ಹಿಮ್ಮೆಟ್ಟಿಸಲು ಸಿರಿಯಾವನ್ನು ಪ್ರವೇಶಿಸಿದೆ. ಅಮೆರಿಕದ ಸೈನಿಕ-ಕೈಗಾರಿಕಾ ಯಂತ್ರಾಂಗವು ಈಗಲೂ ರಷಿಯಾವನ್ನು ತನ್ನ ಪ್ರಮುಖ ಎದುರಾಳಿಯೆಂದೇ ಪರಿಗಣಿಸುತ್ತದೆ. ಆದರೆ ರಷಿಯಾದ ಬದಲಿಗೆ ಇಸ್ಲಾಮಿಕ್ ಸ್ಟೇಟ್, ಇರಾನ್, ಉತ್ತರ ಕೊರಿಯಾ ಮತ್ತು ಚೀನಾಗಳನ್ನು ಪ್ರಮುಖ ಎದುರಾಳಿಗಳೆಂದು ಭಾವಿಸುವ ಅಮೆರಿಕಾದ ಬಂಡವಾಳಶಾಹಿಗಳ ಒಂದು ವರ್ಗವನ್ನು ಟ್ರಂಪ್ ಆಡಳಿತವು ಪ್ರತಿನಿಧಿಸುತ್ತದೆ.

ಕಳೆದ ಒಂದೂವರೆ ವರ್ಷಗಳಿಂದ ಟ್ರಂಪ್ ಆಡಳಿತವು ಈ ಸೈನಿಕ-ಗೂಢಚರ್ಯೆ ವಿಭಾಗವನ್ನು ತಮ್ಮ ನೀತಿಗಳಿಗನುಸಾರವಾಗಿ ಬಗ್ಗಿಸಲು ಯತ್ನಿಸುತ್ತಿದ್ದರೂ ಸಫಲವಾಗಿಲ್ಲ. ಬದಲಿಗೆ ಈ ಯಂತ್ರಾಂಗವು ಡೆಮಾಕ್ರಟಿಕ್ ಪಕ್ಷದ ಬೆಂಬಲದೊಂದಿಗೆ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಬೇಕಾದ ಮಾಹಿತಿಗಳನ್ನು ನಿರಂತರವಾಗಿ ’ಸೋರಿಕೆ’ ಮಾಡುತ್ತಿದೆ. ತನ ವಿರುದ್ಧ ತೀವ್ರ ವಾಗ್ದಂಡನೆ ಅಥವಾ ವಜಾ ಆಗಬಹುದಾದ ಸಾಧ್ಯತೆಯನ್ನು ಮನಗಂಡಿರುವ ಟ್ರಂಪ್ ಅವರು ಸಾಧ್ಯವಾದಷ್ಟು ತನ್ನ ಆಪ್ತ ವಲಯದಲ್ಲಿ ತನಗೆ ಸಂಪೂರ್ಣ ನಿಷ್ಟರಾದವರನ್ನು ಮಾತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಟ್ರಂಪ್ ಆqಳಿತವಾಗಲೀ, ಅಥವಾ ಡೆಮಾಕ್ರಟಿಕ್ ಪಕ್ಷದಿಂದ ಬೆಂಬಲಿತವಾದ ಸೈನಿಕ-ಗೂಢಚರ್ಯೆ ಯಂತ್ರಾಂಗವಾಗಲೀ, ಅಮೆರಿಕದೊಳಗೆ ಮತ್ತು ವಿಶ್ವದಲ್ಲಿ ಪ್ರಜಾತಾಂತ್ರಿಕ ಆಶಯಗಳನ್ನು ಸಧೃಢಗೊಳಿಸುವ ಅಂತರಿಕ ಅಥವಾ ವಿದೇಶಿ ನೀತಿಗಳಿಗೆ ಬದ್ಧರಾಗಿಲ್ಲವೆಂಬುದಂತೂ ಸ್ಪಷ್ಟವಾಗಿದೆ. ಜಗತ್ತಿನ ಪ್ರಜಾಂತ್ರಿಕ ಹಕ್ಕುಗಳಿಗೆ ಇಬ್ಬರೂ ಅಪಾಯಕಾರಿಗಳೇ ಆಗಿದ್ದಾರೆ.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com