EPW EDITORIAL : ಅರವಿಂದ್ ಕೇಜ್ರಿವಾಲ್ ಎಂಬ ಜಟಿಲ ಒಗಟು ….!

  ದೆಹಲಿಯ ಮುಖ್ಯಮಂತ್ರಿಗಳು ತನ್ನ ರಾಜಕೀಯ ವಿರೋಧಿಗಳ ಎದಿರು ಮಾಡಿಕೊಳ್ಳುತ್ತಿರುವ ತಪ್ಪೊಪ್ಪಿಗೆಗಳು ಒಂದು ಹಂತದವರೆಗೆ ಮಾತ್ರ ಅರ್ಥಪೂರ್ಣವಾಗಿರುತ್ತದಷ್ಟೆ.

ಭಾರತದ ರಾಜಕೀಯ ರಂಗದಲ್ಲಿ ಆಮ್ ಆದ್ಮಿ ಪಕ್ಷವು (ಆಪ್) ಮಿಕ್ಕ ಪಕ್ಷಗಳಿಗಿಂತ ಎಷ್ಟು ಭಿನ್ನವೆಂಬುದಕ್ಕೆ ಅದರ ಅಂತರಿಕ ಬಿಕ್ಕಟ್ಟುಗಳು ಬಹಿರಂಗವಾಗಿ ಎಷ್ಟು ಬೆತ್ತಲುಗೊಳ್ಳುತ್ತವೆ ಎಂಬುದು ಕೂಡಾ ಉದಾಹರಣೆಯಾಗಿಬಿಡುತ್ತಿದೆ. ಒಂದು ಭ್ರಷ್ಟಾಚಾರ ವಿರೋಧಿ ನೆಲೆಯಿಂದ ಕಟ್ಟಲ್ಪಟ್ಟ, ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳುಳ್ಳ ಸಾವಿರಾರು ಸ್ವಯಂಸೇವಕ ಕಾರ್ಯಕರ್ತರಿಂದ ಪ್ರೇರೇಪಿಸಲ್ಪಟ್ಟ, ಮತ್ತು ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳಿಗಿಂತ ಭಿನ್ನವಾದ ಮೂರನೇ ದಾರಿಯೊಂದರ ರಾಜಕೀಯ ಅನ್ವೇಷಣೆಯಲ್ಲಿದ್ದ ಈ ಪಕ್ಷವು ದೆಹಲಿಯಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಲ್ಲೂ ಚಳವಳಿಯ ಹವಾದಿಂದ  ಹೊರಬಂದಿರಲಿಲ್ಲ. ಕಾಲಕಳೆದಂತೆ ಈ ಪಕ್ಷದಲ್ಲೂ ಸಾಧ್ಯವಿದ್ದಷ್ಟು  ಅವಕಾಶವಾದಿಗಳು ಸೇರಿಕೊಂಡರು. ಆದರೆ ಈಗಲೂ ಆಮ್ ಆದ್ಮಿ ಪಕ್ಷವೂ ಒಂದು ಪರ್ಯಾಯ ರಾಜಕಾರಣದ ಪ್ರತೀಕವೆಂದು ಭಾವಿಸುವ ಹಲವಾರು ಕಾರ್ಯಕರ್ತರ ಉತ್ಸಾಹದಿಂದಲೇ ನಡೆಸಲ್ಪಡುತ್ತಿದೆ.

ಆದರೆ ದೆಹಲಿಯ ಮುಖ್ಯಂತ್ರಿ ಕೇಜ್ರಿವಾಲರು ತಾವು ಈ ಹಿಂದೆ ಯಾವ ರಾಜಕೀಯ ಎದುರಾಳಿಗಳ ಮೇಲೆ ಬಹಿರಂಗ ದಾಳಿ ನಡೆಸಿದ್ದರೋ ಅವರೆಲ್ಲರ ಬಳಿ ಬಹಿರಂಗವಾಗಿ ಕ್ಷಮೆ ಕೋರುವ ತೀರ್ಮಾನವನ್ನು  ತೆಗೆದುಕೊಳ್ಳುವ ಮೂಲಕ ತನ್ನ ಬೆಂಬಲಿಗರಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟುಹಾಕಿದ್ದಾರೆ. ಅವರು ಕುಖ್ಯಾತವಾದ ಮಾದಕ ವಸ್ತುಗಳ ವ್ಯಾಪಾರದಲ್ಲಿ ತೊಡಗಿದ್ದಾರೆಂದು ಆರೋಪ ಹೊರಿಸಿದ್ದ ಪಂಜಾಬಿನ ಶಿರೋಮಣಿ ಅಕಾಲಿ ದಳದ ನಾಯಕರಾದ ಬಿಕ್ರಂ ಸಿಂಗ್ ಮಜೀಥಿಯಾ ಅವರ ಬಳಿ, ಮತ್ತು  ಟೆಲಿಕಾಂ ಸಂಸ್ಥೆಯೊಂದರ ಪರವಾಗಿ ವಕಾಲತ್ತು ವಹಿಸಿದ್ದರಿಂದ ಹಿತಾಸಕ್ತಿಗಳ ಘರ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪ ಹೊರಿಸಿದ್ದ ಕಪಿಲ್ ಸಿಬಲ್ ಮತ್ತು ಮತ್ತು ಅವರ ಮಗ ಅಮಿತ್ ಅವರುಗಳ ಬಳಿ ಮತ್ತು ಭ್ರಷ್ಟಾಚಾರಿಗಳ ಪಟ್ಟಿಯಲ್ಲಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿಯವರ ಹೆಸರನ್ನು ಸೇರಿಸಿದ್ದಕ್ಕಾಗಿ ಗಡ್ಕರಿ ಅವರ ಬಳಿಯೂ ಕ್ಷಮೆಯಾಚಿಸಿದ್ದಾರೆ.

ಕೇಜ್ರಿವಾಲರ ಈ ಕ್ಷಮಾಯಾಚನೆಗಳು ಆಪ್ ಬೆಂಬಲಿಗರಿಗೆ ಅದರಲ್ಲೂ ೨೦೧೭ರ ಚುನಾವಣೆಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ತಮ್ಮ ರಾಜಕೀಯ ಪ್ರಚಾರದ ಕೇಂದ್ರೀಯ ವಸ್ತುವನ್ನಾಗಿ ಮಾಡಿಕೊಂಡಿದ್ದ ಆಪ್ ಪಕ್ಷದ ಪಂಜಾಬ್ ಘಟಕಕ್ಕೆ ತೀವ್ರ ಭ್ರಮನಿರಸನವನ್ನುಂಟುಮಾಡಿದೆ. ಪಕ್ಷದ ಕೆಲವು ಪ್ರಮುಖ ಬೆಂಬಲಿಗರು ಇದರಿಂದಾಗಿ ಪಕ್ಷದಿಂದ ದೂರ ಉಳಿದಿದ್ದಾರೆ. ಆಪ್ ಪಕ್ಷದ ಮಾಜಿ ನಾಯಕಿ ಅಂಜಲಿ ದಮಾನಿಯಾ ಅವರು ಕೇಜ್ರಿವಾಲರ ಈ ನಡೆಯಿಂದ ತಾನು ಮೋಸ ಹೋಗಿದ್ದೇನೆ ಎಂದು ಹೇಳಿದ್ದಾರೆ. ಕೇಜ್ರಿವಾಲರು ಈ ರೀತಿ ಕ್ಷಮಾ ಯಾಚನೆ ಮಾಡುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳಿಗೆ ಶರಣಾಗಿದ್ದಾರೆ ಮತ್ತು ಇದರಿಂದ ಪಕ್ಷದ ಪ್ರತಿಷ್ಟೆಗೆ ಮತ್ತು ಭವಿಷ್ಯಕ್ಕೆ ದೊಡ್ಡ ಪೆಟ್ಟಾಗಿದೆ ಎಂಬುದು ಇವರೆಲ್ಲರ ಟೀಕೆಗಳ ಸಾರಾಂಶವಾಗಿದೆ.

ಆದರೂ ಕೇಜ್ರಿವಾಲರ ಬೆಂಬಲಿಗರು ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಅವರ ಪ್ರಕಾರ ತಮ್ಮಮೇಲೆ ಹೂಡಲಾಗಿರುವ ವಿವಿಧ ಮಾನನಷ್ಟ ಮೊಕದ್ದಮೆಗಳಿಗಾಗಿ ದೇಶಾದ್ಯಂತ ಓಡಾಡುತ್ತಾ ಸಮಯ ವ್ಯರ್ಥಗೊಳಿಸುವ ಬದಲಿಗೆ ಕೇಜ್ರಿವಾಲರು ಆಡಳಿತದ ಮೇಲೆ ಗಮನಹರಿಸಲು ತೀರ್ಮಾನಿಸಿರುವುದರಿಂದಲೇ ಈ ಕ್ಷಮಾಯಾಚನೆಗಳನ್ನು ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆಗಳು ಹೋರಾಟಗಾರರನ್ನು ನಿತ್ರಾಣಗೊಳಿಸುವ ಸಾಧನವೆಂದು ಅವರು ವಾದಿಸುತ್ತಾರೆ. ಅಂತ ಪ್ರಕರಣಗಳಲ್ಲಿ ಶಿಕ್ಷೆಯಾದಲ್ಲಿ ಹಲವಾರು ವರ್ಷಗಳ ಜೈಲುಶಿಕ್ಷೆಯಾಗುವ ಸಂಭವವೂ ಇರುತ್ತದೆ. ಕೇಜ್ರಿವಾಲರು ಪಕ್ಷದ ಅಮೂಲ್ಯ ಆಸ್ತಿಯಾಗಿರುವುದರಿಂದ ಈ ಹಂತದಲ್ಲಿ ಅಂಥದೇನಾದರೂ ಸಂಭವಿಸಿದರೆ ಪಕ್ಷಕ್ಕೆ ದೊಡ್ಡ ನಷ್ಟವಾಗುತ್ತದೆಂಬುದು ಅವರ ಅಭಿಪ್ರಾಯ. ತಂತ್ರೋಪಾಯಗಳ ಸಹ ವೀರಕೌಶಲ್ಯದ ಭಾಗವೆಂಬುದು ಅವರ ವಾದ.

ಈ ವಾದದಲ್ಲೂ ಒಂದಷ್ಟು ತಥ್ಯವಿದೆ. ಆಪ್ ಸರ್ಕಾರವು ದೆಹಲಿಯಲ್ಲಿ ಅಪಾರವಾದ ಒತ್ತಡವನ್ನು ಎದುರಿಸುತ್ತಿದೆ. ದೆಹಲಿಯ ರಾಜ್ಯಪಾಲರುಗಳು ಹಲವಾರು ಬಾರಿ ಕೇಜ್ರಿವಾಲರ ಸರ್ಕಾರದ ಹಲವು ನೀತಿತೀರ್ಮಾನಗಳನ್ನು ತಿರಸ್ಕರಿಸುವ ಮೂಲಕ ದೆಹಲಿ ಸರ್ಕಾರದ  ಮೇಲಿನ ಅಂತಿಮ ಪರಮಾಧಿಕಾರ ತಮ್ಮದೇ ಹೊರತು ರಾಜ್ಯ ಸರ್ಕಾರದ್ದಲ್ಲವೆಂಬುದನ್ನು ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. ದೆಹಲಿ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವೃತ್ತಿಜೀವನದ ಮೇಲೆ ಕೇಂದ್ರ ಸರ್ಕಾರಕ್ಕಿರುವಷ್ಟು ಅಧಿಕಾರ ದೆಹಲಿ ಸರ್ಕಾರಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಆಪ್ ಸರ್ಕಾರವು ಅಧಿಕಾರಿಗಳಿಂದ ಅನುಭವಿಸಿದಷ್ಟು ಕಿರುಕುಳವನ್ನು ಯಾವ ವಿರೋಧಿ ಪಕ್ಷಗಳ ಸರ್ಕಾರವೂ ಅನುಭವಿಸಿರಲಿಕ್ಕಿಲ್ಲ.

ಹೀಗಾಗಿ ದೆಹಲಿಯಲ್ಲಿ ತನ್ನ ಪಕ್ಷದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ವಿದ್ಯುತ್ ದರಗಳ ಕಡಿತ, ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ತಂದಿರುವ ಅಚ್ಚರಿಯ ಸುಧಾರಣೆಗಳು ಮತ್ತು ಮೊಹಲ್ಲ ಕ್ಲಿನಿಕ್ಕುಗಳ ಯಶಸ್ವೀ ಕಾರ್ಯಾಚರಣೆಗಳಿಂದ ದೆಹಲಿಯ ಬಡವರಿಂದ ತಾವು ಗಳಿಸಿರುವ ಬೆಂಬಲವನ್ನು ಕಾಪಾಡಿಕೊಂಡರೆ ಸಾಕೆಂಬ ತೀರ್ಮಾನಕ್ಕೆ ಪಕ್ಷವು ಬಂದಂತಿದೆ. ಆಗ ಅದರ ಕಾರ್ಯಕ್ಷೇತ್ರವು ಸೀಮಿತವಾಗಿ ಪರಿಣಾಮಕಾರಿ ಕೆಲಸಗಳು ಸಾಧ್ಯವಾಗಬಹುದು. ಇದಕ್ಕೆ ತದ್ವಿರುದ್ಧವಾಗಿ ೨೦೧೪ರಲ್ಲಿ ಅದು ದೇಶವ್ಯಾಪಿ ವಿಸ್ತರಿಸಿಕೊಳ್ಳಬೇಕೆಂಬ ಮಹದಾಶೆಯನ್ನು ಇಟ್ಟುಕೊಂಡಿತ್ತು. ಇದಲ್ಲದೆ ಕೇಜ್ರಿವಾಲರ ಎದುರಿಗೆ ಇನ್ನೊಂದು ನಾಟಕೀಯ ಸಾಧ್ಯತೆಯೂ ತೆರೆದುಕೊಂಡಿದೆ. ಅವರು ತಮ್ಮ ಎದುರಾಳಿಗಳ ವಿರುದ್ಧ ತಮ್ಮ ದಾಳಿಗಳನ್ನು ಮುಂದುವರೆಸುತ್ತಾ ಅದರ ಪರಿಣಾಮವಾಗಿ ಜೈಲು ಶಿಕ್ಷೆಯನ್ನೂ ಅನುಭವಿಸುತ್ತಾ ತಮ್ಮ ಅಧಿಕಾರವನ್ನು ಕಳೆದುಕೊಳ್ಳಬಹುದು. ಆದರೆ ಅದರಿಂದಾಗಿ ಮೊದಲೊಮ್ಮೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಮನ್ನಿಸಿ ದೆಹಲಿಯ ಜನತೆ ಎರಡನೇ ಬಾರಿ ವಿಶ್ವಾಸವಿಟ್ಟು ಕೊಟ್ಟ ಅಧಿಕಾರದ ಜವಾಬ್ದಾರಿಯನ್ನು ನಿರ್ವಹಿಸದ ಆರೋಪಕ್ಕೆ ಕೇಜ್ರಿವಾಲರು ಗುರಿಯಾಗಬೇಕಾಗುತ್ತದೆ.

ಪಕ್ಷ ಇಂದಿನ ಸ್ಥಿತಿಗತಿಗಳ ರಾಷ್ಟ್ರೀಯ ಪರಿಣಾಮಗಳನ್ನೂ ಸಹ ಕಡೆಗಣಿಸುವ ಪರಿಸ್ಥಿತಿಯಿಲ್ಲ. ಈ ಬಿಕ್ಕಟ್ಟು ಪಕ್ಷಕ್ಕೆ ಗಮನಾರ್ಹ ಬೆಂಬಲವಿರುವ ಮಹಾರಾಷ್ಟ್ರ ಮತ್ತು ಪಂಜಾಬಿನ ಕಾರ್ಯಕರ್ತರ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಸಾರ್ವತ್ರಿಕ ಚುನಾವಣೆಯು ಸಮೀಪವಾಗುತ್ತಿರುವ ಈ ಹೊತ್ತಿನಲ್ಲಿ ಆಪ್ ಪಕ್ಷದ ಧ್ವನಿಯು ಕ್ಷೀಣವಾದರೆ ವಿರೋಧ ಪಕ್ಷದಧ್ವನಿಯ ಒಟ್ಟು ಶಕ್ತಿಯೂ ಕುಗ್ಗಿದಂತಾಗುತ್ತದೆ. ದೆಹಲಿಯ ಮೇಲಿನ ಅಧಿಕಾರ ಮತ್ತು ಜನಬೆಂಬಲವನ್ನು ಧೃಡಿಕರಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ವಿಸ್ತರಣೆಯನ್ನು ಮಾಡಿಕೊಳ್ಳಬಹುದೆಂದು ಆಪ್ ನಾಯಕರು ಭಾವಿಸುತ್ತಿರಬಹುದು. ದೆಹಲಿಯ ಬಡಜನರು ಬೆಂಬಲಿಸುತ್ತಿರುವ ಮಾತ್ರಕ್ಕೆ ದೆಹಲಿ ಆಪ್ ಪರವಾಗಿಯೇ ಉಳಿಯುತ್ತದೆ ಎಂಬುದು ಖಾತರಿಯೇನಲ್ಲ.

ಈ ಬಿಕ್ಕಟು ಮುಂದಿಡುತ್ತಿರುವ ಅಸಲಿ ಪ್ರಶ್ನೆಯೇನೆಂದರೆ ಭವಿಷ್ಯದಲ್ಲಿ ಕೇಜ್ರಿವಾಲರು ಎಂಥ ರಾಜಕರಣಿಯಾಗಲಿದ್ದಾರೆಂಬುದಾಗಿದೆ. ಅವರು ರಾಜಕೀಯ ಪೈಪೋಟಿಯಲ್ಲಿರಬೇಕಾದ ರೋಷಾವೇಶಗಳಿಲ್ಲದ ಸೌಮ್ಯ ಪ್ರಚಾರಕರ್ತನಾಗುಳಿಯುವರೇ? ಆಗ ಅವರ ಸಂಘರ್ಷದ ತೋರಾವಳಿಗಳನ್ನು ನಂಬಿಕೊಂಡಿರುವ ಆಪ್ ಪಕ್ಷದ ಕಾರ್ಯಕರ್ತರುಗಳೇನು ಮಾಡುವರು? ೨೦೧೯ರ ಚುನಾವಣೆಯಲ್ಲಿ ದೆಹಲಿಯನ್ನು ಗೆದುಕೊಳ್ಳುವ ತುರ್ತಿನಿಂದ ಮೊದಲಿನ ಸಂಘರ್ಷ ಪ್ರಿಯ ಕೇಜ್ರಿವಾಲ್ ರಂಗಕ್ಕೆ ಮರಳಬಹುದು. ಆದರೆ ಇದು ಕೇಜ್ರಿವಾಲರ ವ್ಯಕ್ತಿತ್ವದ ಮೇಲೆ ಸಂಪೂರ್ಣವಾಗಿ ಆಧರಿಸಿರುವ ಆಪ್ ಪಕ್ಷದ ದೌರ್ಬಲ್ಯವನ್ನೂ ಎತ್ತಿತೋರಿಸುತ್ತದೆ. ಅವರ ವಿರೋಧಿಗಳು ಕೇಜ್ರಿವಾಲರನ್ನು ನಿಯಂತ್ರಿಸಲು ಸಾಧ್ಯವಾಗಿಬಿಟ್ಟರೆ ಇಡೀ ಆಪ್ ಪಕ್ಷದ ಪರಿಣಾಮಕಾರಿತನವೇ ಪ್ರಶ್ನೆಗೊಳಗಾಗಿಬಿಡುತ್ತದೆ. ಒಂದೊಮ್ಮೆ ಕೇಜ್ರಿವಾಲರ ಜೊತೆ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಉಳಿದುಕೊಂಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತೇ? ಒಂದು ವೇಳೆ ಪಕ್ಷವು ವಿವಿಧ ಹಂತದ ವೈವಿಧ್ಯತೆಯುಳ್ಳ ನಾಯಕತ್ವವನ್ನು ಬೆಳೆಸಿದ್ದರೆ ಪಕ್ಷಕ್ಕೆ ಈ ದುಸ್ಥಿತಿ ಬರುತ್ತಿರಲಿಲ್ಲ. ಭಾರತದ ಸಣ್ಣ ಪ್ರತಿರೂಪದಂತಿರುವ ದೆಹಲಿಯಲ್ಲಿ ಆಪ್ ಪಕ್ಷ ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂಬುದು ಬಡವರಿಗೆ ಮತ್ತು ಪಾರದರ್ಶಕತೆಗೆ ಬದ್ಧವಾಗಿರುವ ಒಂದು ವೇದಿಕೆಗೆ ಇರುವ ಸಾಧ್ಯತೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ಮೇಲಿರುವ ಹೊರೆಯನ್ನು ಇಳಿಸಿಕೊಳ್ಳಲು ಕೇಜ್ರಿವಾಲರು ಒಂದು ವ್ಯಾವಹಾರಿಕ ದಾರಿಯನ್ನು ಕಂಡುಕೊಂಡಿರಬಹುದಾದರೂ ಅವರು ಕಳೆದುಕೊಂಡಿರುವ ಐತಿಹಾಸಿಕ ಕ್ಷಣಗಳನ್ನು ಮಾತ್ರ ಮತ್ತೆ ಗಳಿಸಿಕೊಳ್ಳಲಾರರು.

 

ಕೃಪೆ: Economic and Political Weekly

ಅನು: ಶಿವಸುಂದರ್

Leave a Reply

Your email address will not be published.

Social Media Auto Publish Powered By : XYZScripts.com