ಏಕೈಕ ವಿದ್ಯಾರ್ಥಿಗೆ ಪಾಠ ಹೇಳಲು ಆ ಶಿಕ್ಷಕ ಮಾಡಿದ್ದಾನೆ ಇಂಥಹಾ ಕೆಲಸ !!!

ಜೀವನದಲ್ಲಿ ನಾವಷ್ಟೇ ಸುಖವಾಗಿದ್ರೆ ಸಾಕಪ್ಪ ಅಂದುಕೊಳ್ಳುವವರೇ ಜಾಸ್ತಿ. ಇವತ್ತಿನ ಕೆಲಸ ಯಾವಾಗ ಮುಗಿದು, ಮನೆಯಲ್ಲಿ ಸುಖವಾಗಿ ಕಾಲ ಕಳೆಯುತ್ತೇವೋ ಅಂತಾ ಅಂದುಕೊಳ್ಳುವವರೇ ಹೆಚ್ಚು. ಆದರೆ ಇಂಥ ಆಲೋಚನೆ ಮಾಡುವ ಸ್ವಾರ್ಥಿಗಳ ಮಧ್ಯೆಯೇ ನಿಸ್ವಾರ್ಥ ಶಿಕ್ಷಕನೊಬ್ಬ ತನ್ನ ಕೆಲಸದಿಂದ ಗುರುತಿಸಿಕೊಂಡಿದ್ದು, ಈಗ ಎಲ್ಲೆಲ್ಲೂ ಅವನದ್ದೇ ಗುಣಗಾನ.
ಆತ 29 ವರ್ಷದ ಶಿಕ್ಷಕ ರಜನಿಕಾಂತ್ ಮೆಂದೇ, ಒಂದೇ ಒಂದು ಹುಡುಗನಿಗೆ ವಿದ್ಯಾಭ್ಯಾಸ ಹೇಳಿ ಕೊಡೋಕೆ 50 ಕಿ.ಮೀಟರ್‍ ದೂರದ ದುರ್ಗಮ ಪ್ರದೇಶದ ಹಳ್ಳಿಯೊಂದಕ್ಕೆ ಹೋಗ್ತಾರೆ. ಮಳೆ, ಬೇಸಿಗೆ, ಚಳಿ ಇದ್ಯಾವುದನ್ನೂ ಲೆಕ್ಕಿಸದೇ ಸತತ 8 ವರ್ಷಗಳಿಂದ ಏಕೈಕ ವಿದ್ಯಾರ್ಥಿಗೆ ಪಾಠ ಹೇಳಿ ಕೊಡೋಕೆ ಪುಣೆಯ ಛಂದರ್ ಹತ್ತಿರದ ಭೋರ್ ಗ್ರಾಮಕ್ಕೆ ತೆರಳ್ತಾರೆ.


ಅಂದಹಾಗೇ ಮಹಾರಾಷ್ಟ್ರದ ಪುಣೆಯ ಅತ್ಯಂತ ಪುಟ್ಟ ಹಳ್ಳಿ ಭೋರ್. ಈ ಹಳ್ಳಿಯಲ್ಲಿ 15 ಗುಡಿಸಲುಗಳಿದ್ದು, 60 ಜನರು ವಾಸಿಸ್ತಾರೆ. ಭೋರ್ ಹಳ್ಳಿ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿಯ ಮಕ್ಕಳಿಗೆ ಶಾಲೆಯೂ ಇಲ್ಲ. ಮಕ್ಕಳು ಶಾಲೆಗೆ ಹೋಗಬೇಕಂದ್ರೆ ದೂರದ ಹಳ್ಳಿಗಳಿಗೆ ಹೋಗಬೇಕು. ಧೂಳು ತುಂಬಿದ, ಕಡಿದಾದ ರಸ್ತೆಯ ದಿಬ್ಬವನ್ನ ಹತ್ತಿ ಇಳಿಯಬೇಕು. ಹೀಗಾಗಿ, ಇಲ್ಲಿನ ಮಕ್ಕಳು ಶಾಲೆಗೆ ಹೋಗುವ ಮನಸ್ಸು ಮಾಡುವುದಿಲ್ಲ. ಆದ್ರೆ ಒಬ್ಬ ಬಾಲಕ ಮಾತ್ರ ಶಾಲೆಗೆ ಹೋಗಬೇಕು ಅಂತಾ ಬಯಸಿದ್ದ. ಅಲ್ಲದೇ ಭೋರ್ ಗ್ರಾಮದ ವಸ್ತುಸ್ಥಿತಿ ಅರಿತಿದ್ದ ಶಿಕ್ಷಕ ರಜನಿಕಾಂತ್ ಮೆಂದೇ ಮಕ್ಕಳಿಗೆ ಹೇಗಾದ್ರೂ ಮಾಡಿ, ವಿದ್ಯಾಭ್ಯಾಸ ಮಾಡಿಸಬೇಕು ಅಂತಾ ಆಲೋಚಿಸಿ, ಹಳ್ಳಿಗೆ ಹೋಗ್ತಾರೆ. ಆದ್ರೆ ಅಲ್ಲೊಬ್ಬ ಬಾಲಕ ಯುವರಾಜ ಸಂಗಳೆ ಎಂಬಾತ ಮಾತ್ರ ಓದುವುದಾಗಿ ಹೇಳ್ತಾನೆ. ಅಂದಿನಿಂದ ಶಿಕ್ಷಕ ರಜನಿಕಾಂತ್‍ ಮೆಂದೇ, ಬಾಲಕನಿಗೆ ವಿದ್ಯಾರ್ಜನೆ ಮಾಡಿಸಲು ಭೋರ್‍ ಗ್ರಾಮಕ್ಕೆ ಪ್ರತಿನಿತ್ಯ ಹೋಗ್ತಾರೆ.
ಭೋರ್ ಗ್ರಾಮಕ್ಕೆ ಹೋಗಬೇಕು ಅಂದ್ರೆ ಅದು ಸಾಹಸದ ಕೆಲಸವೇ. ಯಾಕಂದ್ರೆ ಈ ಗ್ರಾಮಕ್ಕೆ ಯಾವುದೇ ವಾಹನಗಳು ಹೋಗುವುದಿಲ್ಲ. ರಸ್ತೆಗಳಿಲ್ಲದ ಕಡಿದಾದ ಪ್ರದೇಶ, ಮಳೆಯಾದ್ರೆ ಜಾರು ಬಂಡೆಯಾಗುವ ರಸ್ತೆಯಲ್ಲಿ ಹೋಗೋದೇ ಕಷ್ಟ. ಇನ್ನು ಮೆಂದೇ ಹಳ್ಳಿಗೆ ಹೋದ ಕೂಡಲೇ ಯುವರಾಜ ಸಿಗೋದಿಲ್ಲ. ಅವನೆಲ್ಲೋ ಮಣ್ಣಿನಲ್ಲಿ ಆಟ ಆಡ್ತಿರ್ತಾನೆ. ಅಂತ ಸಮಯದಲ್ಲಿ ಮೆಂದೇ, ಯುವರಾಜನನ್ನು ಹುಡುಕಿ ಅವನ ಮನವೊಲಿಸಿ ಕರೆ ತಂದು ಪಾಠ ಹೇಳಿ ಕೊಡ್ತಾರೆ. ಗ್ರಾಮದಲ್ಲಿರುವ ಒಂದು ಚಿಕ್ಕ ಕೋಣೆಯೊಳಗೆ ಮೆಂದೇ ವಿದ್ಯಾಭ್ಯಾಸ ಮಾಡಿಸ್ತಾರೆ. ಅಷ್ಟೇ ಅಲ್ಲ ದೂರದ ಊರಿನ ಶಾಲೆಗಳಿಗೆ ಹೋಗಬೇಕಂದ್ರೆ ಸ್ನೇಹಿತರು ಬರೋದಿಲ್ವಂತೆ. ಹೀಗಾಗಿಯೇ ಯುವರಾಜ ಕೂಡ ಶಾಲೆಗೆ ಹೋಗುವುದಿಲ್ಲ.


ಇಂತಹ ಸಾಹಸ ಕಾರ್ಯ ಮಾಡುತ್ತಿರುವ ಮೆಂದೇ, ಎಂಟು ವರ್ಷಗಳಿಂದ ಬೈಕ್‍ ಮೂಲಕ ಗ್ರಾಮಕ್ಕೆ ಹೋಗ್ತಾರೆ. ಎಷ್ಟೋ ಬಾರಿ ಬೈಕ್‍ ಮುಂದಕ್ಕೆ ಚಲಿಸುವುದೇ ಇಲ್ಲ. ಊರಿನ ಸ್ಥಿತಿ ಎಂಟು ವರ್ಷಗಳಿಂದ ಬದಲಾವಣೆ ಕಂಡಿಲ್ಲ. ತಾವು ಮಾಡೋ ಕೆಲಸದಲ್ಲಿ ತಮಗೆ ಆತ್ಮತೃಪ್ತಿ ಇದೆ ಅಂತಾ ಮೆಂದೇ ಹೇಳ್ತಾರೆ.
ಛಂದರ್ನಿಂದ ಭೋರ್ಗೆ ಹೋಗಬೇಕಂದ್ರೆ 1 ಗಂಟೆಯ ಜರ್ನಿ. ಇನ್ನು ಛಂದರ್ ಭಾಗದ ಎಂ.ಪಿ ಸುಪ್ರಿಯಾ ಸೂಲೇ ಊರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಯಾವತ್ತೂ ಗ್ರಾಮಕ್ಕೆ ಎಂ.ಪಿ ಬರೋದೇ ಇಲ್ಲ. ವೋಟ್‍ ಕೇಳೋಕೆ ಬರುವ ರಾಜಕಾರಣಿಗಳು ಇದುವರೆಗೆ ಭೋರ್‍, ಗ್ರಾಮದ ಮೂಲ ಅವಶ್ಯಕತೆಗಳನ್ನು ಪೂರೈಸಿಲ್ಲ ಅನ್ನೋದು ಗ್ರಾಮಸ್ಥರ ಆರೋಪ.
ಏನೇ ಇರಲಿ…ಐಷಾರಾಮಿ ಜೀವನ ಬಯಸುವ, ತಾವಾಯ್ತು ತಮ್ಮ ಕೆಲಸ ಆಯ್ತು ಅಂದುಕೊಳ್ಳುವವರ ಮಧ್ಯೆ, ಬೇರೊಂದು ಗ್ರಾಮಕ್ಕೆ ಹೋಗಿ ಅದು ಏಕೈಕ ವಿದ್ಯಾರ್ಥಿಗೆ ಪಾಠ ಹೇಳಿಕೊಡ್ತಿರೋ ಶಿಕ್ಷಕ ಮೆಂದೇ ಅವರ ಸಾಹಸ ನಿಜಕ್ಕೂ ಶ್ಲಾಘನೀಯ. ಮೆಂದೇ ಕಾರ್ಯ ಎಲ್ಲರಿಗೂ ಮಾದರಿ. ಅವರಿಗೊಂದು ಸಲಾಂ…

Leave a Reply

Your email address will not be published.

Social Media Auto Publish Powered By : XYZScripts.com