ಬಿಜೆಪಿಗೆ ಬೆಣ್ಣೆ – ಕಾಂಗ್ರೆಸ್‌ಗೆ ಸುಣ್ಣ, ಒಬ್ಬರನ್ನೇ ವಿಚಾರಣೆ ಮಾಡಲಿದೆ ಚುನಾವಣಾ ಆಯೋಗ

ದೆಹಲಿ : ಚುನಾವಣಾ ಆಯೋಗ ಕರ್ನಾಟಕ ಚುನಾವಣೆ ದಿನಾಂಕವನ್ನು ಪ್ರಕಟಿಸುವುದಕ್ಕೂ ಮುನ್ನ ಬಿಜೆಪಿಯ ಅಮಿತ್‌ ಮಾಳವಿಯ ಟ್ವೀಟ್‌ ಮಾಡಿದ್ದರು. ಅಲ್ಲದೆ ಕರ್ನಾಟಕ ಚುನಾವಣೆಯ ಬಗ್ಗೆ ಕಾಂಗ್ರೆಸ್‌ನ ಕಾರ್ಯಕರ್ತ ಶ್ರೀವತ್ಸ ಎಂಬುವವರೂ ಟ್ವೀಟ್‌ ಮಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದವರು ಟ್ವೀಟ್‌ ಮಾಡಿದ್ದರೂ ಚುನಾವಣೆ ಬಗ್ಗೆ ಮಾಹಿತಿ ಸೋರಿಕೆ ಮಾಡಿದ್ದ ಬಿಜೆಪಿಯ ಐಟಿ ಸೆಲ್‌ ಅಧ್ಯಕ್ಷ ಅಮಿತ್ ಮಾಳವಿಯಾ ಅವರ ವಿಚಾರಣೆ ನಡೆಸುವುದಿಲ್ಲ. ಕೇವಲ ಕಾಂಗ್ರೆಸ್‌ ಕಾರ್ಯಕರ್ತನ ವಿಚಾರಣೆ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ.

ಕರ್ನಾಟಕ ಕಾಂಗ್ರೆಸ್‌ ಪಕ್ಷದ ಸೋಶಿಯಲ್‌ ಮೀಡಿಯಾ ಸೆಲ್‌ ಅಧ್ಯಕ್ಷ ಶ್ರೀವತ್ಸ ಎಂಬುವರು ಚುನಾವಣಾ ಆಯೋಗಕ್ಕೂ ಮುನ್ನ ರಾಜ್ಯ ಚುನಾವಣೆಯ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದರು. ಈಗ ಶ್ರೀವತ್ಸ ಅವರನ್ನು ಮಾತ್ರ ವಿಚಾರಣೆ ಮಾಡಲಿದ್ದು, ಬಿಜೆಪಿಯ ಅಮಿತ್ ಮಾಳವಿಯ ಅವರನ್ನು ಮಾತ್ರ ವಿಚಾರಣೆ ಮಾಡುತ್ತಿಲ್ಲವಂತೆ.

ಕಾಂಗ್ರೆಸ್‌ನವರನ್ನು ಮಾತ್ರ ವಿಚಾರಣೆ ಮಾಡುತ್ತಿರುವುದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು, ಈಗಾಗಲೆ ಮಾಹಿತಿ ಸೋರಿಕೆ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಿದೆ. ಆದ್ದರಿಂದ ಅವರನ್ನು ವಿಚಾರಣೆ ಮಾಡುವುದಿಲ್ಲ. ಕಾಂಗ್ರೆಸ್‌ನಿಂದ ಯಾವುದೇ ಸ್ಪಷ್ಟನೆ ಬರದ ಹಿನ್ನೆಲೆಯಲ್ಲಿ ವಿಚಾರಣೆ ಮಾಡುವುದಾಗಿ ಹೇಳಿದೆ.

ಚುನಾವಣಾ ಆಯೋಗದ ನಿರ್ಧಾರದ ಕುರಿತು ಕಾಂಗ್ರೆಸ್‌ ಸೋಶಿಯಲ್‌ ಮೀಡಿಯಾ ಅಧ್ಯಕ್ಷೆ ರಮ್ಯಾ ಟ್ವೀಟ್‌ ಮಾಡಿದ್ದು,  ಕಾಂಗ್ರೆಸ್‌ ಬಗ್ಗೆ ನಿಮ್ಮ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಬಿಜೆಪಿಯ ಮಾಳವಿಯಾ ಅವರನ್ನು ತನಿಖೆ ಮಾಡುವುದಕ್ಕೂ ಮುನ್ನ ಅವರಿಗೆ ಕ್ಲೀನ್‌ ಚಿಟ್‌ ನೀಡಿರುವುದು ಆಘಾತ ತಂದಿದೆ. ಆದರೆ ನಿಮ್ಮ ಈ ನಿರ್ಧಾರ ನಿಮ್ಮ ಇಮೇಜ್‌ಗೆ, ಆಡಳಿತಕ್ಕೆ ಧಕ್ಕೆ ತರಲಿದೆ. ಅಲ್ಲದೆ ಮಾಳವಿಯ ಅವರನ್ನು ಪ್ರಶ್ನೆ ಮಾಡುವ ಅಗತ್ಯವೂ ಇಲ್ಲ. ಈಗಾಗಲೆ ಅವರು ತಮ್ಮ ಟ್ವೀಟ್‌ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ಯಾಕೆ ಅವರನ್ನು ಪ್ರಶ್ನೆ ಮಾಡುವುದು ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.

ಚುನಾವಣಾ ಆಯೋಗ ಕರ್ನಾಟಕ ಚುನಾವಣೆಯ ದಿನಾಂಕ ಫಿಕ್ಸ್ ಮಾಡುವುದಕ್ಕೂ ಮುನ್ನ ಬಿಜೆಪಿಯ ಮಾಳವಿಯ ಟ್ವೀಟ್ ಮಾಡಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಟ್ವೀಟನ್ನು ಡಿಲೀಟ್ ಮಾಡಿದ್ದರು.

Leave a Reply

Your email address will not be published.