ಮುಂದಿನ ಸರ್ಕಾರ ಯುವಜನರ ನಿರ್ಧಾರ : ರಾಜಕೀಯ ಪಕ್ಷಗಳಿಗೆ ಯುವಜನತೆಯಿಂದ ಎಚ್ಚರಿಕೆ

 ನಮ್ಮ ರಾಜಕಾರಣಿಗಳು ತಮಗೆ ಬೇಕಾದಂತೆ ಸರ್ಕಾರ ರಚನೆ ಮಾಡಿದ್ದಾರೆ. ಆದರೆ ನಮ್ಮ ಯುವಕರಿಗೆ ಉದ್ಯೋಗ ಕೊಡಿಸುವುದರಲ್ಲಿ ವಿಫಲವಾಗಿದ್ದಾರೆ. ಇಂತಹವರು ಆಳ್ವಿಕೆ ಮಾಡಲು ನಾಲಾಯಕ್‌ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದ್ದಾರೆ.
ಉದ್ಯೋಗಕ್ಕಾಗಿ ಯುವಜನರು ಹಾಗೂ ಗುತ್ತಿಗೆ ನೌಕರರ ಸಂಘಟನೆ ನಡೆಸುತ್ತಿರುವ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶದಲ್ಲಿ ಮಾತನಾಡಿದ ಅವರು,
 ರಾಜಕಾರಣಿಗಳು ದೇಶದಲ್ಲಿ ಸಮಾನತೆ ಇರಬೇಕು ಎಂದು ಗಂಟೆಗಟ್ಟಲೆ ಭಾಷಣ ಮಾಡುತ್ತಾರೆ. ಆದರೆ ಉದ್ಯೋಗವಿಲ್ಲದಿದ್ದರೆ, ಸಮಾನತೆ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದು, ರಾಜಕೀಯ ನ್ಯಾಯ ನಡೆಸಲು ಸಾಧ್ಯವಿಲ್ಲದಿದ್ದ ಮೇಲೆ ಆಡಳಿತ ನಡೆಸಲು ನೀವು ಅಯೋಗ್ಯರು ಎಂದಿದ್ದಾರೆ. ಅಲ್ಲದೆ ಇಂದಿನ ರಾಜಕಾರಣಿಗಳು ಖಾಸಗಿ ಸಂಸ್ಥೆಗಳ ಗುಲಾಮರಾಗಿದ್ದು, ದೇಶದ ಬೆನ್ನೆಲುಬಾದ ಯುವಕರಿಗೆ ಉದ್ಯೋಗ ಕೊಡುವಲ್ಲಿ ವಿಫಲರಾಗಿದ್ದಾರೆ.
ಕರ್ನಾಟಕ ನಂಬರ್‌ 1 ರಾಜ್ಯ ಎನ್ನುತ್ತಾರೆ. ಆದರೆ ಪಿಎಚ್‌ಡಿ ಆಗಿರುವ ಒಬ್ಬ ವ್ಯಕ್ತಿ 5 ಸಾವಿರ ರೂ ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮದೆಂತಾ ನಂಬರ್‌ 1 ರಾಜ್ಯ. ನೀರು ಸರಬರಾಜು ಮಾಡಲಾಗುತ್ತಿಲ್ಲ. ಮಾಲಿನ್ಯದಿಂದ ಬೆಂಗಳೂರು ಹಾಳಾಗಿ ಹೋಗಿದೆ, ಉಸಿರಾಡಲೂ ಸಾಧ್ಯವಾಗುತ್ತಿಲ್ಲ. ಇದು ನಂಬರ್‌ 1 ರಾಜ್ಯನಾ. ಹೀಗೆ ಹೇಳಲು ನಾಚಿಕೆಯಾಗಬೇಕು ಎಂದು ಗುಡುಗಿದ್ದಾರೆ.
 ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುವವರೇ ಸರಿಯಾಗಿ ಕೆಲಸ ಮಾಡುತ್ತಾರೆ. ಆದರೆ ದೇಶ ಆಳುವವರೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂತಹವರು ದೇಶ ಆಳಲು ನಾಲಾಯಕ್‌ಗಳು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್,  ದೇಶದ ನ್ಯಾಯಾಂಗ ವ್ಯವಸ್ಥೆ ಬಲಹೀನವಾಗುತ್ತಿದೆ. ದೇಶವನ್ನಾಳುವ ನಾಯಕರೇ ನ್ಯಾಯಾಂಗ ವ್ಯವಸ್ಥೆಯನ್ನು  ಬಲಹೀನಗೊಳಿಸುತ್ತಿದ್ದಾರೆ. ಅಲ್ಲದೆ ಎಲ್ಲಾ ಕ್ಷೇತ್ರದಲ್ಲೂ ಸರ್ವಾಧಿಕಾರಿ ಧೋರಣೆ ಬೆಳೆದು ಎಲ್ಲಾ ವಲಯಗಳೂ ಅಭದ್ರಗೊಳ್ಳುತ್ತಿದೆ. ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿದ್ದವರು, ಇಂದು ತಮ್ಮ ಹೇಳಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹವುಗಳ ವಿರುದ್ಧ ಯುವಜನತೆ ಎಚ್ಚೆತ್ತುಕೊಳ್ಳಬೇಕಿದೆ. ಅದಕ್ಕಾಗಿ ಇಂತಹ ಸಮಾವೇಶಗಳು, ಹೋರಾಟಗಳು ನಡೆಯಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com