Vote for job : ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ : ಮಾರ್ಚ್‌ 25ರಂದು ಬೃಹತ್‌ ಸಮಾವೇಶ

ಉದ್ಯೋಗಕ್ಕಾಗಿ ಯುವಜನರು ಆರಂಭಿಸಿರುವ ಉದ್ಯೋಗಕ್ಕೇ ಓಟು ಆಂದೋಲನ ದಿನದಿಂದ ದಿನಕ್ಕೆ ಬಿಸಿಯೇರುತ್ತಿದೆ. ಗೌರವಯುತ ಜೀವನಕ್ಕಾಗಿ ಸುಭದ್ರ ಉದ್ಯೋಗ ನಮ್ಮ ಹಕ್ಕು ಎಂದು ಒಂದು ವರ್ಷದಿಂದ ನಿರಂತರವಾಗಿ ನಡೆದ ಆಂದೋಲನ ಚುನಾವಣೆಯಲ್ಲಿ ಉದ್ಯೋಗವೇ ಪ್ರಧಾನ ವಿಷಯವಾಗಬೇಕೆಂದು ವಿನೂತನವಾಗಿ ಶ್ರಮಿಸುತ್ತಿದೆ.

ಬಹಿರಂಗ ಸಹಿ ಸಂಗ್ರಹ, ಮೊಬೈಲ್ ಆಪ್ ಬಿಡುಗಡೆ, ರಾಜಕೀಯ ಪಕ್ಷಗಳಿಗೆ ಉದ್ಯೋಗ ಸೃಷ್ಟಿಯ ಕುರಿತು ಪ್ರಶ್ನಿಸುವುದು, ಕಾರ್ಯಾಗಾರಗಳು, ವಿಚಾರಗೋಷ್ಟೀಗಳು, ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮನೆ ಪ್ರಚಾರಾಂದೋಲನ ನಡೆಸಿ ನಿರುದ್ಯೋಗವು ವಯಕ್ತಿಕ ಸಮಸ್ಯೆಯಲ್ಲ ಬದಲಿಗೆ ಸರ್ಕಾರಗಳ ರಾಜಕೀಯ, ಆರ್ಥಿಕ ನೀತಿಯ ಫಲ ಎಂದು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಕೇವಲ ದೂರುವುದಲ್ಲದೇ ಪರ್ಯಾಯ ಉದ್ಯೋಗ ಸೃಷ್ಟಿ ಹೇಗೆ ಸಾಧ್ಯ ಎಂಬುದನ್ನು ವಿವರವಾಗಿ ತಿಳಿಸುವ ಯುವಜನರ ಪ್ರಣಾಳಿಕೆಯನ್ನು ತಜ್ಞರ ಸಹಾಯದಿಂದ ತಯಾರಿಸಲಾಯಿತು.

ಕರ್ನಾಟಕದಲ್ಲಿರುವ 1 ಕೋಟಿ ಉದ್ಯೋಗಗಳನ್ನು ಮತ್ತಷ್ಟು ಸುಸ್ಥಿರಗೊಳಿಸುವುದು, ಮುಂದಿನ 5 ವರ್ಷಗಳಲ್ಲಿ 50 ಲಕ್ಷ ಹೊಸ ಸುಭದ್ರ ಉದ್ಯೋಗಗಳ ಸೃಷ್ಟಿ ಹೇಗೆ ಸಾಧ್ಯ ಮತ್ತು ಇದರಿಂದ ರಾಜ್ಯ, ದೇಶದಲ್ಲಾಗುವ ಅಭಿವೃದ್ಧಿಯ ಕುರಿತು ಸಮಗ್ರ ಮಾಹಿತಿಯನ್ನು ‘ಯುವ ಪ್ರಣಾಳಿಕೆ’ ಒಳಗೊಂಡಿದೆ.

ಈ ಪ್ರಣಾಳಿಕೆಯನ್ನು ಯಾವ ಪಕ್ಷ ಒಪ್ಪಿಕೊಂಡು ತಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡು ಜಾರಿಗೊಳಿಸುವ ಕಾಲನಿಗದಿತ ನೀಲನಕ್ಷೆಯನ್ನು ಮುಂದಿಡುತ್ತದೊ ಆ ಪಕ್ಷಕ್ಕೆ ನಮ್ಮ ಓಟು, ಅಂದರೆ ಉದ್ಯೋಗಕ್ಕೇ ನಮ್ಮ ಓಟು & ಉದ್ಯೋಗ ಭದ್ರತೆಗೆ ನಮ್ಮ ಓಟು ಎಂದು ಸಾರುವ ಮೂಲಕ ಫೆಬ್ರವರಿ 18ರಂದು ಯುವ ಅಧಿವೇಶನವನ್ನು ನಡೆಸಲಾಯಿತು. ಯುವ ಪ್ರಣಾಳಿಕೆಯನ್ನು ಮೂರು ಪ್ರಮುಖ ಪಕ್ಷಗಳಿಗೆ ನೀಡಿ ಪ್ರತಿಕ್ರಿಯಿಸಬೇಕೆಂದು ಆಹ್ವಾನಿಸಲಾಗಿತ್ತು.

ಈ ಮಹತ್ವದ ಯುವ ಪ್ರಣಾಳಿಕೆಯ ಫೆಬ್ರವರಿ 18ರ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಯುವಾಧಿವೇಶನದಲ್ಲಿ ಬಿಡುಗಡೆಯಾಯಿತು. ಅಂದು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಆ ಕಾರ್ಯಕ್ರಮಕ್ಕೆ ಬಂದು ನಮ್ಮ ಪ್ರಣಾಳಿಕೆಗೆ ಪ್ರತಿಕ್ರಿಯೆ ಮತ್ತು ಉದ್ಯೋಗ ಸೃಷ್ಟಿಯ ಕುರಿತು ತಮ್ಮ ಪಕ್ಷಗಳ ನಿಲುವುಗಳನ್ನು ಘೋಷಿಸಬೇಕೆಂದು ಆಗ್ರಹಿಸಲಾಗಿತ್ತು.

ಅಧಿವೇಶನಕ್ಕೆ ಬಂದ ಕಾಂಗ್ರೆಸ್ ಪಕ್ಷವು ಇದನ್ನು ಗಂಭೀರವಾಗಿ ತೆಗೆದುಕೊಂಡು ಚರ್ಚಿಸುವುದಾಗಿ ಹೇಳಿದರೆ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಪ್ಪಿಕೊಂಡೂ ಬಂದಿರಲಿಲ್ಲ. ನಂತರ ಆ ಕುರಿತು ಕ್ಷಮೆ ಕೇಳಿದವು, ಬಿಜೆಪಿ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರು ತಮ್ಮ ಸಮಿತಿಯ ಮುಂದಿಡುವುದಾಗಿ ಹೇಳಿದ್ದಾರೆ.

ಈ ಪಕ್ಷಗಳ ಪ್ರಣಾಳಿಕೆಗಳು ಬಿಡುಗಡೆಯಾದ ನಂತರ ಅವು ಈ ಕುರಿತು ಏನು ಹೇಳುತ್ತವೆ ಎಂಬುದನ್ನು ನೋಡೋಣ. ಆದರೆ ಪ್ರಣಾಳಿಕೆಯಲ್ಲಿ ಸೇರಿಸಿದಷ್ಟಕ್ಕೆ ನಂಬಿ ಬಿಡಬೇಕೇ? ಒಂದು ವೇಳೆ ನಂಬಿದರೂ ನಂತರ ಜಾರಿ ಮಾಡುತ್ತಾರೆಂದು ಏನು ಖಾತರಿ? ಹೌದು ಈ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಪ್ರತಿ ತಂತ್ರ ನಮ್ಮಲ್ಲೂ ಇರಬೇಕು. ಸಂದರ್ಭ ಬಂದಾಗ ಅದನ್ನು ಮುಂದಿಡೋಣ. ಆದರೆ, ಈ ಸಾರಿಯ ಚುನಾವಣೆಯನ್ನು ಹಿಂದಿನಂತೆ ಆಗಲು ಬಿಡಬಾರದು ಎಂದು ತೀರ್ಮಾನಿಸಿದ ಯುವಜನರ ತಂಡಗಳು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲೂ ತಯಾರಾಗಿವೆ. ಬಹುತೇಕ ಎಲ್ಲಾ ಇಲಾಖೆಗಳ ಗುತ್ತಿಗೆ ನೌಕರರ ಪ್ರತಿನಿಧಿಗಳೂ ಸೇರಿಕೊಂಡಾಗಿದೆ. ಈಗ ಅವನ್ನು ತಾಲೂಕು ಮಟ್ಟಕ್ಕೆ ಮತ್ತು ಇಲಾಖೆಗಳ ಎಲ್ಲಾ ವಿಭಾಗಗಳ ಎಲ್ಲಾ ನೌಕರರ ಮಟ್ಟಕ್ಕೂ ಒಯ್ಯುವ ಕೆಲಸ ಶುರುವಾಗಿದೆ.

ಈಗ ಈ ಆಂದೋಲನ ಉದ್ಯೋಗ, ಉದ್ಯೋಗ ಭದ್ರತೆಯನ್ನು ಖಾತರಿ ಮಾಡದ ಪಕ್ಷಕ್ಕೆ ಓಟಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದೆ. ಮಾರ್ಚ್ 25, 2018. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಚ್ಚೆತ್ತ ಯುವಜನರು ಮತ್ತು ಗುತ್ತಿಗೆ ನೌಕರ ಕಾರ್ಯಕರ್ತರಿಂದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶವನ್ನು ಹಮ್ಮಿಕೊಂಡಿದೆ.

ಚುನಾವಣೆಯ ನಂತರವೂ ರಚನಾತ್ಮಕವಾಗಿ ಮುಂದುವರೆಯುವ ಈ ಆಂದೋಲನವು ರಾಜ್ಯದ ಎಲ್ಲಾ ಯುವಜನರ ಮತ್ತು ಗುತ್ತಿಗೆ ಹಾಗೂ ಇತರ ತಾತ್ಕಾಲಿಕ ನೌಕರರ ಆಶೋತ್ತರಗಳ ವೇದಿಕೆಯಾಗಿದೆ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಸಮಾನ ವೇತನವನ್ನು ಖಾತರಿ ಮಾಡಿಸುವುದು, ಕೃಷಿಯನ್ನು ಲಾಭದಾಯಕವಾಗಿಸುವುದು, ಕೃಷಿ ಆಧಾರಿತ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವುದರ ಕುರಿತೂ ಸ್ಪಷ್ಟ ಮುನ್ನೋಟವನ್ನು ಹೊತ್ತ ಯುವಜನರ ಪ್ರಣಾಳಿಕೆಯ ಜಾರಿಗಾಗಿ ಶ್ರಮಿಸುತ್ತದೆ.

ಚುನಾವಣೆಗೆ ಮುಂಚೆ, ಈ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿದ್ದಾಗಲೇ ನಾವೆಲ್ಲರೂ ಒಂದು ಸಾರಿ ದೊಡ್ಡ ಸಂಖ್ಯೆಯಲ್ಲಿ ಜೊತೆಗೂಡಬೇಕೆಂದು ನಿರ್ಧರಿಸಿದ್ದೇವೆ. ಈ ನಾಡಿನ ಯುವಜನರು ಹಾಗೂ ಗುತ್ತಿಗೆ ನೌಕರರು ಯಾವ ಬಗೆಯ ರಾಜಕಾರಣವನ್ನು ಬಯಸುತ್ತಿದ್ದೇವೆಂಬುದನ್ನು ಸಾರಿ ಹೇಳಬೇಕಿದೆ. 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯು ಸುಭದ್ರ ಉದ್ಯೋಗದ ಆಧಾರದ ಮೇಲೆ ನಡೆಯುತ್ತದೆಂಬ ಎಚ್ಚರಿಕೆಯನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಬೇಕು. ಹಾಗಾಗಿ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ನಾವು ತೆಗೆದುಕೊಳ್ಳುವ ರಾಜಕೀಯ ನಿರ್ಣಯವನ್ನು ಈ ಚುನಾವಣೆಯಲ್ಲಿ ನಾಡಿನ ಪ್ರತಿಯೊಬ್ಬ ಯುವಜನರು ಮತ್ತು ಗುತ್ತಿಗೆ ನೌಕರರು ಹಾಗೂ ಅವರ ಕುಟುಂಬಗಳತ್ತ ನಾವೆಲ್ಲರೂ ಒಯ್ಯುತ್ತೇವೆ. ಆ ಮೂಲಕ ನಾಡಿನ ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡುವ ಕಟಿಬದ್ಧ ದೇಶಪ್ರೇಮಿ ಮುಂದಾಳುಗಳಾಗಿ ನಿಲ್ಲುತ್ತೇವೆ. ಮುಂದಿನ ಎರಡು ತಿಂಗಳು ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ, ಎಲ್ಲಾ ಗ್ರಾಮಗಳಲ್ಲಿಯೂ ಒಂದಕ್ಕೊಂದು ರೀತಿಯಲ್ಲಿ ಎದುರುಗೊಳ್ಳುತ್ತೇವೆ. ಉದ್ಯೋಗ ಮತ್ತು ಉದ್ಯೋಗ ಭದ್ರತೆಯ ನಮ್ಮ ನೇರ ಪ್ರಶ್ನೆಗಳು ರಾಜಕೀಯ ಪಕ್ಷಗಳ ಮುಖಂಡರನ್ನು ನಿದ್ದೆಗೆಡಿಸಬೇಕೆಂದು ನಿರ್ಧರಿಸಿದ್ದೇವೆ.

ಚುನಾವಣೆಯ ನಂತರವೂ ನಾವು ನಮ್ಮ ಪ್ರಣಾಳಿಕೆಯ ಜಾರಿಗಾಗಿ ರಚನಾತ್ಮಕ ಆಂದೋಲನ ಮುಂದುವರೆಸುತ್ತೇವೆ. ಬನ್ನಿ, ಇಂತಹ ಮಹತ್ವದ ಪ್ರಕ್ರಿಯೆಯಲ್ಲಿ ನೀವಿರಲೇಬೇಕು. ನೀವಿನ್ನೂ ಇದರ ಭಾಗವಾಗದಿದ್ದಲ್ಲಿ, ಮಾರ್ಚ್ 25ರ ಭಾನುವಾರವನ್ನು ಇದಕ್ಕೆ ಮೀಸಲಿಡಿ. ಸಹಸ್ರಾರು ಪ್ರಜಾಪ್ರಭುತ್ವದ ಸೈನಿಕರು ಅಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ.

ಅಂದು ಕಾರ್ಯಕ್ರಮದಲ್ಲಿ
ಜಸ್ಟೀಸ್ ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್.
ಪ್ರಶಾಂತ್ ಭೂಷಣ್, ಹಿರಿಯ ವಕೀಲರು, ನವದೆಹಲಿ
ಡಾ.ವಾಸು ಎಚ್.ವಿ. ಕರ್ನಾಟಕ ಜನಶಕ್ತಿ
ಇವರುಗಳು ಮಾತನಾಡಲಿದ್ದು
ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಅಧ್ಯಕ್ಷರಾದ ಕೆ.ಟಿ.ಗಂಗಾಧರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಉದ್ಯೋಗಕ್ಕಾಗಿ ಯುವಜನರು ಸಂಚಾಲಕರಾದ ಮುತ್ತುರಾಜ್ ಮತ್ತು ಸರೋವರ್ ಹಿನ್ನೋಟ ಮತ್ತು ಮುನ್ನೋಟವನ್ನು ಮುಂದಿಡುತ್ತಾರೆ.
ಸಂಘಟನಾ ಸಮಿತಿಯ ಪರವಾಗಿ, ರಾಣಿ ರಾಮನಗರ ಹಾಗೂ ಸಾಲಿಡಾರಿಟಿ ಯೂತ್ ಮೂವ್‍ಮೆಂಟ್‍ನ ಷಬ್ಬೀರ್ ಅವರು
ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಈ ಆಂದೋಲನವು ಸಾಮಾಜಿಕ ತಾಲತಾಣಗಳಲ್ಲಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರಚಾರ ಪಡೆದಿದೆ. ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವ ವಿಡಿಯೋಗಳನ್ನು ಲಕ್ಷಾಂತರ ಜನ ವಿಕ್ಷೀಸಿದ್ದಾರೆ. ಮಾರ್ಚ್ 25ರ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಕೊಡುವ ಸಮಾವೇಶದ ಮುಂದಿನ ಸರ್ಕಾರ ಯುವಜನರ ನಿರ್ಧಾರ ದ ಫೇಸ್‍ಬುಕ್ ಪ್ರೊಫೈಲ್ ಫ್ರೇಮ್ ಅನ್ನು ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಹಾಕಿಕೊಳ್ಳುವ ಮೂಲಕ ಅಭಿರುಚಿ ಪೂರ್ವ ಬೆಂಬಲ ಘೋಷಿಸಿದ್ದಾರೆ. ಇದು ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ಮಾತ್ರ ಇನ್ನು ಇತ್ತ ಗಮನಹರಿಸಿಲ್ಲ. ಈ ಸಮಾವೇಶದ ಹೊತ್ತಿಗಾದರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ನಂಬಿದ್ದೇವೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ, ಸುಭದ್ರ ರಾಷ್ಟ್ರ ನಿರ್ಮಾಣದ ಈ ಹೋರಾಟಕ್ಕೆ ನಿಮ್ಮ ಬೆಂಬಲ ಅತೀ ಅಗತ್ಯವಾಗಿದೆ. ಬನ್ನಿ ಎಲ್ಲಾ ರೀತಿಯಲ್ಲಿಯೂ ಈ ಆಂದೋಲನದ ಭಾಗವಾಗಿ ಎಂದು ಪ್ರೀತಿಪೂರ್ವಕ ಆಹ್ವಾನ ನೀಡುತ್ತಿದ್ದೇವೆ.

ಉದ್ಯೋಗಕ್ಕಾಗಿ ಯುವಜನರು.

Leave a Reply

Your email address will not be published.

Social Media Auto Publish Powered By : XYZScripts.com