ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನರ 102ನೇ ಜನ್ಮದಿನ : ಗೂಗಲ್ ಡೂಡಲ್ ಗೌರವ

ಖ್ಯಾತ ಶಹನಾಯಿ ವಾದಕ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮದಿನದ ಅಂಗವಾಗಿ ಗೂಗಲ್ ಸಂಸ್ಥೆ ಡೂಡಲ್ ಗೌರವವನ್ನು ನೀಡಿದೆ.  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶಹನಾಯಿ ವಾದನ ಕ್ಷೇತ್ರದಲ್ಲಿ ಉಸ್ತಾದ್ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು.

1916 ಮಾರ್ಚ್ 21 ರಂದು ಈಗಿನ ಬಿಹಾರದ ದುಮ್ರಾಂವ್ ನ ಸಂಗೀತಗಾರರ ಪರಿವಾರದಲ್ಲಿ ಜನಿಸಿದ ಬಿಸ್ಮಿಲ್ಲಾ ಖಾನರ ಮೂಲ ಹೆಸರು ಕಮ್ರುದ್ದೀನ್ ಖಾನ್ ಎಂದಾಗಿತ್ತು. ಅಜ್ಜ ರಸೂಲ್ ಬಕ್ಷ್ ಖಾನ್, ಮೊಮ್ಮಗನನ್ನು ‘ಬಿಸ್ಮಿಲ್ಲಾ’ ಎಂಬ ಹೆಸರನಿಂದ ಕರೆದರು. ಬಿಸ್ಮಿಲ್ಲಾ ಅವರ ತಂದೆ ಪೈಗಂಬರ್ ಬಕ್ಷ್ ಖಾನ್ ಭೋಜಪುರದ ದೊರೆಯ ಆಸ್ಥಾನದಲ್ಲಿ ಸಂಗೀತಗಾರರಾಗಿದ್ದರು.

ಸಭೆ, ಸಮಾರಂಭಗಳಲ್ಲಿ ಜಾನಪದ ಸಂಗೀತ ವಾದ್ಯವಾಗಿ ಮಾತ್ರ ಬಳಕೆಯಾಗುತ್ತಿದ್ದ ಶಹನಾಯಿಯನ್ನು ಸೋಲೊ ವಾದ್ಯವನ್ನಾಗಿ ಪರಿಚಯಿಸಿ, ವಿಶ್ವಾದ್ಯಂತ ಜನಪ್ರಿಯಗೊಳಿಸಿದ ಶ್ರೇಯ ಉಸ್ತಾದ್ ಬಿಸ್ಮಿಲ್ಲಾ ಖಾನರಿಗೆ ಸಲ್ಲುತ್ತದೆ. ‘ ಸಂಗೀತದಲ್ಲಿ ಯಾವುದೇ ಜಾತಿ, ಧರ್ಮಗಳ ಭೇದ ಭಾವವಿಲ್ಲ, ಪ್ರಪಂಚವೇ ಮುಗಿದರೂ ಸಂಗೀತ ಉಳಿಯುತ್ತದೆ ‘ ಎಂದು ಉಸ್ತಾದ್ ಹೇಳುತ್ತಿದ್ದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಭಾರತರತ್ನ, ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಇನ್ನೂ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com