ನೆಗಡಿಯಾಗಿದೆ ಅಂತ 4 ತಿಂಗಳ ಕಂದಮ್ಮನಿಗೆ ಕಾದ ಕಬ್ಬಿಣದ ರಾಡಿಂದ ಬರೆ ಎಳೆದ್ರು ಪಾಪಿಗಳು !

ಜೈಪುರ : ದೇಶದಲ್ಲಿ ಮೂಢನಂಬಿಕೆ ಎಲ್ಲೆ ಮೀರಿದೆ. ನಾಲ್ಕು ತಿಂಗಳ ಮಗುವೊಂದು ನೆಗಡಿ ಹಾಗೂ ಕಫದಿಂದ ಬಳಲುತ್ತಿತ್ತು ಎಂಬ ಕಾರಣಕ್ಕೆ ಮಗುವಿಗೆ ಕಬ್ಬಿಣದ ರಾಡನ್ನು ಕಾಯಿಸಿ ಬರೆ ಹಾಕಿದ ಘಟನೆ ರಾಜಸ್ಥಾನದ ಬಿಲ್ವಾರಾ ಜಿಲ್ಲೆಯಲ್ಲಿ ನಡೆದಿದ್ದು, ಅಸ್ವಸ್ಥ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿಗೆ ಹೃದಯ ಸಮಸ್ಯೆ ಇದ್ದು, ಜೊತೆಗೆ ನ್ಯುಮೋನಿಯಾ ಸಹ ಇತ್ತು. ಆದರೆ ಅದನ್ನು ಗುಣಪಡಿಸಲು ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆತರುವ ಬದಲು ಕಾದ ಕಬ್ಬಿಣದ ರಾಡ್‌ನಿಂದ ಮಗುವಿಗೆ ಬರೆ ಹಾಕಿದ್ದಾರೆ. ಇದರಿಂದ ಮಗು ಮತ್ತಷ್ಟು ಅಸ್ವಸ್ಥಗೊಂಡಿದ್ದು, ಬಳಿಕ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.


ಸದ್ಯ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.
ಬಿಲ್ವಾರಾ ಜಿಲ್ಲೆಯಲ್ಲಿ ಮಕ್ಕಳಿಗೆ ಬರೆ ಹಾಕುವ ಪದ್ದತಿ ಹೊಸತೇನಲ್ಲ. ಯಾವುದೇ ಸಮಸ್ಯೆಯಾದರೂ ಮಕ್ಕಳಿಗೆ ಬರೆ ಹಾಕಿದರೆ ಸರಿ ಹೋಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಹೀಗೆ ಮಾಡಿದ್ದಾರೆ. ಸದ್ಯ ಪೋಷಕರ ವಿರುದ್ದ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ತಿಂಗಳು 10 ವರ್ಷದ ಮಗುವಿಗೆ ಕಫ ಹಾಗೂ ನೆಗಡಿಯಾಗಿತ್ತು ಎಂಬ ಕಾರಣಕ್ಕೆ ಮಗುವಿಗೆ ಹೊಟ್ಟೆಗೆ ಬರೆ ಎಳೆದ ಪರಿಣಾಣ ಮಗು ಸಾವಿಗೀಡಾಗಿತ್ತು ಎಂದು ತಿಳಿದುಬಂದಿದೆ.

Leave a Reply

Your email address will not be published.