ಮೋದಿ ಸರ್ಕಾರದ ಕೆಲಸದಿಂದ ಯಾರು ಸಂತೋಷವಾಗಿದ್ದಾರೆ ಹೇಳಿ ನೋಡೋಣ ? : ರಾಜ್‌ ಠಾಕ್ರೆ

ಮುಂಬೈ : ಎನ್‌ಡಿಎ ಸರ್ಕಾರದ ವಿರುದ್ದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಗುಡುಗಿದ್ದು, ಮೋದಿ ಮುಕ್ತ ಭಾರತಕ್ಕೆ ಕರೆ ನೀಡಿದ್ದಾರೆ.

ಮುಂಬೈನಲ್ಲಿ ನಡೆದ  ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ಸುಳ್ಳು ಹೇಳಿಕೊಂಡು ದೇಶದ ಜನರ ಹಾದಿ ತಪ್ಪಿಸುತ್ತಿದೆ. ಇದನ್ನು ನೋಡಿ ನೋಡಿ ದೇಶದ ಜನ ಬೇಸತ್ತು ಹೋಗಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಮುಕ್ತ ಅಲ್ಲ. ಬಿಜೆಪಿ ಮುಕ್ತವಾಗಬೇಕು. ಇದಕ್ಕಾಗಿ ಎಲ್ಲರೂ ಪಣ ತೊಡಬೇಕು ಎಂದು ರಾಜ್ ಠಾಕ್ರೆ ಕರೆ ನೀಡಿದ್ದಾರೆ. ಅಲ್ಲದೆ ವಿಪಕ್ಷಗಳೆಲ್ಲ ಒಂದಾಗಿ ಎನ್‌ಡಿಎ ಸರ್ಕಾರವನ್ನು ನಿರ್ನಾಮ ಮಾಡಬೇಕು ಎಂದಿದ್ದಾರೆ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಅದಾದ ಬಳಿಕ ತುರ್ತು ಪರಿಸ್ಥಿತಿಯ ಬಳಿಕ ಎರಡನೇ ಬಾರಿ ಸ್ವಾತಂತ್ರ್ಯ ಪಡೆದುಕೊಂಡಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮೋದಿ ಮುಕ್ತ ಅಥವಾ ಬಿಜೆಪಿ ಮುಕ್ತ ಭಾರತವಾದರೆ ಮೂರನೇ ಬಾರಿ ನಮ್ಮ ದೇಶ ಸ್ವಾತಂತ್ರ್ಯ ಪಡೆದುಕೊಳ್ಳುತ್ತದೆ ಎಂದಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಅದು ಆಗುತ್ತದೆ. ಆದರೆ ಬಿಜೆಪಿ ಅದನ್ನೇ ಚುನಾವಣಾ ಅಜೆಂಡಾವನ್ನಾಗಿಟ್ಟುಕೊಂಡು ಜನರ ಭಾವನೆಗಳ ಜೊತೆ ಆಟವಾಡಬಾರದು ಎಂದಿದ್ದು, ಮೋದಿ ಸರ್ಕಾರದ ವಿಫಲತೆಗಳ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಮೋದಿ ಸರ್ಕಾರದ ಕೆಲಸದ ಬಗ್ಗೆ ಯಾರಿಗಾದರೂ ಸಮಾಧಾನವಿದ್ದರೆ ಹೇಳಿ. ಇದಕ್ಕೆ ಯಾರೂ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.