ಲೋಕಸಭೆಯಲ್ಲಿ ಗದ್ದಲ : ಕಲಾಪ ಮುಂದೂಡಿಕೆ : ಅವಿಶ್ವಾಸ ನಿರ್ಣಯ ಮಂಡನೆಗೆ ಹಿನ್ನಡೆ

ದೆಹಲಿ : ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭಾ ಕಲಾಪವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್ ಮುಂದೂಡಿದ್ದು, ಇದರಿಂದಾಗಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಹಿನ್ನಡೆಯುಂಟಾಗಿದೆ.

ಕಲಾಪ ಆರಂಭವಾಗುತ್ತಿದ್ದಂತೆಯೇ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಟಿಡಿಪಿ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದ ನಾಯಕರು ಬಿಗಿಪಟ್ಟು ಹಿಡಿದಿದ್ದಲ್ಲದೆ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಸ್ಪೀಕರ್‌ ಸುಮಿತ್ರಾ ಮಹಜನ್‌, ನಾಯಕರನ್ನು ಸಮಾಧಾನಪಡಿಸಿ ತಮ್ಮ ಸ್ಥಾನಗಳಲ್ಲಿ ಆಸೀನರಾಗುವಂತೆ ಮನವಿ ಮಾಡಿದರು. ಆದರೂ ಸಮಾಧಾನಗೊಳ್ಳದೆ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪಟ್ಟು ಹಿಡಿದಿದ್ದು, ತಮ್ಮ ಬೇಡಿಕೆಯನ್ನು ಈಡೇರಿಸದ ಕಾರಣ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. ಈ ಬೆನ್ನಲ್ಲೇ ವೈಎಸ್‌ಆರ್ ಕಾಂಗ್ರೆಸ್ ಪಕ್ಷವೂ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ.
ಲೋಕಸಭೆಯಲ್ಲಿ ಒಟ್ಟು 540 ಸದಸ್ಯ ಬಲವಿದ್ದು, ಬಿಜೆಪಿಯ 275 ಸದಸ್ಯರಿದ್ದಾರೆ. ಅಲ್ಲದೆ ಕೆಲ ಮೈತ್ರಿ ಪಕ್ಷಗಳೂ ಜೊತೆಗಿರುವ ಹಿನ್ನಲೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಎದುರಿಸುವ ಸಂಪೂರ್ಣ ವಿಶ್ವಾಸ ಬಿಜೆಪಿಗಿದೆ ಎನ್ನಲಾಗಿದೆ.

Leave a Reply

Your email address will not be published.