ಉಪೇಂದ್ರ ರಿಯಲ್‌ ಅಲ್ಲ ರೀಲ್‌ ಅಂದಿದ್ದಕ್ಕೆ KPJP ಉಪಾಧ್ಯಕ್ಷೆ ಮೇಲೆ ಹಲ್ಲೆ…!?

ಬೆಂಗಳೂರು : ರಿಯಲ್‌ ಸ್ಟಾರ್ ಉಪೇಂದ್ರ ಬೆಂಬಲಿಗರು ಕೆಪಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಮೇರಿ ಲಲಿತಾ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಉಪೇಂದ್ರ ಅವರ ಕುರಿತು ಮೇರಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಉಪೇಂದ್ರ ಪಿಎಂ ಹಿತೇಶ್‌ ಬೆಂಗಳೂರಿನ ಸುಂಕದಕಟ್ಟೆ ಮುದ್ದಿನಪಾಳ್ಯದಲ್ಲಿ ರಾತ್ರಿ ವೇಳೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಶನಿವಾರ ರಾತ್ರಿ ಮೇರಿ, ಕೆಪಿಜೆಪಿ ಮಹಿಳಾ ವಾಟ್ಸಾಪ್‌ ಗ್ರೂಪ್‌ಗೆ ಉಪೇಂದ್ರ ರಿಯಲ್‌ ಹೀರೋ ಅಲ್ಲ, ರೀಲ್‌ ಹೀರೋ. ಅವರನ್ನು ಯಾರೂ ನಂಬಬೇಡಿ ಎಂದು ಮೆಸೇಜ್‌ ಕಳಿಸಿದ್ದರು. ಇದಕ್ಕೆ ಹಿತೇಶ್ ಪ್ರತಿಕ್ರಿಯಿಸಿದ್ದು ಮೇರಿಯವರನ್ನು ನಾಯಿ ಎಂದು ಬೈದಿದ್ದಾರೆ. ಅಲ್ಲದೆ ಇಬ್ಬರ ಮಧ್ಯೆ ಈ ವಿಚಾರವಾಗಿ ವಾಗ್ವಾದವೂ ನಡೆದಿದೆ. ಬಳಿಕ ನಿನ್ನೆ ರಾತ್ರಿ ಮೇರಿ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಹಿತೇಶ್‌ ಹಾಗೂ ಮತ್ತೊಬ್ಬ ವ್ಯಕ್ತಿ ಮೇರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಈ ಘಟನೆ ಹಿಂದೆ ಉಪೇಂದ್ರ ಅವರ ಕೈವಾಡವಿದೆ ಎಂದು ಮೇರಿ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಮೇರಿ ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com