ನಲಪ್ಪಾಡ್ ಆಯ್ತು ಈಗ ಕಾಂಗ್ರೆಸ್‌ ಮಾಜಿ ಮುಖಂಡನ ಪುತ್ರನಿಂದ ಗೂಂಡಾಗಿರಿ !

ಹುಬ್ಬಳ್ಳಿ : ಕಾಂಗ್ರೆಸ್‌ನ ಮಾಜಿ ಮುಖಂಡನ ಪುತ್ರನೊಬ್ಬ ತನ್ನ ಸಹಚರರ ಜೊತೆ ಬಾರ್‌ನಲ್ಲಿ ಗಲಾಟೆ ಮಾಡಿ, ಸಿಕ್ಕ ಸಿಕ್ಕವರಿಗೆ ಥಳಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ತಡರಾತ್ರಿ ಘಟನೆ ನಡೆದಿದ್ದು, ಗಲಾಟೆಗೆ ಬಾರ್ ನಲ್ಲಿದ್ದ ವಸ್ತುಗಳು ಜಖಂ ಆಗಿವೆ. ಕೈಗೆ ಸಿಕ್ಕದ್ದನ್ನೆಲ್ಲ ಪುಡಿ ಪುಡಿ ಮಾಡಿ ದರ್ಪ ಮೆರೆದಿದ್ದಾನೆ ಎಂದು ತಿಳಿದುಬಂದಿದೆ.

ನಿನ್ನೆ ತಡ ರಾತ್ರಿ ನಗರದ ಕೋರ್ಟ್ ಸರ್ಕಲ್ ಬಳಿಯಿರುವ ಗ್ರೀನ್ ಗೇಟ್ ರೆಸ್ಟೋರೆಂಟ್‌ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಗಂಗಾಧರ ನಗರದಲ್ಲಿ ಮಾಜಿ ಕಾಂಗ್ರೆಸ್‌ ಮುಖಂಡನ ಪುತ್ರ ವಿಜಯ್‌ ಬಿಜವಾಡ ಸ್ನೇಹಿತರ ಜೊತೆ ಕುಡಿಯಲು ಬಾರ್ ಗೆ ಬಂದಾಗ ಗಲಾಟೆ ಆರಂಭವಾಗಿದೆ. ಮೂವರು ವೇಯ್ಟರ್‌ ಗಳಿಗೆ ವಿಜಯ್‌ ಬಿಜವಾಡ ಹಾಗೂ ಆತನ ಸಹಚರರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ರೆಸ್ಟೋರೆಂಟ್ ನಲ್ಲಿ ಕೆಲ ಕಾಲ ಗೊಂದಲ ಪರಿಸ್ಥಿತಿ ಉಂಟಾಗಿದೆ.

ಸಮಯ ಮೀರಿದ ಬಳಿಕ ಬಾರ್‌ನಲ್ಲಿ ಮದ್ಯ ಕೊಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಇನ್ನು ಗಲಾಟೆಯಲ್ಲಿ ಅಭಿಜಿತ್ ಎಂಬ ಬಾರ್ ವೇಯ್ಟರ್‌ನ ಕಿವಿಯಲ್ಲಿ ರಕ್ತ ಬರುವಂತೆ ರಾಡಿನಿಂದ ಹಲ್ಲೆ ಮಾಡಲಾಗಿದ್ದು, ಅಸ್ವಸ್ಥಗೊಂಡ ವೇಯ್ಟರ್ನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಬಾರ್ ನಲ್ಲಿ ಗಲಾಟೆ ಮಾಡಿ ಹಲ್ಲೆ ನಡೆಸಿದ ವಿಜಯ್ ಬಿಜವಾಡ ಸೇರಿದಂತೆ ನಾಲ್ವರ ಮೇಲೆ ಐಪಿಸಿ ಸೆ.143, 144, 147 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿಯಾಗಿರುವ ವಿಜಯ ಬಿಜವಾಡ,  ಮಾಜಿ ಕಾಂಗ್ರೆಸ್‌ ಮುಖಂಡ ದುರ್ಗಪ್ಪ ಬಿಜವಾಡ ಪುತ್ರನಾಗಿದ್ದಾನೆ. ದುರ್ಗಪ್ಪ ಬಿಜವಾಡನ ಸಹೋದರ ಶಂಕರಪ್ಪ ಬಿಜವಾಡ ಬಿಜೆಪಿ ಮುಖಂಡನಾಗಿದ್ದು, ಈ ಘಟನೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಹಸ್ತಕ್ಷೇಪ ಮಾಡುತ್ತಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com