ಪರಮೇಶ್ವರ್‌ಗಲ್ಲ ಕೊರಟಗೆರೆಯಿಂದ ನಂಗೆ ಟಿಕೆಟ್‌ ಕೊಡಿ ಎಂದ ಕೈ ನಾಯಕ : ಶುರುವಾಯ್ತು ವಾರ್‌

ತುಮಕೂರು: ಹಾಲಿ ಶಾಸಕರಿರುವ ಕ್ಷೇತ್ರದಲ್ಲಿ ಆ ಪಕ್ಷದಿಂದ ಇನ್ನೊಬ್ಬರು ಟಿಕೆಟ್‌ಗಾಗಿ ಅರ್ಜಿ ಹಾಕಲು ಹಿಂದೇಟು ಹಾಕ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಸ್ಪರ್ಧಿಸಲು ಮುಂದಾಗಿರುವ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದಲೇ ಇನ್ನೊಬ್ಬ ಆಕಾಂಕ್ಷಿ ಹುಟ್ಟಿಕೊಂಡಿದ್ದಾರೆ.

ಹೌದು, ಕೆಪಿಸಿಸಿ ಮಾಹಿತಿ ತಂತ್ರಜ್ಞಾನ ವಿಭಾಗದ ರಾಜ್ಯ ಕಾರ್ಯದರ್ಶಿ ಪರಮೇಶ್ ನಾಯ್ಕ್ ಕೊರಟಗೆರೆಯಿಂದ ತಮಗೆ ಟಿಕೆಟ್ ನೀಡಿ ಎಂದು ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಇದೇ ವೇಳೆ ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ನಾನು ಕಾಂಗ್ರೆಸ್‌‌ನಲ್ಲಿ ವಿವಿಧ ಹುದ್ದೆಯಲ್ಲಿ ದುಡಿದಿದ್ದೇನೆ. ಬಂಜಾರ ಸಮುದಾಯದ ರಾಜ್ಯಾಧ್ಯಕ್ಷನಾದ ತನಗೆ ಈ ಬಾರಿ ಪ್ರಾತಿನಿಧ್ಯ ಕೊಡಬೇಕು ಎಂದು ಅರ್ಜಿ ಸಲ್ಲಿಸಿರುವೆ ಎಂದಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೇಟ್ ನೀಡುವ ಸಲುವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೂ ಭೇಟಿಯಾಗಿ ಮನವಿ ಮಾಡಿಕೊಂಡಿರುವೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಆ ವೇಳೆಯಲ್ಲಿ ರಾಹುಲ್ ಗಾಂಧಿ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಪರಮೇಶ್ ನಾಯ್ಕ್ ತಿಳಿಸಿದ್ದಾರೆ. ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವೀಕ್ಷಕರು ಬಂದಾಗ ಪರಮೇಶ್ ನಾಯ್ಕ್ ಅರ್ಜಿ ಸಲ್ಲಿಸಿದ್ರೂ ಜಿಲ್ಲಾ ಕಾಂಗ್ರೆಸ್ ಅದನ್ನು ಮಾನ್ಯ ಮಾಡಲಿಲ್ಲ. ಹಾಗಾಗಿ ನೇರವಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿ ಟಿಕೆಟ್‌‌ಗಾಗಿ ಫೈಟ್ ನಡೆಸುತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.