ಪ್ರಾಮಾಣಿಕ ಮತ್ತು ಗೌರವಾನ್ವಿತ ರಾಜಕಾರಣದ ಮುನ್ಸೂಚನೆ ನೀಡಿದರಾ ಸಿದ್ದರಾಮಯ್ಯ!

ಇತ್ತೀಚಿಗಿನ ರಾಜಕೀಯ ಬೆಳವಣಿಗೆಗಳಲ್ಲಿ ಆಶ್ಚರ್ಯ ಮತ್ತು ದಿಗ್ಭ್ರಮೆ ಮೂಡಿಸುವ ನಿರ್ಧಾರ ಕಾಂಗ್ರೆಸ್ ಪಕ್ಷ ಮಾಡಿದೆ. ರಾಜ್ಯ ಸಭೆಗೆ ಡಾ. ಎಲ್. ಹನುಮಂತಯ್ಯ, ಡಾ. ಸಯ್ಯದ್ ನಾಸಿರ್ ಹುಸೇನ್, ಹಾಗೂ ಸಿ.ಜೆ. ಚಂದ್ರಶೇಖರ್ ಹೆಸರುಗಳನ್ನ ಘೋಷಣೆ ಮಾಡಿರುವ ಕಾಂಗ್ರೆಸ್, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾರಣ, ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಎರಡೂ ಸ್ಥಾನಗಳೂ ಶ್ರೀಮಂತರಿಗೆ, ಕೋಟ್ಯಾಧಿಪತಿಗಳಿಗೆ ಮೀಸಲು ಎಂಬ ಬೆಳವಣಿಗೆ ಇತ್ತೀಚಿಗಿನ ವರ್ಷಗಳಲ್ಲಿ ನಡೆದುಕೊಂಡು ಬಂದ ಪದ್ದತಿ. ಇತ್ತೀಚಿಗಿನ ಸುಮಾರು ಹದಿನೈದು – ಇಪ್ಪತ್ತು ವರ್ಷಗಳಿಂದ ಕೋಟ್ಯಾಧಿಪತಿಗಳೇ ಈ ಸ್ಥಾನಗಳನ್ನ ತುಂಬುತ್ತಾ ಬಂದಿದ್ದಾರೆ. ಅದರಲ್ಲೂ ಜೆಡಿಎಸ್ ಪಕ್ಷ ನೇರವಾಗಿ ಮತ್ತು ಪರೋಕ್ಷವಾಗಿ ಕೋಟಿ ಕೋಟಿ ಕುಳಗಳನ್ನೇ ರಾಜ್ಯ ಸಭೆಗೆ ಕಳುಹಿಸಲು ಸಹಕರಿಸಿದೆ. ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್‍ಗೂ ಇದೇ ಪದ್ದತಿಯನ್ನ ಜಾರಿಗೊಳಿಸಿದೆ. ಬಿಜೆಪಿ ಪಕ್ಷವೂ ಕೂಡ ಅಧಿಕೃತ ಅಭ್ಯರ್ಥಿ ತನ್ನ ಪಕ್ಷದವರನ್ನೇ ಕಣಕ್ಕಿಳಿಸಿ ಹೆಚ್ಚುವರಿ ಮತಗಳನ್ನ ಶ್ರೀಮಂತರ ಪಾದಗಳಿಗೆ ಅರ್ಪಿಸಿದೆ. ಮತ್ತು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ನಿರಂತರವಾಗಿ ಹೊರ ರಾಜ್ಯದವರಿಗೆ ಕಲ್ಪಿಸಿ ಕೊಟ್ಟಿದೆ. ಕಾಂಗ್ರೆಸ್ ಪಕ್ಷವೂ ಅಲ್ಲಿ ಇಲ್ಲಿ ಕೆಲವರನ್ನು ರಾಜ್ಯದವರನ್ನ ಗುರುತಿಸುವ ಪ್ರಯತ್ನ ಮಾಡಿದರೂ ಕೂಡ, ಆಗಾಗ ಹೊರ ರಾಜ್ಯದವರನ್ನೂ ಆಯ್ಕೆ ಮಾಡಿ ಕಳುಹಿಸಿದೆ. ಆದರೆ, ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಅಚ್ಚರಿ ತಂದಿದೆ. ರಾಜ್ಯದ ಮೂವರು, ಸಾಮಾನ್ಯ ನಾಯಕರನ್ನ ರಾಜ್ಯ ಸಭೆಗೆ ಕಳುಹಿಸುವ ನಿರ್ಧಾರ ನಿಜಕ್ಕೂ ಪ್ರಶಂಸನೀಯ… ಯಾರೂ ಯೋಚನೆ ಮಾಡಲಾಗದ, ಯೋಚಿಸಲು ಸಾಧ್ಯವಾಗದ, ಈ ನಿರ್ಧಾರ ರಾಜಕೀಯ ವಲಯದಲ್ಲಿ ಹೊಸ ಆಶಾಕಿರಣವನ್ನ ಮೂಡಿಸಿದೆ.

ಎಲ್. ಹನುಮಂತಯ್ಯನವರಂತೂ ಕಾಂಗೆಸ್ ಪಕ್ಷದ ನಾಯಕರಾಗಿದ್ದರೂ ಕೂಡ, ಸಾಮಾಜಿಕ ಚಟುವಟಿಕೆಗಳಲ್ಲೇ ಅತೀ ಹೆಚ್ಚು ತೊಡಗಿಸಿಕೊಂಡವರು. ಶೋಷಿತರ ಧ್ವನಿಯಾಗಿ, ಒಬ್ಬ ಸಾಹಿತಿಯಾಗಿ, ಗುರುತಿಸಿಕೊಂಡವರು. ಅಂತಹ ಒಬ್ಬ ಸಾಮಾನ್ಯರನ್ನ ರಾಜ್ಯ ಸಭೆಗೆ ಕಳುಹಿಸುವ ನಿರ್ಧಾರ ಕೈ ಗೊಂಡಿರುವ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಹೈಕಮಾಂಡ್ ಹಣವಿರುವವರಿಗೆ ಮಾತ್ರ ಈ ಸ್ಥಾನ ಮಾನಗಳು ಮಾತ್ರ ಎಂಬ ಸಂದೇಶವನ್ನ ಅಳಿಸಿ ಹಾಕುವ ಪ್ರಯತ್ನ ಮಾಡಿರುವುದು ರಾಜಕೀಯವಾಗಿ ಮೆಚ್ಚ ಬೇಕಾಗಿರುವ ನಿರ್ಧಾರ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಪುನಃ ತನ್ನ ಹಳೇ ಚಾಳಿಗೆ ಅಂಟಿಕೊಂಡಿರುವುದು ದುರಾದೃಷ್ಟಕರ. ಕಳೆದ ಬಾರಿ ರಾಜ್ಯ ಸಭೆಯಲ್ಲಿ ವಿಜಯ್ ಮಲ್ಯ ಮತ್ತು ರಾಜೀವ್ ಚಂದ್ರಶೇಖರ್‌ ಅವರನ್ನು ರಾಜ್ಯ ಸಭೆಗೆ ಕಳುಹಿಸಿದ ಈ ಎರಡೂ ಪಕ್ಷಗಳು, ಈ ಬಾರಿ ಬಿಜೆಪಿ ರಾಜೀವ್ ಚಂದ್ರ ಶೇಖರ್‌ರನ್ನು ಅಧಿಕೃತ ಅಭ್ಯರ್ಥಿಯನ್ನಾಗಿಸಿ, ಹಳೇ ಚಾಳಿಯನ್ನ ಮುಂದುವರೆಸಿದರೆ, ಜೆಡಿಎಸ್ ಮಂಗಳೂರಿನ ಪಾರೂಕ್‍ರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿ ಕುದುರೆ ವ್ಯಾಪಾರದ ಮುನ್ಸೂಚನೆ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಮೆಚ್ಚಿಗೆಗೆ ಪಾತ್ರ. ಮೂವರೂ ಸಾದಾ ಸೀದಾ…. ಪಕ್ಷದ ಕಾರ್ಯಕರ್ತರನ್ನ ರಾಜ್ಯ ಸಭೆಯಂತಹ ಅತ್ಯುನ್ನತ ಸ್ಥಾನಕ್ಕೆ ಕಳುಹಿಸುವುದರೊಂದಿಗೆ ಕನ್ನಡಿಗರಿಗೂ ಗೌರವ ಕೊಟ್ಟು, ರಾಜಕೀಯ ವ್ಯವಹಾರವನ್ನೂ ಹೊಸಕಿ ಹಾಕಿ. ಈ ಚುನಾವಣಾ ವಿಚಾರದಲ್ಲಿ ಮೇಲ್ಪಂಕ್ತಿ ಹಾಕಿ ಕೊಟ್ಟಿರುವುದು, ಪ್ರಾಮಾಣಿಕ ಮತ್ತು ಗೌರವಾನ್ವಿತ ರಾಜಕಾರಣದ ಮುನ್ಸೂಚನೆ.

Leave a Reply

Your email address will not be published.

Social Media Auto Publish Powered By : XYZScripts.com