ನಾಡು ನುಡಿಯ ನಂಟು ಬೆಸೆಯೋ ‘ಹೆಮ್ಮೆಯ ಕನ್ನಡಿಗ’ ಮಾರ್ಚ್‌ 17-18ರಂದು ಝೀ ವಾಹಿನಿಯಲ್ಲಿ

ಕನ್ನಡ ಕಿರುತೆರೆಯಲ್ಲಿ ವರ್ಷವಿಡೀ ವಿಭಿನ್ನ ಕಾರ್ಯಕ್ರಮಗಳನ್ನು ನೀಡಿ ಕನ್ನಡ ನಾಡಿನ ಜನರ ಮನಗೆದ್ದ ಝೀ ಕನ್ನಡ ವಾಹಿನಿಯು, ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಸಾಧಕರನ್ನು ಗೌರವಿಸುವ ಸಲುವಾಗಿ ಹೆಮ್ಮೆಯ ಕನ್ನಡಿಗ -2018ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಮನರಂಜನೆ, ಕ್ರೀಡೆ, ಸಮಾಜಸೇವೆ, ಪತ್ರಿಕೋದ್ಯಮ, ಸಾಹಿತ್ಯ ಮೊದಲಾದ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ.

ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ಧಗಂಗಾ ಮಠದ ಶ್ರೀಗಳಿಗೆ ಕನ್ನಡದ ಹೆಮ್ಮೆ ಗೌರವವನ್ನು ಸಲ್ಲಿಸಲಾಗಿದ್ದು, ಮಠಕ್ಕೇ ತೆರಳಿ ಶ್ರೀಗಳ ಸನ್ನಿಧಾನದಲ್ಲೇ ಅವರಿಗೆ ಈ ಗೌರವ ಸಲ್ಲಿಸಲಾಗಿದೆ. ಸಾಧಕರಿಗೆ ಅವರಷ್ಟೇ ಸಾಧನೆ ಮಾಡಿರುವ ವಿಶೇಷ ವ್ಯಕ್ತಿಗಳಿಂದ ಗೌರವ ಸಲ್ಲಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಈಗಾಗಲೆ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾರ್ಚ್‌ 17 ಹಾಗೂ 18ರಂದು ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ.

ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌, ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ್ದಕ್ಕೆ ವಿಶ್ವೇಶ್ವರ ಭಟ್‌, ಸಾವಿನಲ್ಲೂ ಮಾನವೀಯತೆ ಮೆರೆದು ಕಣ್ಣುಗಳನ್ನು ದಾನ ಮಾಡಿದ್ದ ಹರೀಶ್ ನಂಜಪ್ಪ, ಸಾಲು ಮರದ ತಿಮ್ಮಕ್ಕ, ನೈಸರ್ಗಿಕ ಕೃಷಿಯಲ್ಲಿ ಕ್ರಾಂತಿ ಮಾಡಿದ ಕೋಲಾರದ ನಾರಾಯಣ ರೆಡ್ಡಿ, ಮಹಿಳಾ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ರಾಜೇಶ್ವರಿ ಗಾಯಕ್ವಾಡ್‌, ವೇದಾ ಕೃಷ್ಣಮೂರ್ತಿ, ಹೆಮ್ಮೆಯ ರಂಗಸೇವೆಗಾಗಿ ನೀನಾಸಂ ಸಂಸ್ಥೆ, 5 ರೂಪಾಯಿ ವೈದ್ಯರಾದ ಶಂಕರೇಗೌಡ, ಐಪಿಎಸ್‌ ಮಾಡಿದ ಮೊದಲ ಕನ್ನಡತಿ ಖ್ಯಾತಿಯ ರೂಪಾ ಮುದ್ಗಲ್‌, ರಾಜಕುಮಾರ ಸಿನಿಮಾದ ಮೂಲಕ ಹೊಸ ಟ್ರೆಂಡ್‌ ಹುಟ್ಟುಹಾಕಿದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಪುನಿತ್‌ ರಾಜ್‌ ಕುಮಾರ್‌, ರಶ್ಮಿಕಾ ಮಂದಣ್ಣ, ಕ್ರೇಜಿ ಸ್ಟಾರ್‌ ರವಿಚಂದ್ರನ್‌, ನಟ ರಮೇಶ್‌ಗೆ ಗೌರವ ನೀಡಿದರು.

ಅಲ್ಲದೆ, ವಿ. ನಾಗೇಂದ್ರ ಪ್ರಸಾದ್‌ ಅವರಿಗೆ ಹೆಮ್ಮೆಯ ಚಿತ್ರಸಾಹಿತಿ ಪ್ರಶಸ್ತಿ ನೀಡಲಾಗಿದ್ದು, ವಿಜಯ್‌ ಪ್ರಕಾಶ್‌ ಅವರಿಗೆ ಹೆಮ್ಮೆಯ ಧ್ವನಿ ಪ್ರಶಸ್ತಿ ಸಹ ಸಂದಿದೆ. ಹೆಮ್ಮೆಯ ಸಂಗೀತಗಾರನಾಗಿ ಅರ್ಜುನ್‌ ಜನ್ಯ ಹೊರಹೊಮ್ಮಿದ್ದರೆ, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿ ಅವರಿಗೆ ಹೆಮ್ಮೆಯ ಹೊಸ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆಯೋಜನೆಗೊಂಡಿದ್ದ ಅದ್ದೂರಿ ಸಮಾರಂಭದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ತಮ್ಮ ತಂಡದೊಂದಿಗೆ ಹೆಜ್ಜೆ ಹಾಕಿ ಸಮಾರಂಭಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟರು. ಅಲ್ಲದೆ ನಿರುಪಮಾ ರಾಜೇಂದ್ರ ಅವರ ನೃತ್ಯ. ಪ್ರವೀಣ್. ಡಿ ರಾವ್‌ ಅವರ ಸಂಗೀತ, ವಿಜಯ್‌ ಪ್ರಕಾಶ್‌, ಸಂಗೀತ ಕಟ್ಟಿ ಸೇರಿದಂತೆ ಅನೇಕರ ಗಾಯನ, ರಮೇಶ್ ಅರವಿಂದ್ ಅವರ ನಿರೂಪಣೆಯೊಂದಿಗೆ ಹೆಮ್ಮೆಯ ಕನ್ನಡಿಗ ಅದ್ಭುತವಾಗಿ ಮೂಡಿಬಂದಿದ್ದು, ಮಾರ್ಚ್‌ 17 ಹಾಗೂ 18ರಂದು ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಅದ್ಭುತವನ್ನು ನೋಡಲು ಮರೆಯದಿರಿ.

Leave a Reply

Your email address will not be published.