ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ದಿಗ್ಬಂಧನ !

ಗದಗ : ರಾತ್ರಿ ಮರಳನ್ನು ಬೇರೆಡೆಗೆ ಸಾಗಿಸುವ ವೇಳೆ ತಹಶೀಲ್ದಾರ್‌ ಸಿಕ್ಕಿಬಿದ್ದಿದ್ದು, ಸಾರ್ವಜನಿಕರು ತಹಶೀಲ್ದಾರ್‌ರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಮುಂಡರಗಿ ತಾಲ್ಲೂಕಿನ ನಾಗರಹಳ್ಳಿಯಲ್ಲಿ ನಡೆದಿದೆ.

ಮುಂಡರಗಿಯ ತಹಶೀಲ್ದಾರ್‌ ಬ್ರಮರಾಂಬ ಗುಬ್ಬಿ ಶೆಟ್ಟಿ ನಾಗರಹಳ್ಳಿಯಲ್ಲಿ ರಾತ್ರೋ ರಾತ್ರಿ ಜೆಸಿಬಿ ಮೂಲಕ ಟಿಪ್ಪರ್‌ಗೆ ಮರಳು ತುಂಬಿಸುತ್ತಿದ್ದರು. ಈ ಮರಳನ್ನು ಬಡವರ ಶೌಚಾಲಯ ಹಾಗೂ ಸರ್ಕಾರದಿಂದ ಮಂಜೂರಾದ ಮನೆ ಕಟ್ಟಲು ತರಿಸಲಾಗಿದ್ದು, ಇದನ್ನು ತಹಶೀಲ್ದಾರ್‌ ಲೋಡ್‌ ಮಾಡಿಸುತ್ತಿದ್ದರು.

ಇದನ್ನು ನೋಡಿದ ಗ್ರಾಮಸ್ಥರು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಇದನ್ನೆಲ್ಲ ಕೇಳೋಕೆ ನೀವ್ಯಾರು ಎಂದು ಆವಾಜ್‌ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಗ್ರಾಮಸ್ಥರು ತಹಶೀಲ್ದಾರ್‌ರನ್ನು ನಾಗರಹಳ್ಳಿಯಲ್ಲಿ ದಿಗ್ಬಂಧನ ಹಾಕಿದ್ದು ರಾತ್ರಿಯಿಡೀ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಮುಂಡರಗಿ ಪೊಲೀಸರು ಸ್ಥಳಕ್ಕಾಗಮಿಸಿ ಬ್ರಮರಾಂಬ ಅವರನ್ನು ರಕ್ಷಣೆ ಮಾಡಿರುವುದಾಗಿ ತಿಳಿದುಬಂದಿದೆ.

ಆದರೆ ಪ್ರಕರಣ ಸಂಬಂಧ ಬ್ರಮರಾಂಬ ಹೇಳಿಕೆ ನೀಡಿದ್ದು, ಅಕ್ರಮ ಮರಳು ಅಡ್ಡೆ ಮೇಲೆ ಮಾತ್ರ ದಾಳಿ ನಡೆಸಿದ್ದೆ. ಸರ್ಕಾರಿ ಮನೆ, ಶೌಚಾಲಯ ನಿರ್ಮಾಣದ ಮರಳು ಸಂಗ್ರಹದ ಮೇಲೆ ದಾಳಿ ಮಾಡಿಲ್ಲ. ದಾಳಿ ವೇಳೆ ಗ್ರಾಮಸ್ಥರು ಅಡ್ಡಿ ಮಾಡಿ ಬೆದರಿಕೆ ಹಾಕಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಮೂವರ ಮೇಲೆ ದೂರು ದಾಖಲಿಸಿರುವುದಾಗಿ ಹೇಳಿದ್ದು, ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com