ಉಗ್ರರ ರಕ್ಷಣೆಗೆ ನಿಂತಿರುವ ಪಾಕ್‌ ನಮಗೆ ಬುದ್ದಿವಾದ ಹೇಳುವುದು ಬೇಕಿಲ್ಲ : ಭಾರತ

ಜಿನಿವಾ : ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಹಫೀಜ್‌ ಸಯೀದ್‌ ಸೇರಿದಂತೆ ಅನೇಕ ಉಗ್ರರಿಗೆ ಆಶ್ರಯ ನೀಡಿರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಆರೋಪಿಸುವ ಯಾವುದೇ ಹಕ್ಕಿಲ್ಲ ಎಂದು ಗುಡುಗಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ 37ನೇ ಸಭೆಯಲ್ಲಿ ಮಾತನಾಡಿದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಭಾರತದ ಎರಡನೇ ಖಾಯಂ ಕಾರ್ಯದರ್ಶಿ ಮಿನಿ ದೇವಿ ಕುಮಾಮ್‌, ಉಗ್ರ ಹಫೀಜ್‌ ಸಯೀದ್‌ ಮೇಲೆ ವಿಶ್ವಸಂಸ್ಥೆಯೇ ನಿಷೇಧ ಹೇರಿದೆ. ಆದರೆ ಪಾಕಿಸ್ತಾನ ಮಾತ್ರ ಉಗ್ರರಿಗೆ ಆಶ್ರಯ ನೀಡುತ್ತಲೇ ಇದೆ. ವಿಶ್ವಸಂಸ್ಥೆಯ ನಿಯಮವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದು, ಇಂತಹ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಭಯೋತ್ಪಾದನೆ ಎಂಬುದೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವಾಗ ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎನ್ನುವುದಕ್ಕೆ ಪಾಕಿಸ್ತಾನಕ್ಕೆ ಅರ್ಹತೆಯಿಲ್ಲ ಎಂದಿದ್ದಾರೆ.
ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ಉಗ್ರರು ಹುಟ್ಟಿಕೊಳ್ಳುತ್ತಿದ್ದಾರೆ. ಪಾಕಿಸ್ತಾನ ಮೊದಲು ಅದನ್ನು ನಿಯಂತ್ರಿಸಲಿ. ಅದು ಬಿಟ್ಟು ವಿಶ್ವಕ್ಕೆ ಪಾಠ ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಮುಂಬೈ ದಾಳಿ, ಪಠಾಣ್ ಕೋಟ್‌, ಉರಿ ಸೆಕ್ಟರ್‌ನಲ್ಲಿ ದಾಳಿ ನಡೆಸಿದ ಉಗ್ರರಿಗೆ ಪಾಕಿಸ್ತಾನ ಮೊದಲು ನಿಷೇಧ ಹೇರಲಿ. ಜೊತೆಗೆ ಪಾಕಿಸ್ತಾನದಲ್ಲಿರುವ ಹಿಂದೂ, ಜೈನರು ಸೇರಿದಂತೆ ಮುಸ್ಲೀಮೇತರರನ್ನು ಬಲವಂತವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಿಲ್ಲಿಸಲಿ ಎಂದಿದ್ದಾರೆ.

Leave a Reply

Your email address will not be published.