ರಾಜ್ಯದಲ್ಲಿರೋದು ಗೂಂಡಾ, ಕೊಲೆಗಡುಕ, ನಂ.1 ದರೋಡೆಕೋರ ಸರ್ಕಾರ : ಶ್ರೀರಾಮುಲು

ಬಳ್ಳಾರಿ : ಕಾಂಗ್ರೆಸ್‌ ಸರ್ಕಾರ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ತಾಲಿಬಾನ್‌ ಮತ್ತು ಕೊಲೆಗಡುಕ ಸರ್ಕಾರ ಆಡಳಿತ ನಡೆಸುತ್ತಿರುವುದಾಗಿ ಸಂಸದ ಶೀರಾಮುಲು ಆರೋಪಿಸಿದ್ದಾರೆ.

ಬಳ್ಳಾರಿಯಲ್ಲಿ ಶ್ರೀರಾಮುಲು ಹಾಗೂ ಜಿಲ್ಲಾಧ್ಯಕ್ಷ ಚೆನ್ನಬಸವನ ಗೌಡ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಶ್ರೀರಾಮುಲು ಕಾಂಗ್ರೆಸ್‌ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.  ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ, ಮಹಿಳೆಯರಿಗೆ, ದಲಿತರಿಗೆ ಕೊನೆಯಲ್ಲಿ ನ್ಯಾಯಧೀಶರಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾ. ವಿಶ್ವನಾಥ ಶೆಟ್ಟಿ ಹಲ್ಲೆಯನ್ನು ಖಂಡಿಸಿರುವ ಅವರು, ಪ್ರಕರಣ ಸಂಬಂಧ ಸಿಎಂ ಸಚಿವ ಸಂಪುಟದ ಮೇಲೆ ಅನುಮಾನ ಬರುತ್ತಿದೆ. ಲೋಕಾಯುಕ್ತದಲ್ಲಿ ಕೆಲವರ ತನಿಖೆ ನಡೆಯುತ್ತಿದೆ. ಸಿಎಂ ಮತ್ತು ಮಂತ್ರಿಗಳು ಸೇರಿ ಲೋಕಾಯುಕ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಲೋಕಾಯುಕ್ತವನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ರು, ಹಲ್ಲು ಕಿತ್ತ ಹಾವು ಮಾಡಿದ್ರು, ಎಸಿಬಿ ತಂದು ಲೋಕಾಯುಕ್ತ ದುರ್ಬಲಗೊಳಿಸಿದರು. ತನಿಖೆ ಮುಚ್ಚಲು ಈ ರೀತಿ ಹಲ್ಲೆ ಮಾಡಲಾಗಿದೆ, ಲೋಕಾಯುಕ್ತ ಮುಗಿಸಲು ಪ್ಲಾನ್‌ ಮಾಡಿರುವುದಾಗಿ ಆರೋಪಿಸಿದ್ದಾರೆ.

ಅನುರಾಗ್ ತಿವಾರಿ ಹತ್ಯೆ ಹಿಂದೆ ಸಿಎಂ ಕೈವಾಡವಿದೆ ಎಂದು ತಿವಾರಿ ಪೋಷಕರು ಆರೋಪ ಮಾಡಿದ್ದಾರೆ. ಆಹಾರ ಇಲಾಖೆ‌ ಭ್ರಷ್ಟಾಚಾರ ಹೊರಹಾಕಿದ್ದ ತಿವಾರಿ, ಡಿ.ಕೆ.ರವಿ, ಗಣಪತಿ ಎಲ್ಲಾ ಪ್ರಕರಣಗಳಂತೆ ಲೋಕಾಯುಕ್ತ ಪ್ರಕರಣವು ಮುಚ್ಚಿ ಹೋಗುತ್ತದೆ. ವಿಶ್ವನಾಥ ಶೆಟ್ಟಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ತಾಲಿಬಾನರಂತೆ ಇಲ್ಲಿಯೂ ಹಲ್ಲೆ ಕೊಲೆ ನಡೆಸಲಾಗುತ್ತಿದೆ. ಭದ್ರತೆ ಕೊಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಲಾಗಿದೆ. ನಾಟಕೀಯ ಬೆಳವಣಿಗೆಯಲ್ಲಿ ಒಬ್ಬಿಬ್ಬರನ್ನು ಅಮಾನತ್ತು ಮಾಡುತ್ತಿದ್ದಾರೆ. ತಮ್ಮ ಮೇಲೆ ಕೇಸ್ ಇರೋದಕ್ಕೆ ಸಿಎಂ ಮತ್ತು ಸಹೋದ್ಯೊಗಿಗಳು ಈ ರೀತಿ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊಲೆಗಡುಕ, ಗೂಂಡಾ ಸರ್ಕಾರವೇನಾದರೂ ಇದ್ದರೆ ಅದು ರಾಜ್ಯ‌ ಕಾಂಗ್ರೆಸ್ ಸರ್ಕಾರ.  ನಂ.೧ ದರೋಡೆ ಕೋರ ಸರ್ಕಾರ. ನಾಗೇಂದ್ರ, ಆನಂದ್ ಸಿಂಗ್ ಬಿಜೆಪಿಯಲ್ಲಿ ಇದ್ದಾಗ ಆರೋಪಿಗಳಾಗಿದ್ದರು. ಕಾಂಗ್ರೆಸ್ ಸೇರಿದ ಕೂಡಲೆ ಎಲ್ಲ ಪಾಪಗಳು ತೊಳೆದು ಹೋಗುತ್ತದೆಯಾ.. ? ಎಂದು ಪ್ರಶ್ನಿಸಿದ್ದಾರೆ.

 

Leave a Reply

Your email address will not be published.