ಅವಳು ವನಿತೆ ಜಗವಂಧಿತೆ : ಮನೆ ಮನಗಳ ನಂದಾದೀಪ ರುದ್ರವೀಣೆ ವೈಣಿಕೆ

ಕರುಣೆ ಮಮತೆಯೊಡಲಿನಲಿ ವಾತ್ಸಲ್ಯವೇ ಭೂಷಣ
ಅಕ್ಕರೆಯ ಸಕ್ಕರೆಯನುಣಿಸಿ ತಣಿವುದವಳ ಮನ
ಸಹನೆ ತಾಳ್ಮೆ ಅವಳ ಗುರುತು ಸದಾ ಆತ್ಮಸಂಯಮಿ
ಅವಳು ವನಿತೆ ಜಗವಂಧಿತೆ ಸುಪ್ತ ಅಂತರ್ಗಾಮಿನಿ

ನೀ ಶೀತಲೆ ನೀ ನಿಶ್ಚಲೆ ಅಚಲ ಶಾಂತ ಸಾಗರಿ
ಮುನಿದು ಕೆರಳಿ ಪ್ರಕ್ಷುಬ್ಧ ನಾರಿ ಜ್ವಾಲಾಮುಖಿ ಉರಿ
ನ್ಯಾಯದೇವಿ ಕ್ಷಮಾ ಭೂಮಿ ಜೀವನ್ಮುಖಿ ಸಖಿ
ಮನೆ ಮನಗಳ ನಂದಾದೀಪ ರುದ್ರವೀಣೆ ವೈಣಿಕೆ

ಮಹಾಪೂರ ಅವಳ ಒಲವು ಚಿಲುಮೆ ಚಿಮ್ಮೊ ಜೀವಜಲ
ಅನಂತ ಪ್ರೇಮಿ ಹೃದಯ ಚೆಲುವು ಲಾವಣ್ಯಕೆ ರೂಪಕ
ಅನವರತ ಅನುರಕ್ತೆ ಅನಭಿವ್ಯಕ್ತ ಅಭಿಸಾರಿಕೆ ಕಣ್ಮಣಿ
ಕನವರಿಸುವ ತಹತಹಿಸುವ ಚಡಪಡಿಸುವ ಚಿನ್ಮಯಿ

ಸಂಜೀವಿನಿ ಅವಿನಾಶಿ ಸುಧರ್ಮ ಶೀಲ ಮಂಗಳೆ
ಸದಾ ಪ್ರಣಯಿ ಮೋಹನಾಂಗಿ ಸರಸಿ-ವಿರಹಿ ಪ್ರಮೀಳೆ
ಸುನೀತ ಬಾಲೆ ಮದನಾರಿ ಸ್ವರ ಸುಮಧುರ ಗಾಯಕಿ
ವಿನೀತ ಲೋಲೆ ಅಮೃತಮತಿ ಅನಂತ ಶಕ್ತಿ ಧಾರಕಿ

ಅವಳು ಮಾಯೆ ಬೆರೆತ ಛಾಯೆ ಕೋಮಲ ವದನೆ ನಿರ್ಮಲೆ
ವನದ ಹಸಿರಿನಂತ ಕಾಂಕ್ಷೆ ಬಸಿರ ಹೊತ್ತ ನಿತ್ಯ ಸುಮಂಗಲಿ
ಚಿತ್ತದಲ್ಲೆ ಹೊತ್ತ ಹರಕೆ ಅವಳ ಸಂಸ್ಕೃತಿಯೇ ಘನ ಕೃತಿ
ಜಗದ ಮಾತೆ ಮಹಾಯೋನಿ ಜನನಿ ಸೃಷ್ಠಿ ಸುಕೃತಿ

-ವಿಭಾ (ವಿಶ್ವಾಸ್ ಭಾರದ್ವಾಜ್)

Leave a Reply

Your email address will not be published.

Social Media Auto Publish Powered By : XYZScripts.com