ನರಹಂತಕ ಯಾರೆಂದು ಅಡ್ವಾಣಿ, ವಾಜಪೇಯಿಗೆ ಕೇಳಿ, ಗೊತ್ತಾಗುತ್ತೆ : ಕಟೀಲ್ ಗೆ CM ಟಾಂಗ್

ಬೆಂಗಳೂರು : ತಮಗೆ ನರಹಂತಕ ಎಂದು ಹೇಳಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ರಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ನರಹಂತಕ ಯಾರೆಂದು ಹಿರಿಯ ನಾಯಕರಾದ ಎಬಿ ವಾಜಪೇಯಿ ಹಾಗೂ ಎಲ್.ಕೆ ಅಡ್ವಾಣಿಯವರನ್ನು ಕೇಳಿದರೆ ಗೊತ್ತಾಗುತ್ತಿತ್ತು. ಈ ಇಬ್ಬರು ಹಿರಿಯ ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಟಾಂಗ್ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ನಾಯಕರು ಬಳಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ಮಟ್ಟಕ್ಕೆ ನಾನು ಇಳಿಯಲು ಸಾಧ್ಯವಿಲ್ಲ. ಬಸವಣ್ಣನವರ ವಚನಗಳನ್ನು ಮಾತ್ರ ಉಲ್ಲೇಖಿಸಲು ನನಗೆ ಸಾಧ್ಯ ಎಂದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ವಂತ ಕ್ಷೇತ್ರ ಗೋರಕ್ ಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ 1250ಕ್ಕೂ ಹೆಚ್ಚು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ. ಈಗ ಹೇಳಿ ಯಾರನ್ನು ನರಹಂತಕ ಎಂದು ಕರೆಯೋಣ ಎಂದು ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿದ್ದಿದ್ದರೆ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡಿದರೆ ನರಹಂತಕರು ಯಾರು ಎಂದು ಅವರೇ ಹೇಳುತ್ತಿದ್ದರು. ಇಬ್ಬರು ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ನಿನ್ನೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ನರಹಂತಕ ಮುಖ್ಯಮಂತ್ರಿ ಎಂಬ ಪದ ಬಳಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com