ಸಂವಾದ, ಪತ್ರಿಕಾ ಗೋಷ್ಠಿ ಎಂದರೆ ಮೋದಿ ಹಾಗೂ ಅಮಿತ್ ಶಾಗೆ ಭಯವೇಕೆ ?

ನರೇಂದ್ರ ಮೋದಿ – ಅಮಿತ್ ಷಾ ಏಕೆ ಪತ್ರಿಕಾಗೋಷ್ಠಿ ಮತ್ತು ಜನರೊಂದಿಗೆ ಸಂವಾದಗಳಂತಹ ಕಾರ್ಯಕ್ರಮಗಳಿಂದ ತಪ್ಪಿಸಿಕೊಳ್ಳುತ್ತಾರೆ ಗೊತ್ತಾ?

ಕಳೆದೆರಡು ದಿನಗಳಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದೆ. ಬೀದರ್ ಜಿಲ್ಲೆಯ ಹುಮ್ನಾಬಾದಿನಲ್ಲಿ ಅವರು ರೈತರೊಂದಿಗೆ ನಡೆಸಿದ ಸಂವಾದ, ಕಲಬುರಗಿಯಲ್ಲಿ ನಡೆಸಿದ ಸುದ್ದಿಗೋಷ್ಠಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮೇಲೆ ನನಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಚ ಅಮಿತ್ ಷಾ ಏಕೆ ಸುದ್ದಿಗೋಷ್ಠಿ ಮತ್ತು ಜನರೊಂದಿಗಿನ ಸಂವಾದಗಳಂತಹ ಇಂಟರಾಕ್ಟ್‌ ಕಾರ್ಯಕ್ರಮಗಳಿಂದ ತಪ್ಪಿಕೊಳ್ಳುತ್ತಾರೆ ಎಂಬುದು ಮನವರಿಕೆಯಾಯಿತು; ಎದುರಿಗಿದ್ದವರು ಪ್ರಶ್ನೆ ಕೇಳಲು ಅವಕಾಶ ಇರದಂತಹ, ಇವರು ಹೇಳಿದ್ದನ್ನು ಮಾತ್ರ ಕೇಳಿಸಿಕೊಳ್ಳುವ ಅನಿವಾರ್ಯತೆ ಇರುವಂತಹ ಸಾರ್ವಜನಿಕ ಸಭೆ, ಮನ್ ಕಿ ಬಾತ್, ಟ್ಟಿಟರ್ ಗಳಂತಹ ಮಾಧ್ಯಮಗಳನ್ನಷ್ಟೇ ಅವರು ಹೆಚ್ಚಾಗಿ ಬಳಸಲು ಏಕೆ ಇಷ್ಟಪಡುತ್ತಾರೆ ಎಂಬುದು ಸ್ಪಷ್ಟವಾಯಿತು. ಪ್ರಧಾನಿ ಸಂಸತ್ತಿನಲ್ಲಿಯೂ ಹೆಚ್ಚು ಮಾತಾಡುವುದಿಲ್ಲ, ಏಕೆಂದರೆ ಅಲ್ಲಿಯೂ ಪ್ರಶ್ನಿಸುವವರು, ವಿರೋಧಿಸುವವರು ಇರುತ್ತಾರೆ. ಅದಕ್ಕಾಗಿಯೇ ಅವರು ಸಂಸತ್ತಿನಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸಾರ್ವಜನಿಕ ಸಭೆಗಳಲ್ಲಿ ಎತ್ತುತ್ತಾರೆ.

ಹುಮ್ನಾಬಾದ್‌ನ ರೈತರೊಂದಿಗಿನ ಅಮಿತಾ ಷಾ ಅವರ ಸಂವಾದವನ್ನೇ ತೆಗೆದುಕೊಳ್ಳಿ. ಷಾ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಅವರು ಮೋದಿಯವರಿಗೆ ಹೇಳಿ ತಮ್ಮ ಸಮಸ್ಯೆ ಬಗೆಹರಿಸುತ್ತಾರೆ ಅಂತ ಆಸೆಯಿಂದ ಸುಮಾರು ಸಾವಿರ ರೈತರು ದೂರದೂರುಗಳಿಂದ ಬಂದಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಖಾಲಿ ಚೊಂಬು ಮಾತ್ರ. ನಿಗದಿತ ಸಮಯಕ್ಕಿಂತ ಮೂರು ತಾಸು ತಡವಾಗಿ ಬಂದ ಷಾ ಅವರಿಗೆ ಪ್ರಶ್ನೆ ಕೇಳುವುದಕ್ಕೆ ಅವಕಾಶ ಸಿಕ್ಕಿದ್ದು ಐದು ಜನ ರೈತರಿಗೆ ಮಾತ್ರ. ಉಳಿದವರು “ಅರೆ, ಇದೆಂಥಾ ಸಂವಾದ?” ಎಂದು ಗೊಣಗುತ್ತಲೇ ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ವಾಪಾಸು ಹೊಗಬೇಕಾಯಿತು. ಪ್ರಶ್ನೆ ಕೇಳಲು ಮುಂದಾದ ಒಬ್ಬ ರೈತನಿಂದ ಕುಸ್ತಿಯಾಡುವಂತೆ ಬಲವಂತವಾಗಿ ಮೈಕ್ ಕಸಿದುಕೊಳ್ಳಲಾಯಿತು.

ನಮ್ಮ ರೈತರನ್ನು, ರೈತನಾಯಕರನ್ನು ಮೆಚ್ಚಲೇಬೇಕು. ಪ್ರಶ್ನೆ ಕೇಳಿದ ಐವರೂ ಕೂಡ ಷಾ ಅವರಿಗೆ ನಿಜಕ್ಕೂ ಬೆವರಿಳಿಸಿದರು. ಸಭೆ ಪ್ರಾರಂಭವಾಗುತ್ತಲೇ ರೈತ ಸಂಘದ ಬೀದರ್ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೊರೆಯವರು ನೇರವಾದ, ಖಡಕ್ ಆದ ಪ್ರಶ್ನೆಯನ್ನು ಕೇಳುವುದರೊಂದಿಗೆ ಸಭೆಗೆ ಉತ್ತಮ ಪ್ರಾರಂಭ ಒದಗಿಸಿದರು. ಅವರ ಪ್ರಶ್ನೆಯ ಸಾರ ಇಂತಿದೆ:

“ರೈತ ದೇಶದ ಬೆನ್ನೆಲುಬು. ದೇಶದ ಅನ್ನದಾತ. ಆದರೆ ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳಿಂದ ಈಗ ಅವನು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ, ಸಾಲದ ಹೊರೆ ತಾಳಲಾರದೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ. ರಾಜ್ಯ ಸರ್ಕಾರವೇನೋ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿದೆ. ಅದೇ ರೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ನಿಮ್ಮ ಪಕ್ಷದ ನೇತೃತ್ವದಲ್ಲಿನ ಕೇಂದ್ರ ಸರ್ಕಾರಕ್ಕೆ ಏನು ಸಮಸ್ಯೆ?

ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ 17,15,000 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡೋಕೆ ನಿಮ್ಮ ಹತ್ರ ಹಣ ಇದೆ. ರೈತರ 12,60,000 ಕೋಟಿ ಸಾಲ ಮನ್ನಾ ಮಾಡೋಕೆ ನಿಮ್ಮ ಹತ್ತಿರ ಹಣ ಇಲ್ಲ ಅಲ್ಲವೆ? ನೀವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರೋದು ಕಾರ್ಪೊರೇಟ್ ಸಂಸ್ಥೆಗಳಿಂದಾಗಲೀ ಅಥವಾ ಉದ್ಯಮಿಗಳಿಂದಾಗಲೀ ಅಲ್ಲ, ರೈತರ ಓಟಿನಿಂದ ಅನ್ನೊ ಸತ್ಯ ನೆನಪಿನಲ್ಲಿಡಿ.”

ನಮ್ಮ ರೈತರು ಇಷ್ಟೊಂದು ಜಾಗೃತರಾಗಿದ್ದಾರೆ ಎಂಬುದನ್ನು ಕಂಡು ಖುಷಿಯಾಯಿತು. ಹಾಗೆಯೇ, ನಮ್ಮ ರಾಜಕೀಯ ನಾಯಕರು ಇಷ್ಟೊಂದು ಬೇಜವಾಬ್ದಾರಿಗಳಾಗಿದ್ದಾರೆ ಎಂದು ಈ ಪ್ರಶ್ನೆಗಳಿಗೆ ಉತ್ತರಿಸಲು ಹೆಣಗಾಡಿದ ಅಮಿತ್ ಷಾ ಕಂಡು ಬೇಸರವೂ ಆಯಿತು.

ಎಲ್ಲರೂ ಪ್ರಶ್ನೆ ಕೇಳಿದ ಮೇಲೆ ಅಮಿತ್ ಷಾ ಅವರು ಎಲ್ಲವಕ್ಕೂ ಒಂದೇ ಬಾರಿಗೆ ಉತ್ತರಿಸುತ್ತಾರೆ ಎಂದು ಸಂಘಟಕರು ಪ್ರಕಟಿಸಿದ್ದರಿಂದ ಅಣದೊರೆಯವರಿಗೆ ತಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ ಅಮಿತ್ ಷಾ ಪ್ರತಿಸ್ಪಂದಿಸಲು ಪ್ರಾರಂಭಿಸಿದರು. ಅದರೆ, ರೈತರು ಕೇಳಿದ ಪ್ರಶ್ನೆಗಳನ್ನು ಜಾಣತನದಿಂದ ಬದಿಗಿಟ್ಟು ಏನೇನೋ ಮಾತಾಡಲಾರಂಭಿಸಿದರು. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು ಕಾಂಗ್ರೆಸ್ ವಿರುದ್ಧ, ಮುಖ್ಯಮಂತ್ರಿ ಸಿದ್ರಾಮಯ್ಯನವರ ವಿರುದ್ಧ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಸಂದರ್ಭವಿಲ್ಲದಿದ್ದರೂ ವಿನಾಕಾರಣ ಹರಿಹಾಯುವುದಕ್ಕೇ ಹೆಚ್ಚಿನ ಸಮಯ ವಿನಿಯೋಗಿಸಿದರು. ರೈತರು ಸಭಿಕರ ಗ್ಯಾಲರಿಯಿಂದಲೇ ಜೋರಾಗಿ ಕೂಗಿ ಕೂಗಿ ತಾವು ಎತ್ತಿದ ವಿಷಯಗಳ ಬಗ್ಗೆ ಷಾ ಅವರ ಗಮನ ಸೆಳೆಯಲು ಪ್ರಯತ್ನಿಸಿದರು. ರೈತರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭ ಮಾಡಿದಂತೆ ಮಾಡಿ ಮತ್ತೆ ಕಾಂಗ್ರೆಸ್ಸಿಗೆ ಬೈಯಲು ಶುರು ಮಾಡುತ್ತಿದ್ದರು. ಮತ್ತೆ ಮತ್ತೆ ರೈತರು ಕೂಗಿ ಅವರನ್ಮು ತಮ್ಮ ಪ್ರಶ್ನೆಗಳಿಗೆ ಎಳೆದು ತರುತ್ತಿದ್ದರು.

ಅಣದೊರೆಯವರು ಕೇಳಿದ ಪ್ರಶ್ನೆಯನ್ನು ಷಾ ಮುಟ್ಟಲೇ ಇಲ್ಲ. ಕೊನೆಗೆ ಅಣದೊರೆಯವರು ಪಟ್ಟು ಹಿಡಿದು ಕೂಗಿದ್ದರಿಂದ ಷಾ ಅದಕ್ಕೆ ಉತ್ತರಿಸಲೇಬೇಕಾಯಿತು. ಅವರು ಹೇಳಿದ ಉತ್ತರದ ಸಾರಾಂಶ ಹೀಗಿದೆ:

“ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಯಾವ ಉದ್ಯಮಿಗಳ ಸಾಲವನ್ನೂ ಮನ್ನಾ ಮಾಡಿಲ್ಲ. ನಾವು ಕಾರ್ಪೊರೇಟ್ ಸಾಲ ಮನ್ನಾ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಅದರೆ, ಉದ್ಯಮಿಗಳಿಗೆ ವಿಧಿಸಿದ ತೆರಿಗೆಯನ್ನು ಸ್ವಲ್ಪ ಕಡಿಮೆ ಮಾಡಿದ್ದೇವೆ ಅಷ್ಟೆ.”

ರೈತ ನಾಯಕ ಅಣದೊರೆಯವರು17,15,000 ಕೋಟಿ ರೂಪಾಯಿ ತೆರಿಗೆ ಮನ್ನಾ ಅಥವಾ ತೆರಿಗೆ ರಿಯಾಯಿತಿ ಎನ್ನುವ ಬದಲು ಕಾರ್ಪೊರೇಟ್ ಸಾಲ ಮನ್ನಾ ಎಂದಿದ್ದರು. ಅದನ್ನೇ ಹಿಡಿದುಕೊಂಡು ಷಾ ತಪ್ಪಿಸಿಕೊಂಡರು. ಅದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು ಬಿಜೆಪಿ ಕೇಂದ್ರ ಸರ್ಕಾರ ಮನ್ನಾ ಮಾಡುತ್ತೋ ಅಥವಾ ಇಲ್ಲವೋ ಎಂಬ ಬಗ್ಗೆ ಷಾ ತುಟಿಕ್‌ ಪಿಟಿಕ್ ಎನ್ನಲಿಲ್ಲ.

ಇನ್ನೊಬ್ಬ ರೈತ ನಾಯಕ ಚಂದ್ರಶೇಖರ್ ಜಾಮದಾರ್ ಅವರು ಕೇಳಿದ ಪ್ರಶ್ನೆಯ ಸಾರಾಂಶ ಹೀಗಿದೆ:

“ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರುತ್ತೇವೆ ಎಂದು 2014ರ ಲೋಕಸಭಾ ಚುನಾವಣೆ ವೇಳೆ ರೈತರಿಗೆ ವಾಗ್ದಾನ ಮಾಡಿದ್ರಿ. ಈ ಭರವಸೆಯನ್ನು ನಿಮ್ಮಪಕ್ಷದ ಪ್ರಣಾಳಿಕೆಯಲ್ಲೂ ಸೇರಿಸಿದ್ರಿ. ಆದರೆ ಅಧಿಕಾರಕ್ಕೆ ಬಂದ ಮೇಲೆ ಸ್ವಾಮಿನಾಥನ್ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದ್ರಿ…”

ಇದಕ್ಕೆ ಷಾ ಉತ್ತರ: “ಯಾವುದೇ ಬೆಳೆ ಬೆಳೆಯಲು ತಗುಲಿದ ಉತ್ಪಾದನಾ ವೆಚ್ಚಕ್ಕೆ, ಉತ್ಪಾದನಾ ವೆಚ್ಚದ ಶೇಕಡಾ 50ರಷ್ಟು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದು ಸ್ವಾಮಿನಾಥನ್ ವರದಿಯ ಪ್ರಮುಖ ಶಿಫಾರಸ್ಸು. ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈಗ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು ಇತ್ತೀಚೆಗೆ ಮಂಡಿಸಲಾದ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.”

ಇಡೀ ಸಂವಾದದಲ್ಲಿ (ವಾಸ್ತವದಲ್ಲಿ ಐದು ಜನ ರೈತರು ಕೇಳಿದ ಸ್ಪಷ್ಟ ಪ್ರಶ್ನೆಗಳಿಗೆ ಷಾ ನೀಡಿದ ಅಸ್ಪಷ್ಟ, ಅಸಮಂಜಸ ಮತ್ತು ಅರೆಬರೆ ಉತ್ತರ) ನನ್ನ ಗಮನಕ್ಕೆ‌ ಬಂದ ಇನ್ನೊಂದು ಅಂಶ ಎಂದರೆ “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆ ಬಿಜೆಪಿಗಳಿಗೆ ಎಂತೆಂಥ ಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುತ್ತಲ್ಲಾ ಎಂಬುದು.

ತಮ್ಮ ಪ್ರಶ್ನೆಗೆ ಅಮಿತ್ ಷಾ ಅವರು ಸರಿಯಾಗಿ ಉತ್ತರಿಸದಿದ್ದಾಗ ಅಥವಾ ಅಸಮರ್ಪಕ ಉತ್ತರ ನೀಡಿದಾಗ ಅಥವಾ ಉತ್ತರವನ್ನೇ ನೀಡದೇ ತಪ್ಪಿಸಿಕೊಳ್ಳುತ್ತಿದ್ದಾಗ ರೈತರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಜೋರಾಗಿ ಕೂಗುತ್ತಿದ್ದುದು ಕಾರ್ಯಕ್ರಮದ ಉದ್ದಕ್ಕೂ ನಡೆಯುತ್ತಿತ್ತು. “ಪೆಹ್ಲೆ ಮೆರಿ ಬಾತ್ ಸುನಿಯೆ” ಎಂದು ಷಾ ಅವರೂ ಪದೇ ಪದೇ ಹೇಳುತ್ತಿದ್ದರು. ಅದರಿಂದ ಪ್ರಯೋಜನವಾಗದಿದ್ದಾಗ ಆ ಸಂಕಷ್ಟದ ಸಮಯದಲ್ಲಿ ಷಾ ಅವರನ್ನು ಪಾರು ಮಾಡಿದ್ದು “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆ. ರೈತರು ಪಟ್ಟು ಹಿಡಿದು ಪ್ರಶ್ನೆ ಕೇಳಲು ಪ್ರಾರಂಭಿಸುತ್ತಿದ್ದಂತೆಯೇ ಷಾ ಅವರು ಮೈಕಿನಲ್ಲಿ ಜೋರಾಗಿ “ಭಾರತ್ ಮಾತಾಕಿ ಜೈ” ಎಂದರು. ಅದಕ್ಕೆ ಬಿಜೆಪಿ ಕಾರ್ಯಕರ್ತರೂ “ಜೈ” ಎಂದು ಒಕ್ಕೊರಲಿನಿಂದ ದನಿಗೂಡಿಸಿದರು. ಅಲ್ಲಿಗೆ ರೈತರ ಪ್ರಶ್ನೆಗಳು ಮೂಲೆಗುಂಪಾಗಿಬಿಟ್ಟವು. ಇದನ್ನು ನೋಡಿ ನನಗೆ ತಕ್ಷಣ ನೆನಪಾಗಿದ್ದು ಪಿ.ಕೆ. ಚಿತ್ರದ ಒಂದು ಸನ್ನಿವೇಶ. ಅಲ್ಲಿಯೂ ಪಿಕೆ (ಅಮೀರ್ ಖಾನ್) ಗುರೂಜಿಗೆ ಮುಜುಗರ ಉಂಟಾಗುವಂತಹ ಪ್ರಶ್ನೆ ಕೇಳಿದ ತಕ್ಷಣ ಗೂರೂಜಿಯ ಸೆವಕರು ಈಗ ಗುರೂಜಿಗೆ ಧ್ಯಾನದ ಸಮಯವ ಎಂದು ಘೋಷಿಸಿ ಜೋರಾಗಿ ಮೈಕಿನಲ್ಲಿ ಭಜನೆ ಪ್ರಾರಂಭಿಸಿಬಿಡುತ್ತಾರೆ.

ಇನ್ನು ಕಲಬುರಗಿಯಲ್ಲಿ ನಡೆದ ಘಟನೆಗಳು.
ಮರುದಿನ, ಅಂದರೆ ಸೋಮವಾರ ಬೆಳಿಗ್ಗೆ ಅಮಿತ್ ಷಾ ಅವರು ಕಲಬುರಗಿಯಲ್ಲೂ ಇಂತಹುದೇ ಕಷ್ಟಕರ ಸನ್ನಿವೇಶ ಎದುರಿಸಬೇಕಾಯಿತು. ರೈತನಾಯಕ ಮಾರುತಿ ಮಾನ್ಪಡೆ (Maruti Manapade) ನೇತೃತ್ವದಲ್ಲಿ ಆರು ಜನ ರೈತಕಾರ್ಯಕರ್ತರ ಒಂದು ನಿಯೋಗ ಷಾ ಅವರನ್ನು ಐವಾನ್-ಇ-ಷಾಹಿ ಅತಿಥಿಗೃಹದಲ್ಲಿ ಭೇಟಿ ಮಾಡಿತು. ಅ ನಿಯೋಗ ಪ್ರಮುಖವಾಗಿ ತೊಗರಿ ಖರೀದಿಗೆ ಸಂಬಂಧಿಸಿದ ಮೂರು ವಿಷಯಗಳ ಬಗ್ಗೆ ಷಾ ಅವರ ಗಮನ ಸೆಳೆಯಲು ಪ್ರಯತ್ನಿಸಿತು.

1) ಕಲಬುರಗಿ ತೊಗರಿಯ ನಾಡು. ಈ ವರ್ಷ ರಾಜ್ಯದಲ್ಲಿ ಬೆಳೆದ ಸುಮಾರಿ 9 ಲಕ್ಷ ಟನ್ ತೊಗರಿಯಲ್ಲಿ ಹೆಚ್ಚೂ ಕಡಿಮೆ ಅರ್ಧದಷ್ಟು ಭಾಗ ಕಲಬುರಗಿ ಜಿಲ್ಲೆಯೊಂದರಲ್ಲೇ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ತೊಗರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಪ್ರತೀ ಕ್ವಿಂಟಾಲಿಗೆ ಸುಮಾರು 4000 ರೂಪಾಯಿಯಷ್ಟು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಬೆಲೆ ಕುಸಿತದಿಂದ ತೊಗರಿ ಬೆಳೆಗಾರರನ್ನು ರಕ್ಷಿಸುವುದಕ್ಕೆ ಪ್ರತೀ ಕ್ವಿಂಟಾಲಿಗೆ 7500 ರೂಪಾಯಿ ಕನಿಷ್ಠ ಬೆಂಬಲ ಬೆಲೆನಿಗದಿ ಮಾಡಿ ಸರ್ಕಾರವೇ ಎಲ್ಲಾ ತೊಗರಿಯನ್ನು ಖರೀದಿಸಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದೆವು. ಏಕೆಂದರೆ, ಇದು ಕೇಂದ್ರ ಸರ್ಕಾರದ ಕೆಲಸ. ಅದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತೀ ಕ್ವಿಂಟಾಲಿಗೆ 5450 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿತು. ಇದು ತುಂಬಾ ಕಡಿಮೆ ಆಗಿದ್ದರಿಂದ ಕಾಂಗ್ರೆಸ್ ನೇತ್ರತ್ವದ ರಾಜ್ಯ ಸರ್ಕಾರ ಅದಕ್ಕೆ 550 ರೂಪಾಯಿ ಬೋನಸ್ ಸೇರಿಸಿ ಪ್ರತೀ ಕ್ವಿಂಟಾಲಿಗೆ 6000 ರೂಪಾಯಿಯಂತೆ ರೈತರಿಂದ ಖರೀದಿ ಪ್ರಾರಂಭಿಸಿತು. ಅದರೆ ಕೇಂದ್ರ ಸರ್ಕಾರ ಕೆವಲ 1.65 ಲಕ್ಷ ಟನ್ ಮಾತ್ರ ಖರೀದಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ಬಂಧ ಹೇರಿತು. ರಾಜ್ಯದಲ್ಲಿ ಒಂಬತ್ತು ಲಕ್ಷ ಟನ್ ತೊಗರಿ ಬೆಳೆದಿದ್ದರಿಂದ ಕೇವಲ ಒಂದುವರೆ ಲಕ್ಷ ಟನ್ ಅಷ್ಟೇ ಖರೀದಿಸಿದರೆ ಉಳಿದ ರೈತರು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 4000 ರೂಪಾಯಿಯಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘಟನೆಗಳು ಮತ್ತು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದಿದ್ದರಿಂದ ಇನ್ನೊಂದು ಲಕ್ಷ ಟನ್ ಖರೀದಿಸಲು ಅನುಮತಿ ನೀಡಲಾಗಿದೆ. ಅದರೂ, ಇನ್ನೂ ಸುಮಾರು ಆರೂವರೆ ಲಕ್ಷ ಟನ್ ತೊಗರಿ ಹಾಗೇ ಉಳಿಯುತ್ತದೆ. ಕೇಂದ್ರ ಸರ್ಕಾರದ ನಿರ್ಬಂಧದಿಂದಾಗಿ ಕೇವಲ ಕಾಲುಭಾಗ ರೈತರಷ್ಟೇ ತಮ್ಮ ಬೆಳೆಯನ್ನು ಖರೀದಿ ಕೇಂದ್ರದಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಉಳಿದವರು ಮತ್ತದೇ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ತೊಗರಿ ಖರೀದಿಯ ಮೇಲೆ ಕೇಂದ್ರ ಹಾಕಿರುವ ಪ್ರಮಾಣ ನಿರ್ಬಂಧವನ್ಮು ತೆಗೆಯಬೇಕು. ರೈತರು ಬೆಳೆದ ಎಲ್ಲಾ ತೊಗರಿಯನ್ನು ಖರೀದಿಸಬೇಕು.

2) ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿಯಲು ವಿದೇಶಗಳಿಂದ ಸುಂಕರಹಿತವಾಗಿ ಆಮದಾಗುತ್ತಿರುವ ದ್ವಿದಳ ಧಾನ್ಯಗಳೇ ಕಾರಣ. ಆಮದು ಸುಂಕ ಇಲ್ಲದೇ ದೇಶಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಈ ತೊಗರಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ 55 ರೂಪಾಯಿಯಂತೆ ದೊರೆಯುತ್ತದೆ. ದೇಶದ ರೈತರು ಬೆಳೆದ ತೊಗರಿಯನ್ನು 75 ರೂಪಾಯಿಗೆ ಕೇಜಿಯಂತೆ ಯಾರೂ ಕೊಂಡುಕೊಳ್ಳುವುದಿಲ್ಲ. ಇದರಿಂದ ಆಮದಾದ ತೊಗರಿಗೆ ಬೇಡಿಕೆ ಹೆಚ್ಚಾಗಿ ಸ್ಥಳೀಯವಾಗಿ ಬೆಳೆದ ತೊಗರಿಯ ಬೆಲೆಯೇ ಕುಸಿದಿದೆ. ಹೀಗಾಗಿ ದ್ವಿದಳ ಧಾನ್ಯದ ಆಮದಿನ ಮೇಲೆ ಶೇಕಡ 35ರಷ್ಟು ತೆರಿಗೆ ವಿಧಿಸಿದರೆ ಆಮದಾದ ತೊಗರಿ, ದೇಶೀಯವಾಗಿ ಬೆಳೆದ ತೊಗರಿ ಎರಡೂ ಕೇಜಿಗೆ 75 ರೂಪಾಯಿಯಂತೆ ಮಾರಾಟ ಆಗುತ್ತವೆ. ಆದ್ದರಿಂದ ದ್ವಿದಳ ಧಾನ್ಯಗಳ ಆಮದಿನ ಮೇಲೆ ಶೇಕಡ 35 ಷ್ಟು ತೆರಿಗೆ ವಿಧಿಸಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ನಮ್ಮ ಕೂಗು ಸರ್ಕಾರಕ್ಕೆ ಕೇಳುತ್ತಲೇ ಇಲ್ಲ.

ಇದರ ಜೊತೆಗೆ ದ್ವಿದಳ ದಾನ್ಯಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶಕ್ಕೆ ಅಗತ್ಯವಿರೋದು ಸುಮಾರು 200 ಲಕ್ಷ ಟನ್. ದೇಶದಲ್ಲಿ ಬೆಳೆಯೋದು 180 ಲಕ್ಷ ಟನ್. ರೈತರಿಗೆ ವಿಶೇಷ ಪ್ರೋತ್ಸಾಹ ನೀಡಿದರೆ ಉಳಿದ 20 ಲಕ್ಷ ಟನ್ ಅನ್ನೂ ಬೆಳೆದು ಕೊಡ್ತಾರೆ. ಬೇಡ ಅಂದರೆ ಅದಿಷ್ಟನ್ನು ಹೊರಗಿನಿಂದ ಆಮದು ಮಾಡಿಕೊಳ್ಳಬಹುದು. ಅದನ್ನು ಬಿಟ್ಟು ಪ್ರತೀ ವರ್ಷ 70-80 ಟನ್ ಆಮದು ಮಾಡಿಕೊಂಡರೆ ಇಲ್ಲಿ ಬೆಳೆದ ರೈತರ ಗತಿ ಏನು? ಹಾಗಾಗಿ ಅಮದು ನೀತಿಯನ್ನು ಬದಲಿಸಿಕೊಳ್ಳಬೇಕು.

3) ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯ ರೈತರ ಸಾಲ ಮನ್ನಾ ಮಾಡಬೇಕು.

ಅಮಿತ್ ಷಾ ಅವರು ಎರಡು ಮತ್ತು ಮೂರನೇ ಬೇಡಿಕೆಗಳಿಗೆ ಸಂಬಂಧಿಸಿದಂತೆ ಏನನ್ನೂ ಸ್ಪಷ್ಟವಾಗಿ ಮಾತಾಡಲಿಲ್ಲ. ಮೊದಲ ಬೇಡಿಕೆಗೆ ಸಂಬಂಧಿಸಿದಂತೆ ಅಸಂಬದ್ಧವಾಗಿ ಹುಡುಗಾಟಿಕೆಯ ರೀತಿಯಲ್ಲಿ ಉತ್ತರ ಕೊಟ್ಟರು. ಅದೇನೆಂದರೆ:

“ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹೆಚ್ಚುವರಿ ತೊಗರಿ ಖರೀದಿಸುವುದಕ್ಕೆ ಹೇಳುತ್ತೇನೆ”

ಮಾನ್ಪಡೆಯವರಿಗೆ ತಡೆಯಲಾರದ ಕೋಪ ಬಂದು ಮದ್ಯಾಹ್ನ ರೈತರೊಡಗೂಡಿ ಅಮಿತ್ ಷಾ ಅವರ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ಹೊರಹಾಕಿದರು.

ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷನಿಗೆ ಕೇಂದ್ರ ಜವಾಬ್ದಾರಿಗಳೇನು, ರಾಜ್ಯ ಸರ್ಕಾರದ ಜವಾಬ್ದಾರಿಗಳೇನು ಎಂಬುದೇ ಗೊತ್ತಿಲ್ಲ ಎಂದರೆ ಏನೆನ್ನಬೇಕು? ತನ್ನದೇ ಪಕ್ಷದ ನೇತೃತ್ವದಲ್ಲಿರುವ ಕೇಂದ್ರ ಮಾಡಬೇಕಾದ ಕೆಲಸಗಳನ್ನು, ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಇನ್ನೊಂದು ಪಕ್ಷದ ನೇತೃತ್ವದಲ್ಲಿರುವ ರಾಜ್ಯ ಸರ್ಕಾರದ ಹೆಗಲಿಗೆ ಹಾಕುವುದಕ್ಕೆ ಪ್ರಯತ್ನಿಸುತ್ತಾರೆ ಎಂದರೆ ಏನರ್ಥ? ವಾಸ್ತವದಲ್ಲಿ ಇದು ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರ; ಸಂವಿಧಾನಕ್ಕೆ ಮಾಡುವ ಅಪಮಾನ.

ಅಸಲಿಗೆ ತೊಗರಿ ಖರೀದಿ ಮಾಡುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದಕ್ಕೆ ಬಿಜೆಪಿಗೆ ಇಷ್ಟವಿಲ್ಲ. ದ್ವಿದಳ ಧಾನ್ಯಗಳ ಆಮದಿನ ಮೇಲೆ ಸುಂಕ ವಿಧಿಸುವುದಕ್ಕಂತೂ ಬಿಜೆಪಿಯವರಿಗೆ ಬಿಲ್ ಕುಲ್ ಇಷ್ಟ ಇಲ್ಲ. ಏಕೆಂದರೆ ವಿದೇಶಗಳಿಂದ ಅದರಲ್ಲೂ ಆಫ್ರಿಕಾದಿಂದ ದ್ವಿದಳ ಧಾನ್ಯ ಆಮದು ಮಾಡಿಕೊಳ್ಳುತ್ತಿರುವ ಬೃಹತ್ ಕಾರ್ಪೊರೇಟ್ ಕಂಪನಿಗಳಲ್ಲಿ ಆದಾನಿ ಗ್ರೂಪ್ ಪ್ರಮುಖವಾದದ್ದು. ಆದಾನಿಯುವರು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಖಾಸಾ ದೋಸ್ತು ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿರುವ ಸತ್ಯ. ಈ ದೇಶದ ರೈತರು ಆದಾನಿ ಮೇಲೆ ಆಮದು ಸುಂಕ ಹಾಕ್ರಿ ಅಂತ ಕೇಳೋದು ಎಷ್ಟು ಸರಿ? ಮೋದಿ-ಷಾ ಜೋಡಿ ಬೇಕಾದರೆ ರೈತರ ಹಿತಾಸಕ್ತಿಗಳನ್ನು ಬಲಿಕೊಡಲು ಸಿದ್ಧವಾಗಿರುತ್ತದೆಯೋ ಹೊರತು ಸ್ನೇಹಿತ ಆದಾನಿಯ ಬ್ಯುಸಿನೆಸ್ ಹಿತಾಸಕ್ತಿಗಳನ್ನು ಬಲಿಕೊಡಲು ಎಂದೂ ಸಿದ್ಧವಾಗುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ನಮ್ಮ ರೈತರಿಗೆ ಬೇಡವೆ?

– ಕುಮಾರ್ ಬುರಡಿಕಟ್ಟಿ ಅವರ ಫೇಸ್‌ಬುಕ್‌ ವಾಲ್‌ನಿಂದ

Leave a Reply

Your email address will not be published.

Social Media Auto Publish Powered By : XYZScripts.com