ಚಿರ ನಿದ್ರೆಯಲ್ಲಿರುವ ಶ್ರೀದೇವಿ ಹೇಗಿದ್ದರೂ ದಂತಕಥೆ : ಬದುಕಲು ಬಿಡಿ

ಚಿರನಿದ್ರೆಯಲ್ಲಿರುವ ತ್ರಿಲೋಕಸುಂದರಿ ಈಗ ಇತಿಹಾಸ. ಆದರೆ ಮಾಧ್ಯಮಗಳಿಗೆ ತೀರದ ದಾಹ. ಪ್ರತಿಯೊಬ್ಬ ಸೆಲಿಬ್ರಿಟಿಗಳ ಖಾಸಗಿ ಬದುಕು ನಿಗೂಢ. ಊಹಾತೀತ.

ವಿಶೇಷವಾಗಿ ಕನಸುಗಳನ್ನು ಮಾರುವ ನಟರೂ ನಮ್ಮ ಹಾಗೆ ಮನುಷ್ಯರೇ. ಆದರೆ ಸಾಧನೆಯಿಂದ ಅವರು ದೊಡ್ಡವರಾಗಿರುತ್ತಾರೆ. ಹಾಗಂದ ಮಾತ್ರಕ್ಕೆ ಅವರಿಗೆ ಸುಖ-ದುಃಖಗಳನ್ನು ಮೀರಲಾಗುವುದಿಲ್ಲ.

ನಟಿಯರ ಬದುಕು ಇನ್ನೂ ದುರಂತ. ಕೋಟ್ಯಂತರ ಅಭಿಮಾನಿಗಳು ಆರಾಧಿಸಿ ಕನಸು ಕಂಡಿರುತ್ತಾರೆ. ಆ ಕನಸು ಒಮ್ಮೊಮ್ಮೆ ವಿಕಾರವಾಗಿಯೂ ಇರಬಹುದು. ಅವಳು ಸಿಕ್ಕರೆ ನನಗೇ ಸಿಗಲಿ ಎಂಬ ಭ್ರಾಂತು ಬೇರೆ.

ಆದರೆ ಪಾಪ! ಅವರಿಗೆ ಅವರದೇ ಆದ ಆಸೆ ಆಮಿಷಗಳಿರುತ್ತವೆ. ಕನಸುಗಳಿರುತ್ತವೆ. ಅನಿವಾರ್ಯವಾಗಿ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಮನಸಿರದವರ ಜೊತೆಗೆ ಮೈಮನ ಹಂಚಿಕೊಂಡು ಒದ್ದಾಡಿರುತ್ತಾರೆ. ಇದಕ್ಕೆ ಶ್ರೀದೇವಿ ಹೊರತಾಗಲಿಲ್ಲ. ಎಲ್ಲರ ಕಚಗುಳಿ ಕನಸುಗಳಿಗೆ ತೆರೆ ಎಳೆದು ಪರಸ್ಥಿತಿಗೆ ಅನುಗುಣವಾಗಿ ಮದುವೆಯಾಗಿ ಪಡ್ಡೆ ಮನಸುಗಳ ಕನಸುಗಳಿಂದ ಕೊಂಚ ದೂರ ಸರಿದರು.

ಅವರ ಖಾಸಗಿ ತಲ್ಲಣ, ನೋವುಗಳ ವಿಶ್ಲೇಷಣೆಯನ್ನು ನಿರ್ದೇಶಕ ರಾಮಗೋಪಾಲ ವರ್ಮ ತಮ್ಮ ಮುಖಪುಸ್ತಕದಲ್ಲಿ ಮಾಡಿದ್ದಾರೆ.

ಎಲ್ಲರಿಗೂ ಇರಬಹುದಾದ ಸಮಸ್ಯೆಗಳು ಇವರಿಗೂ ಇದ್ದಿರಬಹುದು. ಆದರೆ ಸಾವು ಅಸಹಜವಾಗಿರಬಾರದಿತ್ತು ಅನಿಸುವುದು ಸಹಜ. ಅದನ್ನು ಈಗ ವಿಕೃತವಾಗಿ ಅವರ ಸಾವಿನ ಕಾರಣಗಳನ್ನು ಪೋಸ್ಟ್ ಮಾರ್ಟಮ್ ಮಾಡಬಾರದು.‌ ಅಂತಹ ಖಾಸಗಿ ಹಿಂಸೆಯನ್ನು ಅನೇಕ ನಟರು ಎದುರಿಸಿ ಬದುಕಿ ಮತ್ತೆ ಬದುಕನ್ನು ಸರಿದಾರಿಗೆ ತಂದುಕೊಂಡಿದ್ದಾರೆ. ಈಗ ಆ ಹೆಸರುಗಳ ಪ್ರಸ್ತಾಪ ಇಲ್ಲಿ ಬೇಡ.

ಹಣ-ಅಂತಸ್ತು-ಕೀರ್ತಿ ಯಾವುದೂ ಯಾರನ್ನೂ ಕಾಪಾಡುವುದಿಲ್ಲ ಎಂಬುದು ಬದುಕಿನ ಬೆರಗು. ಹುಟ್ಟು-ಸಾವುಗಳ ಶಕ್ತಿಯೇ ಹಾಗೆ. ಸತ್ತಾಗ ಎಲ್ಲವೂ ಮಹತ್ವ ಪಡೆದುಕೊಳ್ಳುತ್ತೆ ಅಷ್ಟೇ. TRP ಕಾರಣಕ್ಕೆ, ಬರಹದ ತೆವಲಿಗೆ, ಹೋದವರ ಬದುಕನ್ನು ಹಿಗ್ಗಾ ಮುಗ್ಗ ಮಾಡಬಾರದು.

ನಮ್ಮ ಕನಸುಗಳನ್ನು ಆಳಿ, ಕಾಮನೆಗಳನ್ನು ಕೆರಳಿಸಿದ ಶ್ರೀದೇವಿಯ ಕ್ಷಮೆ ಕೇಳುವ ಪ್ರಸಂಗ ಬರಬಾರದು. ನಮ್ಮ ತಪ್ಪುಗಳಿಗೆ ನಾವೇ ಪಶ್ಚಾತ್ತಾಪ ಪಡೋಣ. ವಿಕೃತ ಮನಸಿಗೆ ನಾವು ಹೊಣೆಗಾರರಲ್ಲ. ಆದರೆ ತಿಳುವಳಿಕೆ ಸಿದ್ಧಿಸಿದ ಮೇಲಾದರೂ ಅಸಹಜವಾಗಿ ಆಲೋಚಿಸುವುದು ಬೇಡವೇ ಬೇಡ, ಸತ್ತಾಗಲಾದರೂ ಬದುಕಲು ಬಿಡಿ ಎಂದು ಮಾಧ್ಯಮದ ಮಿತ್ರರಲ್ಲಿ ನಿವೇದಿಸುವೆ.

—–ಸಿದ್ದು ಯಾಪಲಪರವಿ.

Leave a Reply

Your email address will not be published.

Social Media Auto Publish Powered By : XYZScripts.com