ನಾವು BJPಯವರ ರೀತಿ ರೈತರು ರಸಗೊಬ್ಬರ ಕೇಳಿದ್ರೆ ಗೋಲಿಬಾರ್ ಮಾಡಲ್ಲ : ಗೃಹ ಸಚಿವ

ಬೆಂಗಳೂರು : ದಾವಣಗೆರೆಯ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ‘ಸೀದಾ ರುಪಾಯಿ’ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸುಳ್ಳು ಟೀಕೆ ಮಾಡುವ ಬದಲು ಕರ್ನಾಟಕದ ಈ ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತ ನೆನಪಿಸಿಕೊಳ್ಳಲಿ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

3 ಮಂದಿ ಸಿಎಂಗಳು, ಡಜನ್‌ಗಟ್ಟಲೆ ಸಚಿವರ ಮೇಲೆ ಲೋಕಾಯುಕ್ತ ಕೋರ್ಟ್ ನಲ್ಲಿ ಕೇಸ್ ಗಳು, ಭ್ರಷ್ಟಾಚಾರದ ಆರೋಪ ಹೊತ್ತು  ಜೈಲಿಗೆ ಹೋದ ಸಿಎಂ, ರಾಜ್ಯದ ಗಣಿ ಸಂಪತ್ತಿನ ಲೂಟಿ ಹಿನ್ನೆಲೆಯಲ್ಲಿ ಬಿಜೆಪಿ ಸಚಿವರು, ಶಾಸಕರು ಜೈಲಿಗೆ ಹೋಗಿ ಬಂದಿದ್ದಾರೆ. ಚೆಕ್ ಮೂಲಕ ನಿಮ್ಮ ಸಿಎಂ, ಫ್ಯಾಮಿಲಿ ಟ್ರಸ್ಟ್ ಗಳಿಗೆ ಪೇಮೆಂಟ್ ನೀಡಿದ್ದಾರೆ. ಬಿಜೆಪಿ ದುರಾಡಳಿತದ ಪಾಪ ತೊಳೆಯಲು ಕಾಂಗ್ರೆಸ್ ಗೆ 5 ವರ್ಷ ಬೇಕಾಗಿದೆ. ದುರಾಡಳಿತದ ಮೂಲಕ ರಾಜ್ಯದ ಮಾನ ಹರಾಜು ಹಾಕಿದ ಬಿಜೆಪಿಯನ್ನು ರಾಜ್ಯದ ಜನ ಮನೆಗೆ ಕಳುಹಿಸಿದ್ದು, ಮುಂದೆಯೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸ್ವಚ್ಛ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿ ಬಿಜೆಪಿ ದುರಾಡಳಿತದಿಂದ ಮಣ್ಣು ಪಾಲಾಗಿದ್ದ ರಾಜ್ಯದ ಘನತೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಮರುಸ್ಥಾಪಿಸಿದೆ. ಹಲವು ವಿಭಾಗಗಳಲ್ಲಿ ನಂ 1 ಸ್ಥಾನದ ಪ್ರಶಸ್ತಿಯನ್ನು ನಿಮ್ಮ ನೇತೃತ್ವದ ಕೇಂದ್ರ ಸರ್ಕಾರವೇ ನಮಗೆ ನೀಡಿದೆ. ಇದೀಗ ತಾವು ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂರಿಸುವ ನಿಮ್ಮ ಪ್ರಯತ್ನ ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ರೈತರಿಗೆ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಮೋದಿಯವರು ಕೇಳಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ನಿಮ್ಮ ಬಿಜೆಪಿ ನಾಯಕರಂತೆ ಹಸಿರು ಶಾಲು ಹಾಕಿ ನಾಟಕವಾಡೋದಿಲ್ಲ. ರೈತರು ಪ್ರಶ್ನೆ ಕೇಳಿದರೆ ಮೈಕ್ ಕಸಿದು ಹಲ್ಲೆಗೆ ಮುಂದಾಗೋದಿಲ್ಲ. ರೈತರು ರಸಗೊಬ್ಬರ ಕೇಳಿದ್ರೆ ಅವರ ಮೇಲೆ ನಾವು ಗೋಲಿಬಾರ್ ಮಾಡಿಲ್ಲ. ಸಹಕಾರಿ ಸಂಘಗಳಲ್ಲಿನ ರೈತರ ಸಾಲವನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರಾಜ್ಯರ ರೈತರ ಸಾಲವನ್ನು ನೀವು ಯಾವಾಗ ಮನ್ನಾ ಮಾಡುತ್ತೀರಿ ಎಂದು ರಾಜ್ಯದ ರೈತರಿಗೆ ತಿಳಿಸಿ ಎಂದಿದ್ದಾರೆ.

ಉತ್ತರ ಭಾರತದಲ್ಲಿ ಸುಳ್ಳು ಭಾಷಣ ಮಾಡಿದಂತೆ ಕರ್ನಾಟಕದಲ್ಲಿ ನಿಮ್ಮ ಸುಳ್ಳು ಭಾಷಣವನ್ನು ಇಲ್ಲಿನ ಪ್ರಜ್ಞಾವಂತ ಮತದಾರರು ನಂಬಲ್ಲ. ಪ್ರಧಾನಿ ಮೋದಿಯವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com