ಪ್ರತಾಪ್‌ ಸಿಂಹ ವಿರುದ್ಧ 1 ರೂ ಮಾನನಷ್ಟ ಮೊಕದ್ದಮೆ ಹೂಡಲು ಪ್ರಕಾಶ್‌ ರೈ ನಿರ್ಧಾರ !

ಮೈಸೂರು : ಸಂಸದ ಪ್ರತಾಪ್‌ ಸಿಂಹ ವಿರುದ್ದ ನಟ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಪ್ರಕಾಶ್‌ ರೈ ಯಾವುದೇ ಹೇಳಿಕೆ ನೀಡಿದರೂ ಅದನ್ನು ಪ್ರತಾಪ್‌ ಸಿಂಹ ಟ್ರೋಲ್‌ ಮಾಡುತ್ತಿದ್ದರು ಎಂಬ ಹಿನ್ನೆಲೆಯಲ್ಲಿ ಪ್ರತಾಪ್‌ ಸಿಂಹ ಅವರಿಗೆ ಪ್ರಕಾಶ್ ರೈ ಲೀಗಲ್‌ ನೋಟಿಸ್‌ ನೀಡಿದ್ದರು. ಆದರೆ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಪ್ರಕಾಶ್ ರೈ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಯಾವುದೇ ಹೇಳಿಕೆಗಳನ್ನು ಕೊಟ್ಟರೂ, ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದ್ದು ಇದು ಒಂದು ರೀತಿಯ ಗೂಂಡಾ ಪ್ರವೃತ್ತಿಯಾಗಿದೆ. ನನ್ನನ್ನು ನಿಜ ಜೀವನದಲ್ಲೂ ಖಳನಾಯಕ ಎಂದು ಕರೆಯಲು ಆರಂಭಿಸಿದ್ದಾರೆ. ನೀನು ನಟನೇ ಅಲ್ಲ ತಮಿಳುನಾಡಿಗೆ ಹೋಗು ಎನ್ನುತ್ತಾರೆ. ಅದಕ್ಕಾಗಿ ಜಸ್ಟ್ ಆಸ್ಕಿಂಗ್ ಹೆಸರಿನಲ್ಲಿ ನನ್ನ ಪ್ರತಿಭಟನೆ ಆರಂಭ ಮಾಡುತ್ತಿದ್ದೇನೆ. ಮೊದಲು ಮೈಸೂರಿನ ಶಾಸಕ ಪ್ರತಾಪ್ ಸಿಂಹ ವಿರುದ್ಧ ಲೀಗಲ್ ನೋಟೀಸ್ ಕಳಿಸುತ್ತಿದ್ದೇನೆ. ನನ್ನ ಮಗನ ಸಾವನ್ನು ಅಣಕ ಮಾಡಿ ಟ್ರೋಲ್ ಮಾಡಿದರೆ, ನಾನು ಹೇಗೆ ಸಹಿಸಿಕೊಳ್ಳೋದು ಎಂದು ನೋಟಿಸ್ ನಲ್ಲಿ ಪ್ರಕಾಶ್ ರೈ ಉಲ್ಲೇಖಿಸಿದ್ದರು.

ಈ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ವಹಿಸಿದ ಪ್ರಧಾನಿ ಮೋದಿ ಓರ್ವ ನಟ ಎಂದು ಪ್ರಕಾಶ್ ರೈ ಹೇಳಿಕೆ ನೀಡಿದ್ದರು. ಇದನ್ನ ಖಂಡಿಸಿದ್ದ ಸಂಸದ ಪ್ರತಾಪ್ ಸಿಂಹ, ‘’ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವರು ಮೋದಿ-ಯೋಗಿಗೆ ಹೇಳುವಷ್ಟು ಯೋಗ್ಯತೆ ಇರುವವರಾ? ಎಂದು ಫೇಸ್ ಬುಕ್ ನಲ್ಲಿ ಟೀಕಿಸಿ ಕಾಮೆಂಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಮಂಗಳವಾರ ಕೇವಲ ಒಂದು ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಾರೆ. ವೈಯುಕ್ತಿಕ ಕಾರಣಗಳಿಗಾಗಿ ಮಾನನಷ್ಟ ಮೊಕದ್ದಮೆ ಹಾಕುತ್ತಿಲ್ಲ. ಸಾಮಾಜಿಕ ಜಾಲತಾಣಗಳನ್ನು ಸ್ವಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ, ಜನಪ್ರತಿನಿಧಿಯಾದವರು ಈ ರೀತಿ ವರ್ತಿಸುವುದು ಎಷ್ಟು ಸರಿ, ಅದಕ್ಕಾಗಿ ಒಂದು ರೂ.ಮಾನನಷ್ಟ ಮೊಕದ್ದಮೆ ಹೂಡುತ್ತಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.