ಸ್ವಗ್ರಾಮಕ್ಕೆ ಬಂದು ತಲುಪಿದ ಪುಟ್ಟಣ್ಣಯ್ಯ ಪಾರ್ಥಿವ ಶರೀರ : ಗಣ್ಯರ ಕಂಬನಿ

ಮಂಡ್ಯ : ರೈತರ ಬಂಧು ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬಂದು ತಲುಪಿದೆ. ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಡೀ ಕ್ಯಾತನಹಳ್ಳಿಯಲ್ಲಿ ನೀರವ ಮೌನ ಮನೆ ಮಾಡಿದೆ. ನೆಚ್ಚಿನ ನಾಯಕನ ಅಗಲಿಕೆಯಿಂದಾಗಿ ಕ್ಯಾತನಹಳ್ಳಿ ಸೇರಿದಂತೆ ಮಂಡ್ಯದ ಅನೇಕ ಕಡೆ ಸ್ವಘೋಷಿತ ಬಂದ್‌ ಮಾಡಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಪುಟ್ಟಣ್ಣಯ್ಯ ಅವರ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಜನ ಆಗಮಿಸಿದ್ದು, ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌, ಸಾಹಿತಿ ದೇವನೂರ ಮಹಾದೇವ, ನಾಗತಿಹಳ್ಳಿ ಚಂದ್ರಶೇಖರ್‌, ಎಸ್‌.ಆರ್‌ ಹಿರೇಮಠ್‌, ಪ್ರೊ. ಎಂ ಕೃಷ್ಣೇಗೌಡ, ನಿರ್ದೇಶಕ ಟಿ.ಎನ್‌ ಸೀತಾರಾಮ್, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ, ಸಚಿವ ಯು.ಟ‘ ಖಾದರ್‌ ಸೇರಿದಂತೆ ಸಾವಿರಾರು ಮಂದಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದಾರೆ.

ಅಂತಿಮ ದರ್ಶನ ಪಡೆದ ದೇವೇಗೌಡರು ಮೃತದೇಹಕ್ಕೆ ಪುಷ್ಪ ನಮನ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಮಾತನಾಡಿದ ದೇವೇಗೌಡರು, ಪುಟ್ಟಣ್ಣಯ್ಯ ರೈತ ಪರ ಹೋರಾಟ, ಜೀವನ ಸ್ಪೂರ್ತಿ ನಿಜಕ್ಕೂ ಮೆಚ್ಚುವಂತದ್ದು. ಜೀವನ ಪೂರ್ತಿ ರೈತರಿಗಾಗಿಯೇ ಹೋರಾಡುತ್ತಾ ಬಂದವರು. ಶಾಸಕರಾಗಿ ಅವರ ಸೇವೆ ಶ್ಲಾಘನೀಯ. ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.

ಅಂತಿಮ ಯಾತ್ರೆಯಲ್ಲಿ ಮುಂಬೈ ಕರ್ನಾಟಕ,  ಹೈದರಾಬಾದ್‌ ಕರ್ನಾಟಕ ಸೇರಿದಂತೆ ರಾಜ್ಯದ ಅನೇರ ಭಾಗಗಳಿಂದ ಜನರು ಆಗಮಿಸಿದ್ದು, 50 ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com