ಮೈಸೂರು : ಬಿಜೆಪಿ ಸಮಾವೇಶದಲ್ಲಿ ರಾಶಿಬಿದ್ದ ನೀರಿನ ಪ್ಯಾಕೇಟ್ ಗಳು..!

ಮೂರನೇ ಮಹಾಯುದ್ಧ ನಡೆಯುವುದಾದರೆ ಅದು ನೀರಿಗಾಗಿ ಮಾತ್ರ ಎಂಬ ಮಾತು ಕೇಳಿ ಬರುತ್ತಿದೆ. ಎಲ್ಲೆಡೆ ಈಗಲೇ ನೀರಿಗಾಗಿ ಹಾಹಾಕಾರ ನಡೆದಿದೆ. ಆದರೆ ಮಹಾರಾಜ ಕಾಲೇಜು ಮೈದಾನದಲ್ಲಿ ಮಾತ್ರ ನೀರಿನ ಪ್ಯಾಕೇಟ್ ಗಳು ಯಥೇಚ್ಛವಾಗಿ ಬಿದ್ದಿದೆ.

ಸೋಮವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಡ್ಯ, ಹಾಸನ, ಚಾಮರಾಜನಗರ,ಮೈಸೂರು,ಜಿಲ್ಲೆಗಳ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದಲ್ಲಿ ಭಾಗವಹಿಸಿದ್ದರು. ಪ್ರಧಾನಿಯನ್ನು ನೋಡಲು, ಅವರ ಭಾಷಣವನ್ನು ಕೇಳಲು ಜಮಾಯಿಸಿದ ಜನರಿಗೆ ಪ್ಯಾಕೇಟ್ ಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದನ್ನು ಸಮರ್ಪಕವಾಗಿ ನೀಡುವವರಿಲ್ಲದೇ, ಚೀಲಗಟ್ಟಲೇ ನೀರಿನ ಪ್ಯಾಕೇಟ್ ಗಳು ಅನಾಥವಾಗಿ ಬಿದ್ದು ಉರುಳಾಡುತ್ತಿವೆ.

ನೀರಿನ ಸರಬರಾಜು ವ್ಯವಸ್ಥೆಯನ್ನು ಪೂರೈಸಿ ಎಂದು ಜವಾಬ್ದಾರಿ ವಹಿಸಿದವರು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿದಂತೆ ಕಾಣಿಸುತ್ತಿಲ್ಲ. ಬಿರುಬಿಸಿಲಿನಲ್ಲಿ ಬಾಯಾರಿ ಕುಳಿತವರೆಷ್ಟೋ ಮಂದಿ ಇದ್ದರು. ಸರಿಯಾಗಿ ನೀಡಿದ್ದರೆ ಅವುಗಳು ಖರ್ಚಾಗುತ್ತಿದ್ದವೇನೋ ಆದರೆ, ಸಮರ್ಪಕ ನಿರ್ವಹಣೆಯಾಗದೇ ಮೂಟೆಗಟ್ಟಲೆ ಹಾಗೆಯೇ ಬಿದ್ದುಕೊಂಡಿದೆ.

ಮಂಗಳವಾರ ಮುಂಜಾನೆ ನೋಡಿದ ಕೆಲವರು ಪ್ಯಾಕೇಟ್ ಗಳನ್ನು ಎತ್ತಿಕೊಂಡೊಯ್ದರು. ಸ್ವಚ್ಛ ಭಾರತ ಅಭಿಯಾನ ಎನ್ನುವವರು ಹಾಗೆಯೇ ಪ್ಯಾಕೆಟ್ ಗಳನ್ನು ಬಿಟ್ಟು ಹೋಗಿರುವುದು ಎಷ್ಟು ಸರಿ, ಹನಿ ನೀರಿಗೂ ಪರಿತಪಿಸುವ ಇಂದಿನ ದಿನಗಳಲ್ಲಿ ಅಮೂಲ್ಯವಾದ ನೀರಿನ ಪ್ಯಾಕೇಟ್ ಗಳನ್ನು ರಾಶಿ ರಾಶಿ ಬಿಟ್ಟು ಹೋಗಿರುವುದು ಸರಿಯೇ, ಮಹದಾಯಿ ಕಾವೇರಿ ವಿವಾದಗಳು ಕಣ್ಣ ಮುಂದಿರುವಾಗಲೇ ಈ ರೀತಿ ನೀರನ್ನು ಹಾಳು ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೀಗ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.

Leave a Reply

Your email address will not be published.