ಬದ್ಕಿರೋಗಂಟ ಏನಾರ ಮಾಡಿ ಸಾಯಣ ಅಂತಿದ್ದ ಪುಟ್ಟಣ್ಣಯ್ಯ ಬಗ್ಗೆ ಇವರೆಲ್ಲ ಹೇಳಿದ್ದು ಹೀಗೆ….

ಪುಟ್ಟಣ್ಣಯ್ಯನವರು ಮುಖ್ಯಮಂತ್ರಿಯವರನ್ನು ಕಾಣಲು ಬಂದಾಗೆಲ್ಲ ಅವರ ಸಹಾಯಕನ ಕೈಯಲ್ಲಿ ಫೈಲುಗಳ ದೊಡ್ಡ ಕಂತೆ ಇರುತ್ತಿತ್ತು. ಅವು ಯಾವುದೂ ಸ್ವಂತ ಲಾಭದ್ದಾಗಿರಲಿಲ್ಲ. ಅವುಗಳು‌ ತಮ್ಮ ಕ್ಷೇತ್ರದ ಜನ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವು ಕೋರಿದ್ದ ಅರ್ಜಿಗಳು. ಸಹಾಯಕನ ಹೆಗಲ ಮೇಲೆ ಒಂದು ಕೈಯಿಟ್ಟು ಕುಂಟುತ್ತಾ ಬರುತ್ತಿದ್ದ ಪುಟ್ಟಣ್ಣಯ್ಯನವರನ್ನು‌ ಕಂಡಾಗೆಲ್ಲ ತನ್ನ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರು ತನ್ನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆಯೇ ಎಂದು ಕೇಳಬೇಕೆಂದು ಅನಿಸುತ್ತಿತ್ತು. ಈಗೆಲ್ಲಿ?
ವಿಧಾನಸಭೆಯಲ್ಲಿ ಪುಟ್ಟಣ್ಣಯ್ಯನವರು ದೀರ್ಘವಾಗಿ ಮಾತನಾಡುತ್ತಿರಲಿಲ್ಲ, ಚರ್ಚೆಯ‌ ಮಧ್ಯೆಪ್ರವೇಶಿಸಿ ಒಂದು ಪಂಚ್ ನೀಡಿ‌ ಕೂತು ಬಿಡುತ್ತಿದ್ದರು. ಗಂಭೀರ ವಿಷಯಕ್ಕೆ ತೆಳುಹಾಸ್ಯ ಮತ್ತು ತನ್ನ ಹಳ್ಳಿ ಅನುಭವ ಸೇರಿಸಿ ಮಾತನಾಡುವ ಕಲೆ ಅವರಿಗೆ ಸಿದ್ದಿಸಿತ್ತು. ಮೂಢನಂಬಿಕೆ ನಿಷೇಧ ಕಾಯಿದೆ ಪರವಾಗಿ ಸದನದಲ್ಲಿ ಗಟ್ಟಿದನಿಯಲ್ಲಿ ಮಾತನಾಡಿದ್ದು ಪುಟ್ಟಣ್ಣಯ್ಯನವರು. ಸದನದಲ್ಲಿ ಅವರು ಮಾಡಿದ ಭಾಷಣಗಳನ್ನು ಶೀಘ್ರವಾಗಿ ಪ್ರಕಟಿಸುವ ಅಗತ್ಯ ಇದೆ.
‎ಎಂ.ಡಿ. ನಂಜುಂಡಸ್ವಾಮಿ ಬ್ರಾಂಡ್ ನ ರೈತ ಚಳುವಳಿಯ ಕೊನೆಯ‌ಕೊಂಡಿ ಕಳಚಿ ಬಿದ್ದಿದೆ. ವಿಧಾನಸಭೆಯಲ್ಲಿ ಕಾಣುತ್ತಿದ್ದ ಏಕೈಕ ಹಸಿರು ಶಾಲು ಕಣ್ಮರೆಯಾಗಿದೆ. ರೈತ ಸಮುದಾಯ ಅನಾಥವಾಗಿದೆ.

ದಿನೇಶ್‌ ಅಮೀನ್‌ ಮಟ್ಟು

ಬದ್ಕಿರೋಗಂಟ ಏನಾರ ಮಾಡಿ ಸಾಯಾಣ. ಯಲ್ರೂ ಒಂದಲ್ಲಾ ಒಂದ್ ದಿನಾ ಸತ್ತೋಗ್ತೀವಿ. ಈ ಸಮಾಜಾನ ಹಿಂಗೇ ಬಿಡಕ್ಕಾಗಲ್ಲ. ಒಂದ್ ಪರ್ಯಾಯಾ ಕಟ್ಟಲೇಬೇಕು. ಎಲ್ರೂ ಸೇರಿ ಕಟ್ಟೋಣ. ಒಂದ್ ವೇಳೆ ನೀವ್ಯಾರೂ ಬರಲ್ಲ ಅಂದ್ರೆ ನಾನೊಬ್ನೇ ಆದ್ರೂ ಮಾಡ್ತೀನಿ.
ಒಂದಲ್ಲಾ ಮೂರು ಸಾರಿ ಜನಾಂದೋಲನಗಳ ಮಹಾಮೈತ್ರಿಯ ಸಮಾವೇಶಗಳಲ್ಲಿ ಪುಟ್ಟಣ್ಣಯ್ಯನವರು ಆಡಿದ ಮಾತಿದು. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಹೋರಾಟದ ಚಟುವಟಿಕೆಗಳಿಗೆ ಯಾವ ರೀತಿಯ ನೆರವು ಕೇಳಿದಾಗಲೂ ಅದನ್ನು ಮಾಡಿಕೊಡದ ಒಂದೇ ಒಂದು ಘಟನೆಯೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಅವರೊಬ್ಬ ಅತ್ಯಂತ ಆಳವಾದ ಮಾನವೀಯ ಅಂತಃಕರಣದ, ಅನುಭವದ ವಿವೇಕವುಳ್ಳ ನಿಜವಾದ ಮನುಷ್ಯರಾಬಗಿದ್ದರು. ಚುನಾವಣಾ ರಾಜಕಾರಣ ಮಾಡುತ್ತಾ ಒಬ್ಬ ವ್ಯಕ್ತಿ ಏನೇನೋ ಆಗಿಬಿಡುತ್ತಾರೆ. ಆದರೆ ಪುಟ್ಟಣ್ಣಯ್ಯನವರಲ್ಲಿ ಈ ಅಪ್ಪಟ ಮನುಷ್ಯ ಮಾತ್ರ ಕಳೆದುಹೋಗಿರಲಿಲ್ಲ.
ಈ ಸದ್ಯ ಇಂತಹ ಘನ ವ್ಯಕ್ತಿಯನ್ನು ಈ ನಾಡಿನ ಚಳವಳಿಗಳು ಸೃಷ್ಟಿಸಲಾರವು.

-ವಾಸು ಎಚ್. ವಿ.

ನಾವೆಲ್ಲರೂ ಪುಟ್ಟಣ್ಣಯ್ಯನವರಿಂದ ಕಲಿಯಬೇಕಾದ ಪಾಠವೊಂದಿದೆ.
ಅದು ವೈಚಾರಿಕತೆಯನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಹೇಳುವುದು. ಅಯೋಧ್ಯೆಯಲ್ಲಿ ರಾಮ ಮಂದಿರವೋ, ಮಸೀದಿಯೋ ಎಂದು ಇಡೀ ದೇಶ ಕೊನೆಯಿಲ್ಲದ ಚರ್ಚೆ ದ್ವೇಷಾವೇಶದಲ್ಲಿ ಮುಳುಗಿದ್ದಾಗ, ” ಯಾವ ಮಂದಿರವೂ ಬೇಡ ಅಲ್ಲಿ ಒಂದು ಪಬ್ಲಿಕ್ ಟಾಯ್ಲೆಟ್ ಕಟ್ಟಿ, ಎಲ್ಲಾ ಜಾತಿ ಧರ್ಮದವರೂ ಹೋಗುತ್ತಾರೆ” ಎಂದು ಹಾಸ್ಯದಲ್ಲೇ ಸೌಹಾರ್ದತೆಯ ವೈಚಾರಿಕತೆಯನ್ನು ಮಂಡಿಸಿದ್ದರು. ನಕಲಿ ಗೋರಕ್ಷರ ಹಾವಳಿ ಮಿತಿ ಮೀರಿದಾಗ, “ದನ ಸಾಕೋ ರೈತರಾದ ನಮಗೆ ದನಗಳನ್ನು ಏನು ಮಾಡಬೇಕು ಎಂಬುದು ಗೊತ್ತು, ಜೀವಮಾನದಲ್ಲಿ ದನಗಳಿಗೆ ಒಂದು ಹೊರೆ ಹುಲ್ಲು ತಂದು ಹಾಕದ, ದನಗಳನ್ನು ಕಾಯದ ಈ ಡೋಂಗಿಗಳು ಯಾರ್ರೀ ಅವುಗಳ ಬಗ್ಗೆ ಮಾತಾಡೋಕೆ? ಈ ವಿಷಯ ತೀರ್ಮಾನ ಮಾಡಬೇಕಾದವರು ನಾವು ರೈತರೇ ಹೊರತು ಧರ್ಮದ ಗುತ್ತಿಗೆದಾರರಲ್ಲ” ಎಂದು ಚಾಟಿ ಬೀಸಿದಂತೆ ಹೇಳಿದ್ದರು ಪುಟ್ಟಣ್ಣಯ್ಯ. ಇಂತಹ ಒಬ್ಬ ಜನರ ನಡುವಿನ ಜನಪರ ರಾಜಕಾರಣಿಯ ಬದುಕು, ವಿಚಾರಗಳ ನೆನಪು ನಮ್ಮೆಲ್ಲರಲ್ಲಿ ಅರಿವಿ‌ನ ಬೆಳಕನ್ನು ಆರಗೊಡದಿರಲಿ

ಹರೀಶ್‌ ಕುಗ್ವೆ

ರೈತ ಇಂಟೆಲೆಕ್ಚುಯಲ್ ಪುಟ್ಟಣ್ಣಯ್ಯನವರ ವ್ಯಕ್ತಿತ್ವ, ರೈತ ಚಳುವಳಿ, ಪ್ರಾಮಾಣಿಕ ಜನಪರ ರಾಜಕಾರಣ, ಚಳುವಳಿ ಮತ್ತು ಚುನಾವಣೆಗಳ ಸಂಬಂಧದ ಬಗ್ಗೆ ನಗೆಚಾಟಿಗಳಿಂದ ತುಂಬಿದ ಮಾತುಗಳು , ರೈತರ,ಕೃಷಿಯ ಸಮಸ್ಯೆಗಳನ್ನು ಬಹು ಸರಳವಾಗಿ ಮತ್ತು ಮನಮುಟ್ಟುವಂತೆ ಜನರಿಗೆ ಮುಟ್ಟಿಸುತ್ತಿದ್ದ ವೈಶಿಷ್ಟ್ಯ ಪುಟ್ಟಣ್ಣಯ್ಯನವರದು.
ನೆಲಮೂಲದ ರೈತನೊಬ್ಬ ತನ್ನ ಬದುಕು,ಅದರ ಬವಣೆಗಳಿಗೆ ನಿಜ ಕಾರಣಗಳ ಅರಿವು ಪಡೆದು ಚಳುವಳಿಕಾರನಾಗಿ, ಜನನಾಯಕನಾಗಿ ರೂಪುಗೊಂಡ ಪರಿಗೆ ಪುಟ್ಟಣ್ಣಯ್ಯನವರೇ ಉದಾಹರಣೆ. ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರೈತಾಪಿ ಜೀವನದಲ್ಲಿ ತೊಡಗಿದ್ದ ಪುಟ್ಟಣ್ಣಯ್ಯನವರಿಗೆ 1980 ರ ದಶಕದ ಆರಂಭದಿಂದ ಫಸಲಿನ ಬೆಲೆ ಕುಗ್ಗುವಿಕೆಯಿಂದ ರೈತರು ಅನುಭವಿಸುತ್ತಿದ್ದ ಸಂಕಟ ಮನಸ್ಸಿಗೆ ತಟ್ಟಿತು.
ಎಸ್ ಎಫ್ ಐ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರಾಗಿದ್ದ ಹಳಕಟ್ಟಿಯವರ ನೇತೃತ್ವದಲ್ಲಿ ನರಗುಂದ- ನವಲಗುಂದ ರೈತ ಹೋರಾಟ ರಾಜ್ಯದ ರೈತರನ್ನು ಬಡಿದೆಬ್ಬಿಸಿದ ಕಾಲ. ಆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳಿಗಾಗಿ ಹೋರಾಟ ನಡೆಸಿದ್ದ ರುದ್ರಪ್ಪನವರ ರೈತ ಸಂಘದೊಡನೆ ಆಗ ವಕೀಲರಾಗಿ, ಸಮಾಜವಾದಿ ಚಳುವಳಿಗಾರರಾಗಿದ್ದ ಪ್ರೊ.ನಂಜುಂಡಸ್ವಾಮಿಯವರು ಸೇರಿದರು. ಆಗ ಹುಟ್ಟಿಕೊಂಡದ್ದೇ ಕರ್ನಾಟಕ ರಾಜ್ಯ ರೈತ ಸಂಘ.ಈ ರೈತ ಸಂಘಟನೆ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾರಂಭಿಸಿತು. ಈ ಸಂಘಟನೆ ಪುಟ್ಟಣ್ಣಯ್ಯನವರನ್ನೂ ಸೆಳೆಯಿತು. ರಾಜ್ಯ ರೈತಸಂಘ ಅಂದು ಹಮ್ಮಿಕೊಂಡಿದ್ದ ಜೈಲು ಭರೊ ಮೊದಲಾದನೇಕ ಹೋರಾಟಗಳಲ್ಲಿ ಪುಟ್ಟಣ್ಣಯ್ಯ ಚಳುವಳಿಗಾರರಾಗಿ ಬೆಳೆದರು. ಹೋರಾಟಗಳ ಪ್ರಾಯೋಗಿಕ ಅನುಭವದ ಜೊತೆಗೆ ರಾಜ್ಯ ರೈತ ಸಂಘದ ಅನೇಕ ಅಧ್ಯಯನ ಶಿಬಿರಗಳು ಪುಟ್ಟಣ್ಣಯ್ಯನವರಿಗೆ ಸಮಸ್ಯೆಗಳ ಮೂಲದ ಬಗ್ಗೆ ಅರಿವು ಮೂಡಿಸಿದವು.
ಹೀಗೆ ಅನುಭವ ಮತ್ತು ಅರಿವು ಮೇಳೈಸಿದ ಅವರ ಮಾತುಗಳಲ್ಲಿ ಹಳ್ಳಿಗಳ ಭಾಷೆ, ಗಾದೆ, ಪಡೆನುಡಿ ಮತ್ತು ಹಾಸ್ಯ ಪ್ರಜ್ಞೆ ಬೆರೆತು ಅವರದೇ ಶೈಲಿ ರೂಪುಗೊಂಡಿತು.
ಈ ಶೈಲಿಯಲ್ಲಿ ಕೃಷಿಗೆ ಸಂಬಂಧಿಸಿದ ಅತ್ಯಂತ ಗಹನವಾದ ವಿಚಾರಗಳನ್ನೂ ಗ್ರಾಮೀಣ ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗುತ್ತಿದ್ದರು.
ಇದು ಯಾವುದೇ ಉತ್ತಮ ಸಾಹಿತಿಗೆ ಹೋಲಿಸಬಹುದಾದ ಶೈಲಿಯಾಗಿತ್ತು. ನನಗೆ ಅಚ್ಚರಿಯನ್ನು ಉಂಟು ಮಾಡುತ್ತಿತ್ತು.

ಜಿ.ಎನ್‌ ನಾಗರಾಜ್‌

ಪುಟ್ಟಣ್ಣಯ್ಯ ರವರು ರಾಜ್ಯ ಕಂಡ ಒಬ್ಬ ರೈತ ನಾಯಕ, ರೈತ ಪ್ರತಿನಿಧಿ, ಮೇದಾವಿ, ಪ್ರಬುದ್ದ ಭಾಷಣ ಕಾರ, ಪ್ರಗತಿಪರ ಚಿಂತಕ ಬಹುಭಾಷೆಯನ್ನು ಬಲ್ಲವರು ಕೂಡ ಹೌದು.

ಡಿಸೆಂಬರ್ 21 ರಂದು ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಎನ್.ಡಿ.ಸುಂದರೇಶ್ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಮಾತುಗಳು “ನಾನೂ ಭಾಷಣ ಮಾಡಿ ಮಾಡಿ ಮುದುಕನಾದೆ ನೀವು ಭಾಷಣ ಕೇಳಿ ಕೇಳಿ ವೃದ್ದರಾದ್ರಿ, ಹೊಸಬರು, ಯುವಕರು ಬರಲಿಲ್ಲ, ಹೀಗೆಯೇ ನಾವುಗಳು ಬಾಷಣ ಮಾಡುತ್ತಲೆ ಒಂದು ದಿನ ಸಾಯುತ್ತೇವೆ ನೀವು ಕೇಳುತ್ತಲೆ ಸಾಯುತ್ತೀರಿ, ಹೊಸಬರು ಯುವಕರು ಬರುತ್ತಿಲ್ಲ, ಅದೆ ಹಳೆ ತಲೆಗಳು ಅದೆ ಹಸಿರು ಶಾಲುಗಳು, ರೈತ ಒಂದು ಕ್ವಿಂಟಾಲು ರಾಗಿ ಬೇಳೆದರೆ ಸಾವಿರ ಜನ ಊಟ ಮಾಡಬಹುದು ಆದರೆ ಒಬ್ಬ ರಾಜಕರಣಿ ಸಾವಿರ ಕೋಟಿ ಆಸ್ತಿ ಮಾಡಿದರು ಅದು ಆತ ಮತ್ತು ಆತನ ಕುಟುಂಬದವರಿಗೆ ಮಾತ್ರ ಅನುಭೋಗಕ್ಕೆ ಸಿಗುತ್ತೆ, ಇಲ್ಲಿ ಸಾವಿರ ಜನರಿಗೆ ಊಟ ಕೊಡುವ ರಾಗಿ ಬೆಳೆಯುವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ, ಕೋಟಿ ಕೋಟಿ ಲೂಟಿ ಮಾಡುವ ರಾಜಕರಣಿ ಇನ್ನಷ್ಟು ಕೋಟಿ ಲೂಟಿ ಮಾಡುತ್ತಿದ್ದಾನೆ,

ಜೈಲಿನಲ್ಲಿ 6 ತಿಂಗಳು ಇದ್ದ ಖೈದಿ ಅಲ್ಲಿ ಕಲಿತ ಕೆಲಸವನ್ನು ಕಲಿತು ಹೊರಬಂದು ಊದಿನ ಕಡ್ಡಿ, ಚೀಲಾ ಹೊಲೆದು ಅಥವಾ ಬೇರೆ ಬೇರೆ ಕೆಲಸ ಮಾಡಿ ಉದ್ಯೋಗ ಸೃಷ್ಟಿಸಿಕೊಂಡರೆ ಎರಡೂ ಮೂರು ಡಿಗ್ರಿ ಮಾಡಿದರು ನಮ್ಮ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂತಹ ಪರಿಸ್ಥಿತಿ ಇದೆ ನೋಡಿ ನಮ್ಮ ದೇಶದಲ್ಲಿ”

ಪುಟ್ಟಣ್ಣಯ್ಯ ತುಂಗಾಮೂಲ ಚಳುವಳಿ, ಬಾಬಾ ಬುಡನ್ ಗಿರಿ ಹೋರಾಟ ಮತ್ತು ಎಲ್ಲಾ ಜನಪರವಾದ ಚಳುವಳಿಗಳಲ್ಲಿ ನಮ್ಮ ಸಂಘನೆಗಳಿಗಳೊಂದಿಗೆ ಹತ್ತಿರದ ಭಾಂದವ್ಯ ಹೊಂದಿದವರು, ಇತ್ತಿಚೆಗೆ ಇವರು ಮತ್ತು ದೇವನೂರು ಮಹಾದೇವ ಸ್ವರಾಜ್ ಇಂಡಿಯಾ ಪಾರ್ಟಿಯನ್ನು ರಾಜ್ಯದಲ್ಲಿ ಬಲಿಷ್ಡವಾಗಿ ಕಟ್ಟಬೇಕೆಂದು ಪಣ ತೊಟ್ಟಿದ್ದವರು ಇವರುಗಳ ಕರೆಗೆ ಗೌರವಿಸಿ ನಾವೂ ಕೂಡ ಇತ್ತಿಚೆಗೆ ಸ್ವರಾಜ್ ಇಂಡಿಯಾ ಸೇರಿದ್ದೇವು, ಜನವರಿ 21 ರಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಡೆದ ಮಿಟಿಂಗ್ ನಲ್ಲಿ ” ಸ್ವರಾಜ್ ಇಂಡಿಯಾಕ್ಕೆ ಈಡಿ ದೇಶಕ್ಕೆ ನಾನೊಬ್ಬನೆ ಏಕೈಕ ಜನ ಪ್ರತಿನಿಧಿ “. ಎಂದಿದ್ದರು ಮತ್ತು ಈ ಬಾರಿ ಮೇಲುಕೋಟೆ ಯಲ್ಲಿ ಸ್ವರಾಜ್ ಇಂಡಿಯ ಪಕ್ಷದ ಪ್ರತಿನಿಧಿಸುತ್ತಿದ್ದೇನೆ ಎಂದಿದ್ದರು.

ಕಳೆದ ಐದು ವರ್ಷದಲ್ಲಿ ವಿಧಾನ ಸೌಧದಲ್ಲಿ ನಿರಂತರವಾಗಿ ಕಂಡು ಬಂದ ಹಸಿರುಶಾಲಿನ ಜನಪ್ರತಿನಿಧಿ ಅದು ನಮ್ಮ ಪುಟ್ಟಣ್ಣಯ್ಯ, ವಿಶ್ವದ ಅನೇಕ ದೇಶಗಳಲ್ಲಿ ರೈತಪ್ರತಿನಿದಿಯಾಗಿ ಪಾಲ್ಗೊಂಡವರಲ್ಲಿ ನಂಜುಡಸ್ವಾಮಿಯರ ನಂತರದ ಸ್ಥಾನ ಪುಟ್ಟಣ್ಣಯ್ಯರವರಿಗೆ ಸಲ್ಲುತ್ತೆ. ಅವರ ಅಗಲಿಕೆಯು ನಮ್ಮ ಚಳುವಳಿಗಳ ವಲಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.

ಕೆ.ಪಿ.ಶ್ರೀ ಪಾಲ್, ಶಿವಮೊಗ್ಗ.

ಈ ಸಾವಿನ ದುಃಖ ಎಷ್ಟು ಖಾಸಗಿಯೋ ಅಷ್ಟೇ ಸಾರ್ವಜನಿಕ…

ಅದೇ ಆಗಷ್ಟೇ ಬೆವರ ಕಡಲಲ್ಲಿ ಅದ್ದಿ ತೆಗೆದಂತಿದ್ದ ಪುಟ್ಟಣ್ಣಯ್ಯನವರ ಮುಖ ಸದಾ ಸಂಘರ್ಷಕ್ಕೆ ಸಿದ್ಧ ಅನ್ನುವಂತಿತ್ತು. ದೊಡ್ಡ ದೊಡ್ಡ ನಾಯಕರಿಂದಲೂ ಸಾಧ್ಯವಾಗದ ‘ದಲಿತ-ರೈತ’ ಬಣಗಳ ಒಗ್ಗೂಡುವಿಕೆಯ ಕನಸನ್ನು ಒಂದಿಷ್ಟಾದರೂ ಸಾಧ್ಯವಾಗಿಸಿದ್ದು ಪುಟ್ಟಣ್ಣಯ್ಯ. ನಾನು ಮೂರ್ನಾಲ್ಕು ಸಲ ಕಂಡಾಗಲೂ ಇವರೊಂದಿಗಿದ್ದದ್ದು ಹಸಿರು ಟವಲ್ ಮತ್ತು ದೇವನೂರ ಮಹಾದೇವ.

ಇನ್ನೊಂದಷ್ಟು ಕಾಲ ನಮ್ಮೊಂದಿಗಿರಬೇಕಿತ್ತು ಅನ್ನುವ ನಮ್ಮ ಯಾವ ಆಸೆಗಳಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಪುಟ್ಟಣ್ಣಯ್ಯ ಮಾರ್ಗಮಧ್ಯೆ ಹಠಾತ್ ನಿರ್ಗಮಿಸಿಯಾಗಿದೆ. ಫ್ಯೂಡಲ್ ನೆಲದಲ್ಲಿ ಫ್ಯೂಡಲ್ ಜಾತಿಗೆ ಸೇರಿದ ಫ್ಯೂಡಲ್ ಸಂಘವೊಂದರಲ್ಲಿ ಮಾತ್ರ ಕರಗಿಹೋಗಬಹುದಾಗಿದ್ದ ಪುಟ್ಟಣ್ಣಯ್ಯ ಎಲ್ಲರ ನಾಯಕ ಎನಿಸಿಕೊಂಡರು. ಪುಟ್ಟಣ್ಣಯ್ಯ ಶಾಸಕರಾಗಿ ವಿಧಾನಸೌಧಕ್ಕೆ ಪ್ರವೇಶ ಪಡೆಯುವ ದಿನ ಬರೀ ಪಾಂಡವಪುರ ಜನತೆ ಮಾತ್ರವಲ್ಲ ಅವರನ್ನು ಬಲ್ಲ ಎಲ್ಲರೂ ಸಂಭ್ರದಲ್ಲಿದ್ದರು.

ಅವರನ್ನು ನಾನು ಕಳೆದ ಬಾರಿ ನೋಡಿದ್ದು ಬೆಂಗಳೂರಿನಲ್ಲಿ ಜರುಗಿದ ‘ಅಂಬೇಡ್ಕರ್ ಅಂತರರಾಷ್ಟ್ರೀಯ ಸಮ್ಮೇಳನ’ದಲ್ಲಿ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕುರ್ಚಿಸಿಗದೆ ಪುಟ್ಟಣ್ಣಯ್ಯ ತಮ್ಮ ಸುಸ್ತಾದ ಕಾಲುಗಳನ್ನು ನೆಲಕ್ಕೂರಿ ತಮ್ಮ ಬೆಂಬಲಿಗರೊಂದಿಗೆ ಗೋಡೆಗೊರಗಿ ಕೂತಿದ್ದರು. ಅದೇ ಕಡೆ. ಇವತ್ತು ಈ ಅಕಾಲಿಕ ಸಾವಿನ ಸುದ್ದಿ. ಈ ಸಾವಿನ ದುಃಖ ಕೂಡ ಎಷ್ಟು ಖಾಸಗಿಯೋ ಅಷ್ಟೇ ಸಾರ್ವಜನಿಕ.

ಚಂದ್ರಶೇಖರ ಅಜೈೂರ್‌

 

Leave a Reply

Your email address will not be published.

Social Media Auto Publish Powered By : XYZScripts.com