ನಾಡಿನ ಒಳಿತಿಗಾಗಿ ಬಾಹುಬಲಿ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ : ಸಿದ್ದರಾಮಯ್ಯ

ಶ್ರವಣಬೆಳಗೊಳ : ‘ ನಾನು ಇಲ್ಲಿಗೆ ಬಂದ ಮೇಲೆ ಡೋಲಿ ಹೊರುವವರನ್ನು ನೋಡಿದೆ. ಶಾಂತಿ ಪ್ರತಿಪಾದನೆಯ ಜಾಗದಲ್ಲಿ ಹಿಂಸೆ ಕೊಡಬಾರದು ಅನ್ನಿಸಿತು ಅದಕ್ಕೆ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿದೆ ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಯವರು ವಿಂಧ್ಯಗಿರಿ ಬೆಟ್ಟಕ್ಕೆ ಡೋಲಿಯಲ್ಲಿ ಹೋಗಲಿದ್ದಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು.

ಇದಕ್ಕಾಗಿ ಡೋಲಿ ಮತ್ತು ಅದನ್ನು ಹೊರುವವರೂ ಸಿದ್ದವಾಗಿದ್ದರು. ಆದರೆ, ಮೆಟ್ಟಿಲುಗಳ ಸಮೀಪ ಬಂದ ಮುಖ್ಯಮಂತ್ರಿಯವರು, ಬೆಟ್ಟವನ್ನೊಮ್ಮೆ ನೋಡಿದರು. ಕ್ಷಣಮಾತ್ರದಲ್ಲೇ ಕಾಲ್ನಡಿಗೆಯಲ್ಲಿ ಹತ್ತಲು ಆರಂಭಿಸಿದರು. ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ನೆರವೇರಿಸಿ ಕಾಲ್ನಡಿಗೆಯಲ್ಲೇ ಅವರು ಬೆಟ್ಟ ಇಳಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಯವರು, ಇದೇ ಮೊದಲ ಬಾರಿಗೆ ನಾನು ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ‌ ಮಹೋತ್ಸವದಲ್ಲಿ ಭಾಗವಹಿಸಿದ್ದೇನೆ. ಇದು ನನಗೆ ಖುಷಿ ತಂದಿದೆ ಎಂದು ಹೇಳಿದರು. ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ನೆರವೇರಿಸಿ ನಾಡಿನ ಒಳಿತಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

18 ವರ್ಷಗಳ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ  ಸ್ಟಂಟ್ ಹಾಕಿಸಿಕೊಂಡಿದ್ದೇನೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂದುಕೊಂಡಿದ್ದೆ. ಆದ್ದರಿಂದ ಸ್ವಲ್ಪ ದೂರ ಹತ್ತೋಣ ಎಂದು ಯೋಚಿಸಿದ್ದೆ. ಆದರೆ, ಶಾಂತಿ ಪ್ರತಿಪಾದನೆಯ ಸ್ಥಳದಲ್ಲಿ ಹಿಂಸೆ ಕೊಡಬಾರದು ಎಂದು ಡೋಲಿ ಹೊರುವವರನ್ನು ನೋಡಿದ ಬಳಿಕ ಅನ್ನಿಸಿತು. ಹೀಗಾಗಿ ಹತ್ತಲು ಶುರು ಮಾಡಿದೆ.

‘ ಆದರೆ ಹತ್ತಲು ಶುರು ಮಾಡಿದ ಮೇಲೆ ಸಮಸ್ಯೆ ಆಗಲಿಲ್ಲ. ಹೀಗಾಗಿ ಪೂರ್ತಿ ಮೆಟ್ಟಿಲು ಹತ್ತಿಕೊಂಡು ಹೋದೆ ಎಂದು ಹೇಳಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ನಾನು ಉಪ ಮುಖ್ಯಮಂತ್ರಿ ಆಗಿದ್ದೆ. ಹಣಕಾಸು ಸಚಿವನೂ ಆಗಿದ್ದ ಕಾರಣ ಮಹಾಮಸ್ತಕಾಭಿಷೇಕಕ್ಕೆ ಅನುದಾನ ಬಿಡುಗಡೆ ಮಾಡಿದ್ದೆ. ಆದರೆ, ದೇವೇಗೌಡರು ಆಗ ನನ್ನನ್ನು ಪಕ್ಷದಿಂದ ವಜಾ ಮಾಡಿದ್ರು ‘ ಎಂದರು

‘ ಮಸ್ತಕಾಭಿಷೇಕ ನಡೆಯುವ ವೇಳೆಗೆ ನಾನು ಡಿಸಿಎಂ,ಹಣಕಾಸು ಸಚಿವ ಸ್ಥಾನ ಕಳೆದುಕೊಂಡಿದ್ದೆ. ಆದ್ದರಿಂದಾಗಿ ಮಸ್ತಕಾಭಿಷೇಕದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದೇನೆ. ಇದು ನನಗೆ ಸಂತಸ ತಂದುಕೊಟ್ಟಿದೆ ‘ ಎಂದರು.

‘ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಬಾಹುಬಲಿ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ. ಮಹಾಮಸ್ತಕಾಭಿಷೇಕ ಅಚ್ವುಕಟ್ಟಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೆ. ಅದರಂತೆ ಮಾಡಿದ್ದಾರೆ ‘ ಎಂದರು.

 

Leave a Reply

Your email address will not be published.

Social Media Auto Publish Powered By : XYZScripts.com