ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಯುವಕನ ಥಳಿತ : ಶಾಸಕ ಹ್ಯಾರಿಸ್ ಪುತ್ರನ ವಿರುದ್ಧ FIR..
ಬೆಂಗಳೂರು : ಶಾಂತಿನಗರ ಶಾಸಕ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಹ್ಯಾರಿಸ್ನ ರೌಡಿಸಂ ಮತ್ತೆ ಆರಂಭವಾಗಿದೆ. ಯುಬಿ ಸಿಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಉದ್ಯಮಿಯೊಬ್ಬರ ಮಗನಿಗೆ ಮನಸೋಯಿಚ್ಛೆ ಥಳಿಸಿರುವ ಈತ, ಬಳಿಕ ಮಲ್ಯ ಆಸ್ಪತ್ರೆಗೂ ನುಗ್ಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.
ಉದ್ಯಮಿಯೊಬ್ಬರ ಮಗ ವಿದ್ವತ್ ತನ್ನ ಸಹೋದರ ಸಾತ್ವಿಕ್ ಜೊತೆ ರಾತ್ರಿ ಸುಮಾರು 11 ಗಂಟೆಗೆ ನಗರದ ಯು ಬಿ ಸಿಟಿ ರೆಸ್ಟೋರೆಂಟ್ಗೆ ಊಟಕ್ಕೆಂದು ಬಂದಿದ್ದ. ಈ ವೇಳೆ ಅಲ್ಲಿಗಾಗಮಿಸಿದ ಶಾಸಕ ಹ್ಯಾರಿಸ್ ಮಗ ಹಾಗು ಆತನ 10 ಸ್ನೇಹಿತರು ಕಾಲನ್ನು ಹಿಂದಕ್ಕೆ ತೆಗೆಯುವಂತೆ ಧಮ್ಕಿ ಹಾಕಿದ್ದಾರೆ. ಇದೇ ವಿಚಾರಕ್ಕೆ ಜಗಳವೇರ್ಪಟ್ಟಿದ್ದು, ನಲಪಾಡ್ ಹ್ಯಾರಿಸ್ ಹಾಗೂ ಆತನ ಸ್ನೇಹಿತರು ವಿದ್ವತ್ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಮನಸೋ ಇಚ್ಛೆ ಥಳಿಸಿದ್ದಾರೆ.
ಈ ಮೊದಲೇ ಕಾಲು ಮುರಿತದಿಂದ ಚಿಕಿತ್ಸೆ ಪಡಿಯುತ್ತಿದ್ದ ವಿದ್ವತ್ ಹಲ್ಲೆಯಿಂದಾಗಿ ಮತ್ತಷ್ಟು ಗಾಯಗೊಂಡಿದ್ದ. ಈತನನ್ನು ಚಿಕಿತ್ಸೆಗಾಗಿ ಹತ್ತಿರದಲ್ಲೇ ಇದ್ದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೂ ನುಗ್ಗಿದ ಮಹಮ್ಮದ್ ನಲಪಾಡ್ ಹ್ಯಾರಿಸ್ ಮತ್ತು ಗ್ಯಾಂಗ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ.
ಉದ್ಯಮಿಯಾಗಿರುವ ಲೋಕನಾಥ್(ಲೋಕಿ) ಅವರ ಮಗ ವಿದ್ವತ್ ಸಿಂಗಪೂರ್ನಲ್ಲಿ ಪದವಿ ಮುಗಿಸಿ ಕಳೆದ ತಿಂಗಳಷ್ಟೇ ವಾಪಾಸ್ ಆಗಿದ್ದರು. ಮಗನ ಮೇಲಿನ ಹಲ್ಲೆಯಿಂದ ಪೋಷಕರು ತೀವ್ರ ವಿಚಲಿತರಾಗಿದ್ದಾರೆ. ಹಲ್ಲೆ ನಡೆಸಿರುವ ಶಾಸಕ ಹ್ಯಾರಿಸ್ ಮಗನ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.