ಕಲುಷಿತ ನೀರು ಕುಡಿದು ಅಪ್ಪ ಮಗ ಸಾವು : 45ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಶಿವಮೊಗ್ಗ : ಕಲುಷಿತ ನೀರು ಕುಡಿದು ವಾಂತಿ ಬೇಧಿಯಿಂದಾಗಿ ಅಪ್ಪ-ಮಗ ಸಾವಿಗೀಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಮೈದೊಳದಲ್ಲಿ ನಡೆದಿದೆ.

ಮೃತರನ್ನು ಶಿವಪ್ಪ ಹಾಗೂ ಮಗ ಹನುಮಂತ ಎಂದು ಹೆಸರಿಸಲಾಗಿದೆ. ಕಲುಷಿತ ನೀರಿನ್ನು ಕುಡಿದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವುದಾಗಿ  ತಿಳಿದುಬಂದಿದೆ. ಅಸ್ವಸ್ಥರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯ್ತಿ ಪೂರೈಕೆ ಮಾಡುತ್ತಿದ್ದ ನೀರನ್ನು ಕುಡಿದು 45ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಮತ್ತೆ ನೀರು ಕುಡಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರಿನ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ನೀರಿನ ಟ್ಯಾಂಕನ್ನು ಸ್ವಚ್ಚ ಮಾಡದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಹೊಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com