ನೂರು ದೇವರುಗಳನು ನೂಕಾಚೆ ದೂರ…ಇದು ನನ್ನ ಹೆಮ್ಮೆಯ ನಾಡು ನೀ ಅರಿಯ ಬಾರ…

ನೆರೆದ ಹೆಣ್ಮಕ್ಕಳು ಕಣ್ಣೀರಾಗಿದ್ದರು. ದೇವಿಯ ರಥ ಎಳೆಯಲು ಆಸ್ಪದ ಕೊಡದ ಸವರ್ಣೀಯರ ಬಗ್ಗೆಯೂ ಅವರಲ್ಲಿ ಸಿಟ್ಟು ಮಡುಗಟ್ಟಿತ್ತು. ತಮ್ಮ ಮೇಲೆ ದಾಳಿಯಾಗುವಾಗ ನೆರವಿಗೆ ಬಾರದ ದೇವಿಯ ಬಗ್ಗೆಯೂ ಅಸಮಾಧಾನವಿತ್ತು. ಅಲ್ಲಿದ್ದ ಮಕ್ಕಳು ವಯಸ್ಸಾದವರು ಸಂಕಟವನ್ನು ಹೊತ್ತುಕೊಂಡೇ ಬಂದವರ ಮಾತಿಗೆ ಕಿವಿಯಾಗತೊಡಗಿದರು.
‘ನಮ್ಮನ್ನು ಶೋಷಣೆ ಮಾಡಲೆಂದೇ ದೇವರುಗಳನ್ನು ಹುಟ್ಟಿಸಲಾಯಿತು. ನಮಗೆ ಮುಟ್ಟಿಸಿಕೊಳ್ಳದ ದೇವರುಗಳು ನಮಗೇಕೆ ಬೇಕು? ಈ ಹಿಂದೂ ದೇವರುಗಳ ಗುಡಿಯಲ್ಲಿ ನಮಗೆ ಪ್ರವೇಶವಿಲ್ಲ. ರಥ ಎಳೆಯಲು ಆಸ್ಪದವಿಲ್ಲ. ನಮ್ಮನ್ನು ಮನುಷ್ಯರಂತೆ ಕಾಣದ ಈ ದೇವರುಗಳು ನಮಗೆ ಬೇಕೆ? ಇಂಥ ದೇವರುಗಳನ್ನು ಪೋಷಿಸುತ್ತಿರುವ ಮೇಲ್ಜಾತಿಯವರ ಅಸ್ಪ್ರಷ್ಯತೆಗೆ ಇನ್ನು ಎಲ್ಲಿವರೆಗೆ ನಾವು ಬಲಿಯಾಗಬೇಕು? ನಿಮ್ಮ ರಕ್ಷಣೆಗೆ ಯಾವ ದೇವರುಗಳೂ ಇಲ್ಲಿವರೆಗೆ ಬಂದಿಲ್ಲ. ಬರುವುದೂ ಇಲ್ಲ. ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಬೇಕು. ಬಾಬಾಸಾಹೇಬ ಅಂಬೇಡ್ಕರ ಅದಕ್ಕಾಗಿಯೇ ಇವುಗಳನ್ನು ಧಿಕ್ಕರಿಸಿದರು. ದೇವರೆಂಬುದೇ ಮೊದಲ ಮೌಢ್ಯ. ಅದಕ್ಕಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ ಹೇಳಿದ್ದರು ‘ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ’ ಎಂದು.

ಯಾವತ್ತು ದೇವರ ಗುಡಿಯ ಮುಂದಿನ ಸಾಲು ಇಲ್ಲವಾಗುತ್ತದೊ ಮತ್ತು ಲೈಬ್ರರಿ ಮುಂದೆ ಸಾಲುಗಟ್ಟಿ ಜನ ನಿಲ್ಲುತ್ತಾರೊ ಆಗ ನೈಜ ವಿಮೋಚನೆಯ ದಿನಗಳು ತೆರೆದುಕೊಳ್ಳುತ್ತವೆ’ ಈ ಸತ್ಯವನ್ನು ಅನೇಕ ಉದಾಹರಣೆಗಳು ಮೂಲಕ ವಿವರಿಸಿದ್ದು ದಲಿತ ದಮನಿತ ವಿಮೋಚನೆಗಾಗಿ ನಿರಂತರ ತೊಡಗಿಸಿಕೊಂಡವರು ಹಿರಿಯರಾದ ಡಾ.ವಿಠ್ಠಲ ದೊಡ್ಮನಿ. ಇವರ ಮಾತಿಗೆ ಕ್ರಮೇಣ ಮಹಿಳೆಯರು ಕಣ್ಣೊರೆಸಿಕೊಂಡು ಸೊಂಟಕ್ಕೆ ಸೆರಗು ಬಿಗಿಗೊಳಿಸಿಕೊಳ್ಳತೊಡಗಿದರು. ಹೌದು ತಮ್ಮನ್ನು ಕೀಳಾಗಿಸಿದ ತಮ್ಮ ಗಂಡುಮಕ್ಕಳ ಮೇಲೆ ಧಾಳಿಯಾಗಲು ಕಾರಣವಾದ ದೇವರುಗಳು ತಮಗೆ ಬೇಡವೆಂದು ಬಲವಾಗಿ ತೀರ್ಮಾನಿಸಿದ ಮಹಿಳೆಯೊಬ್ಬಳು ಬಿರಬಿರನೆ ತಮ್ಮ ಪುಟ್ಟ ಮನೆಗೆ ಹೋದಳು. ದೇವರುಗಳ ಫೋಟೊದೊಂದಿಗೆ ಬಂದವಳೇ ಬೀದಿಗೆ ಎಸೆದಳು. ಮತ್ತು ಗಟ್ಟಿಯಾಗಿ ಹೇಳಿದಳು ‘ನಮಗೀ ದ್ಯಾವ್ರಗೋಳು ಬ್ಯಾಡ’ .. ಅವಳ ದನಿಯು ನೆರೆದವರ ಮನದಲ್ಲಿನ ಹೊಯ್ದಾಡುವ ವಿಚಾರಗಳಿಗೆ ಕ್ರಮೇಣ ಗಟ್ಟಿತನ ಕಲ್ಪಸಿತು. ಒಬ್ಬೊಬ್ಬರೆ ನಂತರದಲ್ಲಿ ಗುಂಪು ಗುಂಪಾಗಿ ಮಹಿಳೆಯರು ಎದ್ದು ತಮ್ಮ ಮನೆಗಳಿಗೆ ಹೋದರು. ತಮ್ಮ ಕೈಯಿಂದ ಪೂಸಿಕೊಂಡೂ ತಮ್ಮ ನೆರವಿಗೆ ಬಾರದ ತಮಗೆ ಅಪಮಾನ ಮಾಡಿದ ದೇವರುಗಳ ಪೋಟೊದೊಂದಿಗೆ ಬಂದು ರೋಷದಿಂದ ಎಸೆದರು. ನೋಡ ನೋಡುತ್ತಲೇ ದೇವರುಗಳು ಗುಡ್ಡೆಯಾಯಿತು. ಡಾ.ವಿಠ್ಠಲ್ ದೊಡ್ಮನಿಯವರು ಮಾತಾಡುತ್ತಲೇ ಇದ್ದರು. ಸಾವಿರಾರು ಹಳ್ಳಿಗಳನ್ನು ಸುತ್ತಾಡಿ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ದನಿ ಎತ್ತಿದ ಅನುಭವವುಳ್ಳ ವಿಠ್ಠಲ ಅವರ ಮಾತಿಗಳು ಅಲ್ಲಿದ್ದವರಿಗೆ ಮನವರಿಕೆಯಾತೊಡಗಿದವು. ಅಜ್ಞಾನವೆಂಬ ತೊಟ್ಟಿಲಿನಿಂದ ಬಚಾವಾದ ಜ್ಞಾನಿ ಜನಸಮೂಹವು ಇಟ್ಟ ಬೆಂಕಿಗೆ ದೇವರ ಫೋಟೊಗಳು ಲಿಗಿಲಿಗಿ ಅನ್ನತೊಡಗಿದವು.

ಘಟನೆ ಹೀಗಿದೆ:
ಜೇವರ್ಗಿ ತಾಲ್ಲೂಕಿನ ಕೊಂಡಗೂಳಿ ಗ್ರಾಮದ ದಲಿತ ಸಮುದಾಯದವರು ನೂರಾರು ದೇವರುಗಳನ್ನು ಬೀದಿಗೆ ಬಿಸಾಕಿ ಸುಟ್ಟು ಭಸ್ಮ ಮಾಡಿರುವರು. ಒಂದೇ ಒಂದು ದೇವರು ಎದ್ದು ಯಾಕೆಂದು ಕೇಳಲಿಲ್ಲ. ಇಂತೊಂದು ಪ್ರಕರಣದ ತರುವಾಯ ನಾನು ಕೂಡಲೇ ನಮ್ಮ ಜಿಲ್ಲೆಯ ದಲಿತ ದಮನಿತ ಲೋಕದ ದನಿಯಾದ ವಿಠ್ಠಲ ದೊಡ್ಮನಿಯವರನ್ನು ಸಂಪರ್ಕಿಸಿದೆ. ಬದುಕಿನುದ್ದಕ್ಕೂ ಡಾ.ಬಾಬಾಸಾಹೇಬ ಅಂಬೇಡ್ಕರರ ಸಿದ್ಧಾಂತವನ್ನು ಜಾರಿ ಮಾಡುವಲ್ಲಿ ಶ್ರಮಿಸಿದವರು. ಅವರು ಹೇಳಿದ್ದಿಷ್ಟು ; ಕೊಂಡಗೂಳಿಯಲ್ಲಿ ಕಟ್ಟಿದ ದ್ಯಾವಮ್ಮನ ಗುಡಿಯ ರಥ ಎಳೆಯುವ ಜಾತ್ರೆಯಲ್ಲಿ ದಲಿತರು ರಥ ಎಳೆಯಬಾರದೆಂದು ಸವರ್ಣೀಯರು ವಿರೋಧಿಸಿದ್ದಾರೆ. ಕುರಿಮರಿ ಬೇಕಾದರೆ ಹಿಡಿಯಿರಿ. ಮತ್ತು ನೀವೇ ಅದನ್ನು ಬಲಿ ಕೊಡಬೇಕು. ಆದರೆ ರಥ ಎಳೆಯುವಂತಿಲ್ಲ ಎಂದಿದ್ದಾರೆ. ತಾವು ಕುರಿ ಕೋಣ ಬಲಿ ಕೊಡಲಿಕ್ಕೆ ಮಾತ್ರ ಏನು? ದೇವರ ರಥ ಎಳೆಯುವಂತಿಲ್ಲ ಯಾಕೆ? ಎಂದು ದಲಿತರು ಪ್ರಶ್ನಿಸಿದ್ದಾರೆ. ದೇವರ ಸನ್ನಿಧಿಯಲ್ಲಿಯೇ ನಡೆವ ಈ ತಾರತಮ್ಯವನ್ನು ದೇವರು ಪ್ರಶ್ನಿಸಲೇ ಇಲ್ಲ. ವಾಗ್ವಾದ ನಡೆಯಿತು. ಕಲ್ಲು ತೂರಾಟ ನಡೆಯಿತು. ದಲಿತರ ಮೇಲೆ ಸವರ್ಣೀಯರು ಧಾಳಿ ಮಾಡಿದರು. ಹನ್ನೆರಡು ಜನ ಈಗಾಗಲೇ ಜೇವರ್ಗಿ ಮತ್ತು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಈ ಕೊಂಡಗೂಳಿ ಗ್ರಾಮಕ್ಕೆ ವಿಠ್ಠಲ್ ದೊಡ್ಮನಿ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆಯ ಯುವ ವಕೀಲರಾದ ನಾಗೇಂದ್ರ ದಲಿತ ಸೇನೆಯ ಹಣಮಂತ ಯಳಸಂಗಿ ಮುಂತಾದ ಹೋರಾಟಗಾರರು ಭೇಟಿಯಿತ್ತಿದ್ದಾರೆ. ಮತ್ತು ದೇವರೆಂಬ ಮೌಢ್ಯ ಹೇಗೆ ನಮ್ಮನ್ನು ಗುಲಾಮಗಿರಿಯಲ್ಲಿಯೇ ಇರಿಸಿದೆ ಎಂಬುದನ್ನು ವಿವರಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಕೊಂಡಗೂಳಿಯ ಮಹಿಳೆಯರು ತಮ್ಮ ಗಂಡುಮಕ್ಕಳು ಗಾಯಗೊಳ್ಳುವಂತೆ ಮಾಡಿದ ತಮ್ಮಲ್ಲಿನ ಮೌಢ್ಯಕ್ಕೆ ಕಾರಣವಾದ ದೇವರುಗಳು ನಮಗೆ ಬೇಡ ಎಂದಿದ್ದಾರೆ.
ಅನೇಕ ಜನರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅನೇಕರು ಪೋಟೊ ಸುಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ದೇವರನ್ನು ನಂಬುವವರ ಭಾವನೆಗಳಿಗೆ ಧಕ್ಕೆ ಮಾಡಿದಂತೆ ಎಂದೆಲ್ಲ ಮನದ ಮಾತು ಹೇಳಿದ್ದಾರೆ. ದೇವರನ್ನು ನಂಬುವವರಿಗೂ ಮತ್ತು ನಂಬದವರಿಗೂ ತಮ್ಮದೇ ಭಾವನೆಗಳಿರುವುದು ಹೌದು. ಕೇವಲ ದೇವರನ್ನು ನಂಬುವವರಿಗೇ ಮಾತ್ರ ಇರುವುದಿಲ್ಲ. ದೇವರೆಂಬುದು ಪ್ರತಿ ವ್ಯಕ್ತಿಯ ವೈಯಕ್ತಿಕಕ್ಕೆ ಸಂಬಂಧಿಸಿದ್ದು. ಅವರು ದೇವರೊಂದಿಗೆ ಅನುಸಂಧಾನ ಮಾಡಬಹುದು, ಬೈಯ್ಯಬಹುದು, ಪೂಜಿಸಬಹುದು, ಅನುರಕ್ತರಾಗಬಹುದು, ನಂಬದೇ ಇರಬಹುದು, ತಿರಸ್ಕರಿಸಬಹುದು, ಶಿಕ್ಷಿಸಬಹುದು. ಅವರವರ ನಂಬಿಕೆಯ ಪ್ರಕಾರ ನಡೆಯಲು ಎಲ್ಲರಿಗೂ ಹಕ್ಕಿದೆ. ಹೀಗಾಗಿ ಕೊಂಡಗೂಳಿ ಗ್ರಾಮದ ಮಹಿಳೆಯರು ದೇವರು ಫೋಟೊಗಳಿಗೆ ಬೆಂಕಿ ಇಟ್ಟ ಕೂಡಲೇ ಯಾರೂ ಅವರ ವೈಯಕ್ತಿಕ ಹಕ್ಕಿನ ಮೇಲೆ ಹರಿಹಾಯಬೇಕಿಲ್ಲ. ಇಷ್ಟಕ್ಕೂ ದೇವರನ್ನು ಹುಟ್ಟಿಸಿದ್ದು ಮನುಷ್ಯರು ತಾನೆ? ದೇವರನ್ನು ಮೌಢ್ಯವಾಗಿಸಿದವರೂ ಮನುಷ್ಯರು ತಾನೆ? ಹೀಗಿದ್ದಾಗ ದೇವರ ಕುರಿತು ಪ್ರಶ್ನಿಸುವ, ಒಪ್ಪುವ, ತಿರಸ್ಕರಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ.
ಹಾಗೆ ನೋಡಿದರೆ ಹೈದರಾಬಾದ್‌ ಕರ್ನಾಟಕದಲ್ಲಿ ಈ ಪ್ರಕರಣವು ಮೊದಲನೆಯದೇನಲ್ಲ. ನಮ್ಮ ನಾಡು ದೇವಾಲಯ ಸಂಸ್ಕೃತಿ ಹೊಂದಿಲ್ಲ. ದೇಹವನ್ನೇ ದೇವಾಯಲಯದ ಮಟ್ಟಕ್ಕೆ ಕೊಂಡೊಯ್ದ ನಾಡಿದು. ಚರಿತ್ರೆಯನ್ನು ಕೆದಕಿ ನೋಡಿದರೆ ಬಹು ದೀರ್ಫವಾದ ಉಲ್ಲೇಖಗಳು ಪ್ರಕರಣಗಳು ಪರಂಪರೆಯಾಗಿ ದೊರೆಯುತ್ತವೆ. ನಾನೀಗ ಅವುಗಳಿಗೆ ಹೋಗುವುದಿಲ್ಲ. ದೇವರುಗಳ ಭಜನೆಯ ಪರಂಪರೆಯ ಮುಂದುವರಿಕೆಯಾಗಿ ನಮ್ಮಲ್ಲಿ ನಡೆದ ಕೆಲವು ಪ್ರಕರಣಗಳನ್ನು ಇದೇ ಹೊತ್ತಿನಲ್ಲಿ ನೆನಪಿಸ ಬಯಸುತ್ತೇನೆ.

ಸರಿ ಸುಮಾರು 1964-65ರ ಸುಮಾರಿಗೆ ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹಿಲಾಲಪುರದಲ್ಲಿ ಜನಿಸಿದ ಪಂಚಶೀಲ ಕಾಶಿನಾಥ ಗವಾಯಿಯವರ ಬಗ್ಗೆ ನಾನು ಅನೇಕ ಸಂದರ್ಭದಲ್ಲಿ ಬರೆದಿದ್ದೇನೆ. ಕಾಶಿನಾಥ ಗವಾಯಿ ಮತ್ತು ಮಾಣಿಕರಾವ್ ಜ್ಯೋತಿ ಇವರಿಬ್ಬರು ನಾಗಪುರದ ದೀಕ್ಷಾ ಭೂಮಿ, ಬೋಧ ಗಯಾ ಅಂತೆಲ್ಲ ಸುತ್ತಾಡಿ ಬುದ್ದ ಬಾಬಾಸಾಹೇಬರ ಚಿಂತನೆಗಳಿಗೆ ಮನಕೊಟ್ಟು ತಮ್ಮ ಬದುಕಿನುದ್ದಕ್ಕೂ ಸಮಾನತೆಗಾಗಿ ಮತ್ತು ದೌರ್ಜನ್ಯದ ವಿರುದ್ಧ ಚಿಂತನೆ ಮತ್ತು ಚಳುವಳಿ ಮಾಡಿದವರು. ಕಾಶಿನಾಥ ಗವಾಯಿವರು ಹಳ್ಳಿಗಳಲ್ಲಿ ಡಪ್ಪಿನಾಟ ಕಲಿಸುತ್ತಿದ್ದರು. ಅದೇ ಹೊತ್ತಿನಲ್ಲಿ ಮರಗೆಮ್ಮ, ಪೋಚಮ್ಮ, ಯಲ್ಲಮ್ಮ ಇವುಗಳನ್ನು ಸಂಬಂಧಿಸಿದಂತೆ ಜನರಿಗೆ ತಿಳುವಳಿಕೆ ಕೊಡುತ್ತಿದ್ದರು. ಜನರಿಗೆ ವಂತಿ ಭೇದಿಯಾದರೆ ಗಾಳಿಯಾಗಿದೆ ಎಂದು ನಂಬಿ ಗಾಳಿಯಲ್ಲಮ್ಮನಿಗೆ ಪೂಜಿಸುವುದು, ಕುರಿ ಕೋಳಿ ಬಲಿ ಕೊಡುವುದು, ಚಿಕನ್ ಪಾಕ್ಸ್ ಬಂದರೆ ಹುಲಿಗೆಮ್ಮನಿಗೆ ಮುತ್ತಿನ ಬಟ್ಟಲು ಏರಿಸಿ ಪ್ರಾಣಿ ಬಲಿ ಕೊಡುವುದು ಮುಂತಾದವುಗಳ ಸಂಬಂಧಿಸಿದಂತೆ ಜನರಿಗೆ ತಿಳುವಳಿಕೆ ಕೊಡತೊಡಗಿದರು. ಅವೆಲ್ಲ ಹೇಗೆ ಸುಳ್ಳು, ದೇವರನ್ನು ಹುಟ್ಟಿಸಿದ್ದು ಯಾಕೆ? ನಮ್ಮ ಹೆಣ್ಣುಮಕ್ಕಳನ್ನು ದೇವರ ಹೆಸರಿನಲ್ಲಿ ಹೇಗೆ ದೇವದಾಸಿಯಾಗಿಸುತ್ತಾರೆ ಎಂಬುದೆಲ್ಲ ಪ್ರತಿ ದಿನ ಮನವರಿಕೆ ಮಾಡಿಸಿ ಕಡೆಗೆ ಜನರೇ ತಮ್ಮ ಜಗಲಿಯಲ್ಲಿದ್ದ ಕಟ್ಟಿಗೆಯ ಯಲ್ಲಮ್ಮ, ಪೋಚಮ್ಮ, ಮರಗೆಮ್ಮ ದೇವರುಗಳನ್ನು ತಂದು ಬೀದಿಯಲ್ಲಿಟ್ಟು ಸುಡುವಂತೆ ಮಾಡಿದರು. ಬೀದರ ಕೋಟೆಯ ಪಕ್ಕದಲ್ಲಿರುವ ಊರು ವಾಲ್ದೊಡ್ಡಿಯಲ್ಲಿ ಕಟ್ಟಿಗೆ ದೇವರುಗಳನ್ನೆಲ್ಲ ಸುಟ್ಟು ಭಸ್ಮ ಮಾಡಿದ ಪ್ರಸಂಗ ಈಗಲೂ ಹಿರಿಯರು ನೆನಪಿಸಿಕೊಳ್ಳುತ್ತಾರೆ. ನಂತರದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬುದ್ದನ ಫೋಟೊಗಳು ಮನೆಯ ಗೋಡೆಯನ್ನಲಂಕರಿಸತೊಡಗಿದವು. ಹೀಗೆ ಕಟ್ಟಿಗೆ ದೇವರುಗಳನ್ನು ನಾಲ್ಕೈದು ಕಡೆಯಲ್ಲಿ ಸುಟ್ಟು ಹಾಕಿದ್ದರು ಜನ. ಇದೇ ಹೊತ್ತಿನಲ್ಲಿ ಕಾಶಿನಾಥ ಗವಾಯಿವರು ಈ ಜನರನ್ನು ಅಕ್ಷರದೆಡೆ ಆಕರ್ಷಿಸಲು ಕೊಳಲನೂದುತ, ಹಾರ್ಮೋನಿಯಂ ಬಾರಿಸುತ ತಾವೇ ಕಟ್ಟಿದ ಹಾಡುಗಳನ್ನು ದನಿಯೆತ್ತಿ ಹಾಡತೊಡಗಿದರು ‘ಅಕ್ಷರ ಕಲಿಯಿತ ಅಕ್ಕತಂಗೇರೇ\ ಸಾಲಿಗಿ ಹೋಗರಿ ಅಣ್ಣ ತಮ್ಮರೇ\ ಭಾಳ ಸಂಕಷ್ಟವಾಗಿಯೇ ನಮ್ಮ ಸಂಸಾರ\’. ಇವರ ಜಾಗೃತ ಕರೆಗೆ ಓಗೊಟ್ಟು ಅಕ್ಷರ ಕಲಿತು ಅಧಿಕಾರ ಸ್ಥಾನದಲ್ಲಿದ್ದವರು ಅಸಂಖ್ಯ ಜನ.
ಇದೇ ಹೊತ್ತಿನಲ್ಲಿ ದೇವಭಂಜನೆಯ ಪರಂಪರೆಯ ಇನ್ನೊಂದು ಪ್ರಕರಣವು ನಾನಿಲ್ಲಿ ಹೇಳಲೇಬೇಕಿದೆ. ಒಂದೆಡೆ ಬುದ್ದ ಬಾಬಾಸಾಹೇಬರ ಕಾರಣದಿಂದ ದೇವಭಂಜನೆ ಬೀದರ ಜಿಲ್ಲೆಯಲ್ಲಿ ನಡೆದರೆ ಇನ್ನೊಂದೆಡೆ ಹನ್ನೆರಡನೆ ಶತಮಾನದ ವಚನಕಾರರ ಕಾಯಕ ಚಳುವಳಿಯು ದೇವಾಲಯ ದೇವರನ್ನು ನಿರಾಕರಿಸಿ ದೇಹವನ್ನೇ ದೇವಾಲಯಕ್ಕೇರಿಸಿದೆ. ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ… ಎಂದು ಹೇಳಿದ ಬಸವಣ್ಣ ಮರ ಕಲ್ಲು ಲೋಹದ ದೇವರುಗಳನ್ನು ನಿರಾಕರಿಸಿ ಜನತೆಗೆ ಇಷ್ಟಲಿಂಗ ಕೊಟ್ಟರೆ ಅಲ್ಲಮಪ್ರಭುದೇವ ಅದನ್ನೂ ಹೀಗೆ ಪ್ರಶ್ನಿಸುತ್ತಾನೆ ‘ಉಳಿ ಮುಟ್ಟಿದ ಲಿಂಗವ ಮನ ಮುಟ್ಟಬಲ್ಲದೇ ಗುಹೇಶ್ವರ?’ ‘ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ, ಆ ಕಲ್ಲ ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೊ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ ಗುಹೇಶ್ವರ’ ಹೀಗೆ ದೇವರೆಂಬ ಮೌಢ್ಯವನ್ನು ಪ್ರಶ್ನಿಸಿದ ತಿರಸ್ಕರಿಸಿದ ಬಹುದೊಡ್ಡ ಪರಂಪರೆ ಭಾರತಕ್ಕಿದೆ. ಹನ್ನೆರಡನೆಯ ಶತಮಾನದ ವಚನ ಚಳುವಳಿಯು ಅಂತರ್ಜಾತಿ ಮದುವೆ ಸಂದರ್ಭದಲ್ಲಿ ಸನಾತನಿಗಳ ಕುತಂತ್ರದಿಂದ ಧಾಳಿಗೆ ಬಲಿಯಾಗುತ್ತದೆ. ವಿಪ್ಲವ ನಡೆದು ವಚನ ಸಾಹಿತ್ಯದೊಂದಿಗೆ ಶರಣರು ನಾನಾ ದಿಕ್ಕಿಗೆ ಹೊರಡಲೇಬೇಕಾಗುತ್ತದೆ. ಏಕೆಂದರೆ ಸಾಹಿತ್ಯ ಉಳಿಸಲು. ವಿಚಾರಗಳಿಗೆ ಸಾವಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆನಂತರ ಐದಾರು ಶತಮಾನಗಳ ಕಾಲ ಈ ಕ್ರಾಂತಿಕಾರಕ ಘಟ್ಟವನ್ನು ಜನತೆಗೆ ತಲುಪದಂತೆ ನೋಡಿಕೊಳ್ಳುವ ಷಡ್ಯಂತ್ರ ನಡೆಯಿತು. ಆದರೆ ಚಿಂತನೆಗಳು ಚರಿತ್ರೆಯ ಆಳದಿಂದ ಮತ್ತೆ ಮತ್ತೆ ಪುಟಿದೇಳುತ್ತವೆ. ಹೀಗಾಗಿ ವಚನಕಾರರ ಸಿದ್ಧಾಂತವು ಮತ್ತೆ ಚಿಗುರೊಡೆದಿದೆ.
ಕೊಂಡಗೂಳಿಯ ಈ ಸಂದರ್ಭದಲ್ಲಿ ಇದಕ್ಕೆ ಕೊಂಡಿಯಾಗಿ ಸೇರುವ ಸಂಗತಿಗಳಿವು. ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ 1970ರಿಂದ 80ರ ಹೊತ್ತಿನಲ್ಲಿ ಇರಬೇಕು. (ಮರೆವು ಆದಲ್ಲಿ ಗೊತ್ತಿದ್ದವರು ಸರಿಪಡಿಸಬಹುದು) ವಚನಗಳು ತಾತ್ವಿಕ ನೆಲೆಯಲ್ಲಿ ಜನರ ಮನ ತಲುಪತೊಡಗಿದವು. ತತ್ಪರಿಣಾಮ ಜಗಲಿಯ ಮೇಲಿದ್ದ ದೇವರುಗಳನ್ನು ಕುಟುಂಬದವರೇ ಎತ್ತಿ ಬಾವಿಗೆ ಎಸೆದರು. ಮಹಾಂತ ಜೋಳಿಗೆ ಬಂದಾಗ ದುಷ್ಚಟಗಳ ಪಟ್ಟಿಯಲ್ಲಿ ದೇವರುಗಳೂ ಸೇರಿ ಜೋಳಿಗೆಗೆ ಬಿದ್ದವು. ಅಂದಿಗೆ ಭಾರತಿಯ ಬಸವದಳವೆಂಬುದು ಕಾರ್ಯನಿರತವಾಗಿತ್ತು. ಬಸವಕಲ್ಯಾಣದಲ್ಲಿನ ವೈಜನಾಥ ದುಗರ್ೆ, ನಾಗಣ್ಣ ಔಸೆ, ಕೋಳಕೂರ ಶಂಕ್ರಣ್ಣ, ಲಕ್ಷ್ಮಿಬಾಯಿ, ಜಗದೇವಯ್ಯ ಮಠಪತಿ, ಸಿದ್ದಣ್ಣ ಲಂಗೋಟಿ, ವಿ ಸಿದ್ಧರಾಮಣ್ಣ, ಮುಂತಾದವರು ತಮ್ಮ ಮನೆಯ ದೇವರುಗಳನ್ನು ತೆಗೆದು ಉಳಿದವರಿಗೂ ಪ್ರೇರಣೆಗೊಳಿಸಿದರು. ಈ ಭಾಗದ ಬಸವ ಪರಂಪರೆಯ ಮಠಗಳು ಇದಕ್ಕೆ ಬಹು ದೊಡ್ಡ ಚಾಲನೆ ಕೊಟ್ಟಿದ್ದರು. ಹುಲಸೂರು, ಭಾಲ್ಕಿ, ಇಳಕಲ್, ಗದಗ ಮುಂತಾದ ಮಠಗಳ ಸ್ವಾಮಿಗಳನ್ನು ನೆನಪಿಸಿಕೊಳ್ಳಲೇಬೇಕು. ಸರಿಯಾಗಿ ಅಧ್ಯಯನ ಮಾಡಿದಲ್ಲಿ ಇನ್ನಷ್ಟು ಸಂಗತಿಗಳು ದೊರೆಯುತ್ತವೆ. ಇನ್ನು ಇಳಕಲನ ಮಹಾಂತ ಶಿವಯೋಗಿಗಳು ಶಿವಾನುಭವ ತರಬೇತಿಗಳನ್ನು ನಡೆಸುತ್ತಿದ್ದರು. ವಚನಗಳ ಮಹತ್ವ ಹೇಳಿಕೊಡುವುದಲ್ಲದೆ ಪ್ರತಿ ದಿನ ಸಂಜೆ ನಾಲ್ಕರಿಂದ ಆರು ಗಂಟೆವರೆಗೆ ಮಹಾಂತ ಜೋಳಿಗೆ ತಿರುಗುತ್ತಿತ್ತು. ಶಿಬಿರಾರ್ಥಿಗಳು ವಚನಗಳನ್ನು ಎತ್ತರದ ಕಂಠದಿಂದ ಸಾರುತ ಊರಲ್ಲಿ ಓಡಾಡುತ್ತಿದ್ದರು. ಜನತೆಯು ದುಶ್ಚಟಗಳನ್ನು ತ್ಯಜಿಸಿದ ಸಂಕೇತವಾಗಿ ಅವುಗಳನ್ನು ಮಹಾಂತ ಜೋಳಿಗೆಯಲ್ಲಿ ಹಾಕುತ್ತಿದ್ದರು. ದುಶ್ಚಟಗಳ ಭಾಗವಾಗಿ ದೇವರುಗಳನ್ನೂ ಜೋಳಿಗೆಗೆ ಬರುತ್ತಿದ್ದವು. ಹೀಗೆ ಇಂತಹ ಅನೇಕ ಚಳುವಳಿಗಳು ಉತ್ತರ ಕನರ್ಾಟಕದುದ್ದಕ್ಕೂ ನಡೆದಿವೆ. ಇದೇ ಜೇವರ್ಗಿ ಕಲ್ಲೂರು(ಬಿ) ಗ್ರಾಮದಲ್ಲಿ ಇಂತಹದೇ ಶಿವಾನುಭವ ತರಬೇತಿ ನಡೆದು ನೂರಾರು ಮನೆಗಳಿಂದ ದೇವರುಗಳು ಜಗಲಿಯಿಂದ ಹೊರಗೆ ಬಂದವು. ಇದಕ್ಕೆ ನೇತೃತ್ವ ಕೊಟ್ಟವರು ಶರಣರಾಗಿದ್ದ ಸಿದ್ರಾಮಪ್ಪ ಬಾಲಪ್ಪಗೋಳ್. ಬರೆದಷ್ಟು ಈ ಪಟ್ಟಿ ಬಹಳ ಬೆಳೆಯುತ್ತದೆ.
ಹಾಗೆ ನೋಡಿದರೆ ಇನ್ನು ಅನೇಕ ಗ್ರಾಮಗಳಲ್ಲಿನ ದೇವರುಗಳು ಜನತೆಯ ನಿತ್ಯದ ಸಲುಗೆಯ ಒಡನಾಡಿಗಳು. ದೇವರೆಂದರೆ ಭಯ ಹುಟ್ಟಿಸುವ, ಕೇಡು ಮಾಡುವ, ಬಲಿ ಕೇಳುವ ತೊಂದರೆ ಕೊಡುವವುಗಳಲ್ಲ. ಅವುಗಳು ಜನಪದರ ಮನಸಂಗಾತಗಳು. ಜನರು ತಮ್ಮ ಇಚ್ಛೆ ನೆರವೇರಿಸದಿದ್ದಲ್ಲಿ ದೇವರ ಮೇಲೆ ಮುನಿಸಿಕೊಳ್ಳುವುದಿದೆ. ಮತ್ತೆ ಕರೆದು ಪೂಜಿಸುವುದಿದೆ. ಇದಕ್ಕೆ ಯಾವ ದೊಣ್ಣೆನಾಯಕರ ಅಪ್ಪಣೆ ಬೇಕಾಗುವುದಿಲ್ಲ. ಇಲ್ಲೇ ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದಲ್ಲಿ ಈರ ಎಂಬ ದೇವರು ಈಗಲೂ ಜನರ ಕಲ್ಲೇಟು ಎದುರಿಸುತ್ತಾನೆ. ಏಕೆಂದರೆ ಕಡಾಯಿಯಷ್ಟು ನೈವೇದ್ಯ ಮಾಡಿದರೂ ಸಾಕಾಗುವುದಿಲ್ಲ. ದೇವರಿಗೆ ತೋರಲೂ ಇರುವುದಿಲ್ಲ. ಹುಲ್ಲು ಕಡ್ಡಿಯು ಸಹ ದೇವನಿಂದಲೇ ಚಲಿಸುವುದು ಅಂತಾದಲ್ಲಿ ನೈವೇದ್ಯ ಕಡಿಮೆಯಾಗಲೂ ನೀನೇ ಕಾರಣ ಎಂದು ಸಿಟ್ಟುಗೊಂಡು ದಾರಿಗೆ ಹೋಗುತ ಬರುತ ಕಲ್ಲು ತೂರುವರು. ಇಂತಹ ಅಸಂಖ್ಯ ಪ್ರಕರಣಗಳು ಇವೆ. ಜನಪದರು ಹುಟ್ಟಿಸಲ್ಪಟ್ಟ ದೇವರೆಂಬ ನಂಬಿಕೆಯನ್ನು ತಮಗೆ ಬೇಕಾದಂತೆ ಕಟ್ಟಿಕೊಂಡಿದ್ದಾರೆ. ಆದರೆ ಸಮಸ್ಯೆ ಹುಟ್ಟಿಕೊಂಡಿದ್ದು ಏನೆಂದರೆ ದೇವರೆಂಬ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ಶೋಷಿಸುವಂತ, ಅಪಮಾನಿಸುವಂತಹ ದುಷ್ಕಾರ್ಯಕ್ಕೆ ಇಳಿದ ಉಳ್ಳವರ ಕ್ರೌರ್ಯಕ್ಕೆ ದಲಿತ, ದಮನಿತ, ಶ್ರಮಿಕ, ಮಹಿಳೆ ಹೀಗೆ ಇವರೆಲ್ಲರನ್ನೂ ಬಲಿ ಮಾಡುತ್ತಿರುವುದು.
ದೇವರೆಂಬ ಮೌಢ್ಯದ ಮೂಲಕವೇ ಜನತೆಯನ್ನು ಗುಲಾಮಗಿರಿಗೆ ಅಜ್ಞಾನಕ್ಕೆ ಬಡತನಕ್ಕೆ ತಳ್ಳುವುದನ್ನು ತೀವ್ರವಾಗಿ ಹಿಮ್ಮೆಟ್ಟಿಸಿದ ಚಳುವಳಿಯ ಮುಂದುವರಿಕೆಯಾಗಿ ನಮ್ಮ ಜೇವರ್ಗಿಯ ಕೊಂಡಗೂಳಿ ಗ್ರಾಮದ ಮಹಿಳೆಯರು ಮಾಡಿದ್ದಾರೆ. ಹೀಗೆ ಬುದ್ದ ಬಸವ ಅಂಬೇಡ್ಕರ ಪರಂಪರೆಯನ್ನು ಜನತೆಯು ಅತ್ಯಂತ ಧೀರೋದ್ದಾತಿಕೆಯಿಂದ ಮುಂದುವರೆಸಿದ್ದಾರೆ. ವಿವೇಕವುಳ್ಳವರು ಇಂತಹ ಚಳುವಳಿಗೆ ಬೆಂಬಲಿಸಬೇಕಿದೆ.

ಲೇಖಕಿ ನೀಲ.ಕೆ ಅವರ ಫೇಸ್‌ಬುಕ್‌ ವಾಲ್‌ನಿಂದ

Leave a Reply

Your email address will not be published.

Social Media Auto Publish Powered By : XYZScripts.com